}

ಮತದಾರರ ಹೆಸರು ಅಳಿಸುವ ಯತ್ನದ ಆರೋಪ: ಬೂತ್ ಏಜೆಂಟ್‌ಗಳ ವಿರುದ್ಧದ ಎಫ್‌ಐಆರ್‌ಗೆ ಹೈಕೋರ್ಟ್ ತಡೆ

Prajwal amin
By -
0

 


ಬೆಂಗಳೂರು: ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಸಂದರ್ಭದಲ್ಲಿ ಸುಳ್ಳು ಮಾಹಿತಿ ನೀಡಿ, ಪಟ್ಟಿಯಿಂದ ಹೆಸರುಗಳನ್ನು ಅಳಿಸಿಹಾಕಲು ಯತ್ನಿಸಿದ ಆರೋಪದಡಿ ದಾಖಲಾಗಿದ್ದ ಎಫ್‌ಐಆರ್‌ಗೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ.


ಕಾಂಗ್ರೆಸ್ ಮುಖಂಡ ಅನೂಪ್ ಅಯ್ಯಂಗಾರ್ ಅವರು ನೀಡಿದ್ದ ದೂರಿನ ಮೇರೆಗೆ ಮಲ್ಲೇಶ್ವರಂನ ಬೂತ್ ಏಜೆಂಟ್‌ಗಳಾದ ವಸಂತಲಕ್ಷ್ಮೀ ಹಾಗೂ ದೀಪಕ್ ಸಿಂಗ್ ವಿರುದ್ಧ ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಎಫ್‌ಐಆರ್ ರದ್ದುಪಡಿಸುವಂತೆ ಕೋರಿ ಆರೋಪಿಗಳು ಹೈಕೋರ್ಟ್ ಮೊರೆಹೋಗಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅನಂತ್ ರಾಮನಾಥ್ ಹೆಗ್ಡೆ ಅವರಿದ್ದ ಪೀಠವು, ಇದೊಂದು ಮೇಲ್ನೋಟಕ್ಕೆ ಆತುರದಿಂದ ದಾಖಲಿಸಿದ ದೂರು ಎಂದು ಅಭಿಪ್ರಾಯಪಟ್ಟು ಎಫ್‌ಐಆರ್‌ಗೆ ತಡೆ ನೀಡಿದೆ.


ವಿಚಾರಣೆ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಅರುಣ್ ಶ್ಯಾಮ್, ಅರ್ಜಿದಾರರು ಬಿಎಲ್‌ಎಗಳಾಗಿ (ಬೂತ್ ಲೆವೆಲ್ ಏಜೆಂಟ್) ಮತದಾರರ ಪಟ್ಟಿಯಿಂದ ಹೆಸರು ಕೈಬಿಡಲು ಫಾರ್ಮ್ 7 ಅರ್ಜಿ ಸಲ್ಲಿಸಿದ್ದಾರೆ. ಆದರೆ ಇದನ್ನು ಕೂಲಂಕಷವಾಗಿ ಪರಿಶೀಲಿಸಿ ಅಂತಿಮ ತೀರ್ಮಾನ ಕೈಗೊಳ್ಳುವ ಅಧಿಕಾರ ಹಾಗೂ ಅವಕಾಶ ಚುನಾವಣಾ ಅಧಿಕಾರಿಗಳಿಗಿದೆ ಎಂದು ಪೀಠದ ಗಮನಕ್ಕೆ ತಂದರು.


ಇದಕ್ಕೆ ಸರ್ಕಾರದ ಹೆಚ್ಚುವರಿ ವಿಶೇಷ ಅಭಿಯೋಜಕ ಅನೂಪ್ ಕುಮಾರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ನಿಯಮದ ಪ್ರಕಾರ 50 ಅರ್ಜಿಗಳನ್ನು ಮಾತ್ರ ಸಲ್ಲಿಸಲು ಅವಕಾಶವಿದೆ. ಆದರೆ ಆರೋಪಿಗಳು ದುರುದ್ದೇಶಪೂರ್ವಕವಾಗಿಯೇ 778 ಫಾರ್ಮ್-7 ಅರ್ಜಿಗಳನ್ನು ಸಲ್ಲಿಸುವ ಮೂಲಕ ನಿರ್ದಿಷ್ಟ ಮತದಾರರನ್ನು ಪಟ್ಟಿಯಿಂದ ಡಿಲೀಟ್ ಮಾಡಲು ಯತ್ನಿಸಿದ್ದಾರೆ ಎಂದು ವಾದಿಸಿದರು.


