}

ಮಂಗಳೂರು CCB ಕಾರ್ಯಾಚರಣೆ: ಎನ್‌ಸಿಐಬಿ ಅಧಿಕಾರಿ ಎಂದು ವಂಚಿಸುತ್ತಿದ್ದ ಆರೋಪಿ ಸಿಸಿಬಿ ಬಲೆಗೆ

suddilive.com
By -
0

 



ಮಂಗಳೂರು: ರಾಷ್ಟ್ರೀಯ ಅಪರಾಧ ತನಿಖಾ ದಳದ (NCIB) ಹಿರಿಯ ಅಧಿಕಾರಿ ಎಂದು ಸುಳ್ಳು ಪರಿಚಯ ಮಾಡಿಕೊಂಡು, ಹಣಕಾಸು ವಿವಾದಗಳು ಹಾಗೂ ವಂಚನೆ ಪ್ರಕರಣಗಳಲ್ಲಿ ಸಿಲುಕಿದ್ದವರನ್ನು ಗುರಿಯಾಗಿಸಿಕೊಂಡು ಸುಲಿಗೆ ಮತ್ತು ವಂಚನೆ ನಡೆಸುತ್ತಿದ್ದ ಆರೋಪದ ಮೇಲೆ ಕುಖ್ಯಾತ ಆರೋಪಿ ಸ್ಯಾಮ್ ಪೀಟರ್ ಅಲಿಯಾಸ್ ಡ್ಯಾನಿ ತಾರಕನ್ (64)ನನ್ನು ಮಂಗಳೂರು ನಗರ ಸಿಸಿಬಿ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.


ಮೂಲತಃ ಕೇರಳದ ಆಲಪ್ಪುಯ-ಕೊಲ್ಲಂ ನಿವಾಸಿಯಾಗಿರುವ ಸ್ಯಾಮ್ ಪೀಟರ್, ಸದ್ಯ ಉತ್ತರ ಪ್ರದೇಶದ ಲಖನೌನಲ್ಲಿ ವಾಸವಾಗಿದ್ದ. ಈತನ ವಿರುದ್ಧ ವಿವಿಧ ರಾಜ್ಯಗಳಲ್ಲಿ ವಂಚನೆ ಹಾಗೂ ಸುಲಿಗೆಗೆ ಸಂಬಂಧಿಸಿದ ಸುಮಾರು 17 ಪ್ರಕರಣಗಳು ದಾಖಲಾಗಿವೆ.


ಅಧಿಕಾರಿಯಂತೆ ನಟಿಸಿ ಹಣ ವಸೂಲಿ


ಸ್ಯಾಮ್ ಪೀಟರ್ ತನ್ನದೇ ಗ್ಯಾಂಗ್ ಕಟ್ಟಿಕೊಂಡು, ರಾಷ್ಟ್ರೀಯ ತನಿಖಾ ಸಂಸ್ಥೆಗಳ ಅಧಿಕಾರಿಗಳಂತೆ ನಟಿಸುತ್ತಿದ್ದ ಎನ್ನಲಾಗಿದೆ. ಹಣಕಾಸು ವ್ಯವಹಾರಗಳ ವಿವಾದ, ಬ್ಯಾಂಕ್ ವಂಚನೆ ಅಥವಾ ತೆರಿಗೆ ವಂಚನೆ ಪ್ರಕರಣಗಳಲ್ಲಿ ಸಿಲುಕಿದ್ದ ವ್ಯಕ್ತಿಗಳನ್ನು ಸಂಪರ್ಕಿಸಿ, ತಾನು ಪ್ರಭಾವಿ ಉನ್ನತಾಧಿಕಾರಿ ಎಂದು ನಂಬಿಸುತ್ತಿದ್ದ. ಬಳಿಕ ಪ್ರಕರಣದಿಂದ ಪಾರಾಗಲು ಸಹಾಯ ಮಾಡುವುದಾಗಿ ಹೇಳಿ ಅವರಿಂದ ಹಣ ಪಡೆದುಕೊಳ್ಳುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.


