ಪುಂಜಾಲಕಟ್ಟೆ, ಆಗಸ್ಟ್ 17: ಮನೆಯಲ್ಲಿ ಒಬ್ಬಂಟಿಯಾಗಿದ್ದ 82 ವರ್ಷದ ಅಜ್ಜಿಯ ಕೈಯಲ್ಲಿದ್ದ ಚಿನ್ನದ ಬಳೆಗಳನ್ನು ಬಲವಂತವಾಗಿ ಕಸಿದು ಪರಾರಿಯಾಗಿದ್ದ ಪ್ರಕರಣವನ್ನು ಪುಂಜಾಲಕಟ್ಟೆ ಪೊಲೀಸರು ಭೇದಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಅಜ್ಜಿಯ ಸ್ವಂತ ಮೊಮ್ಮಗನನ್ನೇ ಪೊಲೀಸರು ಬಂಧಿಸಿದ್ದು, ಆತನಿಂದ ಸುಮಾರು ₹5 ಲಕ್ಷ ಮೌಲ್ಯದ 40 ಗ್ರಾಂ ತೂಕದ ಎರಡು ಚಿನ್ನದ ಬಳೆಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಟ್ವಾಳ ತಾಲೂಕಿನ ತೆಂಕಕಜೆಕಾರು ನಿವಾಸಿ ಶಬೀರ್ (33) ಬಂಧಿತ ಆರೋಪಿ.
ತೆಂಕಕಜೆಕಾರು ಉದ್ದದ ಗುಡ್ಡೆ ನಿವಾಸಿ ಸಾದಿಕ್ ಅವರ ತಾಯಿ ಅವ್ವಮ್ಮ (82) ಅವರು ಆಗಸ್ಟ್ 14ರಂದು ಮನೆಯಲ್ಲಿ ಒಬ್ಬಂಟಿಯಾಗಿದ್ದರು. ಈ ವೇಳೆ ಮುಖಕ್ಕೆ ಬಟ್ಟೆ ಧರಿಸಿಕೊಂಡು ಬಂದಿದ್ದ ಅಪರಿಚಿತ ವ್ಯಕ್ತಿಯೊಬ್ಬರು ಅಜ್ಜಿಯ ಎರಡೂ ಕೈಗಳಲ್ಲಿದ್ದ ಚಿನ್ನದ ಬಳೆಗಳನ್ನು ಬಲವಂತವಾಗಿ ಎಳೆದುಕೊಂಡು ಪರಾರಿಯಾಗಿದ್ದರು. ಈ ಸಂದರ್ಭದಲ್ಲಿ ಅವ್ವಮ್ಮ ಅವರ ಕೈಗೆ ರಕ್ತಗಾಯವಾಗಿತ್ತು.
ಘಟನೆ ಕುರಿತು ಸಾದಿಕ್ ನೀಡಿದ ದೂರಿನ ಆಧಾರದ ಮೇಲೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ BNS ಕಾಯ್ದೆಯಡಿ ಅ.ಕ್ರ. 70/2026ರಂತೆ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ಆರಂಭಿಸಿದ ಪೊಲೀಸರಿಗೆ ತನಿಖೆಯ ವೇಳೆ ಅಚ್ಚರಿಯ ಮಾಹಿತಿ ಲಭಿಸಿದ್ದು, ದರೋಡೆ ನಡೆಸಿದ್ದ ವ್ಯಕ್ತಿ ಹೊರಗಿನವನಲ್ಲ, ಅಜ್ಜಿಯ ಸ್ವಂತ ಮೊಮ್ಮಗ ಶಬೀರ್ ಎಂಬುದು ಬೆಳಕಿಗೆ ಬಂದಿದೆ. ಬಳಿಕ ಆಗಸ್ಟ್ 16ರಂದು ಆರೋಪಿಯನ್ನು ಬಂಧಿಸಿದ ಪೊಲೀಸರು, ಆತನಿಂದ ಕಳವು ಮಾಡಲಾಗಿದ್ದ ಎರಡು ಚಿನ್ನದ ಬಳೆಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣದ ಪತ್ತೆಕಾರ್ಯವನ್ನು ಬೆಳ್ತಂಗಡಿ ಪೊಲೀಸ್ ಉಪಾಧೀಕ್ಷಕಿ ಶ್ರೀಮತಿ ರೋಹಿಣಿ ಸಿ.ಕೆ. ಅವರ ನೇತೃತ್ವದಲ್ಲಿ ಬೆಳ್ತಂಗಡಿ ಗ್ರಾಮಾಂತರ ಸಿ.ಪಿ.ಐ ರವಿ ಬಿ.ಎಸ್., ಪುಂಜಾಲಕಟ್ಟೆ ಠಾಣಾ ಪಿ.ಎಸ್.ಐ ರಾಜೇಶ್ ಕೆ.ವಿ. ಹಾಗೂ ಸಿಬ್ಬಂದಿ ಎಎಸ್‌ಐ ಬೆನ್ನಿಚ್ಚನ್, ಪ್ರವೀಣ್ ಮೂರುಗೋಳಿ, ರಾಜೇಶ್, ವಿಜಯ್ ಕುಮಾರ್, ರಾಹುಲ್ ರಾವ್, ನಾಗರಾಜ್, ರಜಿತ್, ಬಸವರಾಜ್ ಮತ್ತು ಸತೀಶ್ ಅವರು ನಡೆಸಿದರು. ಜಿಲ್ಲಾ ತಾಂತ್ರಿಕ ವಿಭಾಗದ ದಿವಾಕರ್ ಹಾಗೂ ಸಂಪತ್ ಅವರು ತನಿಖೆಗೆ ಸಹಕರಿಸಿದರು.
About the Author
Prajwal is the Founder and Editor of Suddilive.com. He covers Karnataka news, politics, education, employment, sports, technology, and current affairs. He is committed to providing accurate, timely, and reliable information through responsible digital journalism.
📢 SUDDI LIVE WhatsApp Community
ತಾಜಾ ಸುದ್ದಿಗಳು, ಬ್ರೇಕಿಂಗ್ ನ್ಯೂಸ್, ರಾಜಕೀಯ, ಕ್ರೀಡೆ, ಮನರಂಜನೆ ಹಾಗೂ ಸ್ಥಳೀಯ ಸುದ್ದಿಗಳಿಗಾಗಿ SUDDI LIVE WhatsApp Community ಸೇರಿ.
📲 Join WhatsApp Community📢 SUDDI LIVE Facebook Page
ತಾಜಾ ಸುದ್ದಿಗಳು, ಬ್ರೇಕಿಂಗ್ ನ್ಯೂಸ್, ರಾಜಕೀಯ, ಕ್ರೀಡೆ, ಮನರಂಜನೆ ಹಾಗೂ ಸ್ಥಳೀಯ ಸುದ್ದಿಗಳಿಗಾಗಿ SUDDI LIVE Facebook ಪೇಜ್ ಅನ್ನು Follow ಮಾಡಿ.
👍 Follow SUDDI LIVEನಿಮ್ಮ ಬೆಂಬಲವೇ ನಮ್ಮ ಶಕ್ತಿ ❤️