ಉಭಯ ಕಡೆಗಳ ವಾದ ಆಲಿಸಿದ ನ್ಯಾಯಮೂರ್ತಿಗಳು ಸರ್ಕಾರದ ಪರ ವಕೀಲರಿಗೆ ಹಲವು ಪ್ರಶ್ನೆಗಳನ್ನು ಮುಂದಿಟ್ಟರು. 50ಕ್ಕಿಂತ ಹೆಚ್ಚು ಅರ್ಜಿ ಸಲ್ಲಿಸಿದರೆ ಅದು ಯಾವ ಕಾಯ್ದೆಯಡಿ ಅಪರಾಧವಾಗುತ್ತದೆ? ಫಾರ್ಮ್-7 ಸಲ್ಲಿಕೆಯಾದ ತಕ್ಷಣ ಹೆಸರು ಡಿಲೀಟ್ ಆಗುವುದಿಲ್ಲ, ಆ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಾರಲ್ಲವೇ? ಒಂದು ವೇಳೆ ತಪ್ಪು ಅರ್ಜಿ ಸಲ್ಲಿಕೆಯಾಗಿದ್ದರೆ ಅಧಿಕಾರಿಗಳೇ ಆ ಬಗ್ಗೆ ತೀರ್ಮಾನ ಕೈಗೊಳ್ಳುತ್ತಾರಲ್ಲವೇ? ಮತ್ತು ಹೆಸರು ತೆಗೆದುಹಾಕುವ ಮುನ್ನ ಸಂಬಂಧಪಟ್ಟ ವ್ಯಕ್ತಿಗಳಿಗೆ ನೋಟಿಸ್ ನೀಡುವುದಿಲ್ಲವೇ ಎಂದು ನ್ಯಾಯಾಲಯ ಪ್ರಶ್ನಿಸಿತು.


ಯಾವ ಮತದಾರರು ಯಾರಿಗೆ ಮತ ಹಾಕುತ್ತಾರೆ ಎಂಬುದು ಯಾರಿಗೂ ತಿಳಿಯುವುದಿಲ್ಲ. ಹೀಗಿರುವಾಗ ಇದೊಂದು ಆತುರದ ದೂರಿನಂತೆ ಕಾಣುತ್ತಿದೆ ಎಂದು ಗಮನಸೆಳೆದ ನ್ಯಾಯಪೀಠವು, ಪ್ರಕರಣದ ಮುಂದಿನ ವಿಚಾರಣೆಯವರೆಗೆ ಎಫ್‌ಐಆರ್‌ಗೆ ಮಧ್ಯಂತರ ತಡೆ ನೀಡಿ ಆದೇಶ ಹೊರಡಿಸಿದೆ.

About the Author

PRAJWAL prajwal covers Karnataka news, politics, education, employment, sports, technology, and current affairs. He is committed to providing accurate, timely, and reliable information through responsible digital journalism.

📢 SUDDI LIVE WhatsApp Community

ತಾಜಾ ಸುದ್ದಿಗಳು, ಬ್ರೇಕಿಂಗ್ ನ್ಯೂಸ್, ರಾಜಕೀಯ, ಕ್ರೀಡೆ, ಮನರಂಜನೆ ಹಾಗೂ ಸ್ಥಳೀಯ ಸುದ್ದಿಗಳಿಗಾಗಿ SUDDI LIVE WhatsApp Community ಸೇರಿ.

📲 Join WhatsApp Community

📢 SUDDI LIVE Facebook Page

ತಾಜಾ ಸುದ್ದಿಗಳು, ಬ್ರೇಕಿಂಗ್ ನ್ಯೂಸ್, ರಾಜಕೀಯ, ಕ್ರೀಡೆ, ಮನರಂಜನೆ ಹಾಗೂ ಸ್ಥಳೀಯ ಸುದ್ದಿಗಳಿಗಾಗಿ SUDDI LIVE Facebook ಪೇಜ್ ಅನ್ನು Follow ಮಾಡಿ.

👍 Follow SUDDI LIVE

ನಿಮ್ಮ ಬೆಂಬಲವೇ ನಮ್ಮ ಶಕ್ತಿ ❤️

Tags:

Post a Comment

0 Comments

Post a Comment (0)
3/related/default