ಈ ಸಂಬಂಧ 2019ರ ಆಗಸ್ಟ್ 16ರಂದು ಮಂಗಳೂರಿನ ಪಂಪ್‌ವೆಲ್‌ನ ಲಾಡ್ಜ್‌ವೊಂದರ ಮೇಲೆ ಕದ್ರಿ ಠಾಣೆ ಪೊಲೀಸರು ದಾಳಿ ನಡೆಸಿ ಸ್ಯಾಮ್ ಪೀಟರ್ ಸೇರಿದಂತೆ ಆತನ ಗ್ಯಾಂಗ್‌ನ ಎಂಟು ಮಂದಿಯನ್ನು ಬಂಧಿಸಿದ್ದರು. ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಸ್ಯಾಮ್ ಪೀಟರ್, ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ಕಳೆದ ಮೂರು ವರ್ಷಗಳಿಂದ ತಲೆಮರೆಸಿಕೊಂಡಿದ್ದ.


ಹಲವು ಹೆಸರುಗಳಲ್ಲಿ ವಂಚನೆ


ತನ್ನ ನಿಜವಾದ ಗುರುತು ಪತ್ತೆಯಾಗದಂತೆ ಆರೋಪಿ ವಿವಿಧೆಡೆ ವಿವಿಧ ಹೆಸರುಗಳನ್ನು ಬಳಸಿಕೊಂಡು ವಂಚನೆ ನಡೆಸುತ್ತಿದ್ದ ಎನ್ನಲಾಗಿದೆ. ತನಿಖೆಯ ವೇಳೆ ಆಂಟನಿ, ರಾಹುಲ್ ಪೀಟರ್, ಸ್ಯಾಮ್ ಪೀಟರ್, ರಾಜೇಶ್ ರಾಬಿನ್ಸನ್, ರೀತು ರಿಚರ್ಡ್, ರಾಯ್ ಜೇಕಬ್, ರಾಬಿನ್ ರಿಚರ್ಡ್ಸನ್, ರಾಬಿನ್ ಸನ್, ಆಂಟೋನಿ ಪ್ರಾನ್ಸಿಸ್, ಶಾರೂನ್ ಪ್ರಾನ್ಸಿಸ್ ಮತ್ತು ಡ್ಯಾನಿ ತಾರಕನ್ ಸೇರಿದಂತೆ ಹಲವು ಹೆಸರುಗಳನ್ನು ಬಳಸಿರುವುದು ಬೆಳಕಿಗೆ ಬಂದಿದೆ.


2001ರಿಂದ ಇಂಟರ್‌ಪೋಲ್ ರೆಡ್ ಕಾರ್ನರ್ ನೋಟಿಸ್


ಕುಖ್ಯಾತ ವಂಚಕ ಎಂದು ಗುರುತಿಸಲ್ಪಟ್ಟಿರುವ ಸ್ಯಾಮ್ ಪೀಟರ್ ವಿರುದ್ಧ ‘ರಾಹುಲ್ ಪೀಟರ್’ ಎಂಬ ಹೆಸರಿನಲ್ಲಿ 2001ರಿಂದಲೇ ಇಂಟರ್‌ಪೋಲ್ ರೆಡ್ ಕಾರ್ನರ್ ನೋಟಿಸ್ ಜಾರಿಯಲ್ಲಿದ್ದುದಾಗಿ ಪೊಲೀಸರು ತಿಳಿಸಿದ್ದಾರೆ.


ವಿವಿಧ ರಾಜ್ಯಗಳಲ್ಲಿ 17ಕ್ಕೂ ಹೆಚ್ಚು ಪ್ರಕರಣಗಳು


ಮಂಗಳೂರು ನಗರ ಪೂರ್ವ ಪೊಲೀಸ್ ಠಾಣೆ, ಉಳ್ಳಾಲ, ಕೊಣಾಜೆ ಸೇರಿದಂತೆ ಕರ್ನಾಟಕದ ವಿವಿಧ ಪೊಲೀಸ್ ಠಾಣೆಗಳಲ್ಲಿ ಹಾಗೂ ಉಡುಪಿ, ಚಿಕ್ಕಬಳ್ಳಾಪುರ, ಬೆಂಗಳೂರು, ಕುಶಾಲನಗರ ಸೇರಿದಂತೆ ಹಲವು ಪ್ರದೇಶಗಳಲ್ಲಿ ಈತನ ವಿರುದ್ಧ ಪ್ರಕರಣಗಳು ದಾಖಲಾಗಿವೆ. ಕರ್ನಾಟಕದ ಹೊರತಾಗಿ ಬಿಹಾರ, ತಮಿಳುನಾಡು, ಮಹಾರಾಷ್ಟ್ರ, ಉತ್ತರ ಪ್ರದೇಶ, ಛತ್ತೀಸ್‌ಗಢ, ಜಾರ್ಖಂಡ್ ಮತ್ತು ಮಧ್ಯಪ್ರದೇಶದಲ್ಲಿಯೂ ವಂಚನೆ ಹಾಗೂ ಸುಲಿಗೆಗೆ ಸಂಬಂಧಿಸಿದ ಪ್ರಕರಣಗಳಿವೆ.


ಉಳ್ಳಾಲ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿ 17 ಬಾರಿ ಹಾಗೂ ಮಂಗಳೂರು ಪೂರ್ವ ಠಾಣೆಯ ಪ್ರಕರಣದಲ್ಲಿ 14 ಬಾರಿ ವಾರೆಂಟ್ ಜಾರಿಯಾಗಿದ್ದರೂ ಆರೋಪಿ ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ. ಬಳಿಕ ಆತನ ವಿರುದ್ಧ ಪ್ರೊಕ್ಲಮೇಷನ್ (ಉದ್ಘೋಷಣೆ) ಹೊರಡಿಸಲಾಗಿತ್ತು.


ಮೂರು ವರ್ಷಗಳಿಂದ ಪೊಲೀಸರ ಕೈಗೆ ಸಿಗದೆ ತಲೆಮರೆಸಿಕೊಂಡಿದ್ದ ಸ್ಯಾಮ್ ಪೀಟರ್‌ನ ಚಲನವಲನದ ಬಗ್ಗೆ ಮಾಹಿತಿ ಕಲೆಹಾಕಿದ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.


ಬಂಧಿತ ಆರೋಪಿಯನ್ನು ಮುಂದಿನ ಕಾನೂನು ಕ್ರಮಕ್ಕಾಗಿ ಮಂಗಳೂರು ಪೂರ್ವ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.


ಆರೋಪಿಯ ಪತ್ತೆ ಮತ್ತು ಬಂಧನ ಕಾರ್ಯಾಚರಣೆಯಲ್ಲಿ ಮಂಗಳೂರು ನಗರ ಸಿಸಿಬಿ ಘಟಕದ ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.

About the Author

Prajwal is the Founder and Editor of Suddilive.com. He covers Karnataka news, politics, education, employment, sports, technology, and current affairs. He is committed to providing accurate, timely, and reliable information through responsible digital journalism.

📢 SUDDI LIVE WhatsApp Community

ತಾಜಾ ಸುದ್ದಿಗಳು, ಬ್ರೇಕಿಂಗ್ ನ್ಯೂಸ್, ರಾಜಕೀಯ, ಕ್ರೀಡೆ, ಮನರಂಜನೆ ಹಾಗೂ ಸ್ಥಳೀಯ ಸುದ್ದಿಗಳಿಗಾಗಿ SUDDI LIVE WhatsApp Community ಸೇರಿ.

📲 Join WhatsApp Community

📢 SUDDI LIVE Facebook Page

ತಾಜಾ ಸುದ್ದಿಗಳು, ಬ್ರೇಕಿಂಗ್ ನ್ಯೂಸ್, ರಾಜಕೀಯ, ಕ್ರೀಡೆ, ಮನರಂಜನೆ ಹಾಗೂ ಸ್ಥಳೀಯ ಸುದ್ದಿಗಳಿಗಾಗಿ SUDDI LIVE Facebook ಪೇಜ್ ಅನ್ನು Follow ಮಾಡಿ.

👍 Follow SUDDI LIVE

ನಿಮ್ಮ ಬೆಂಬಲವೇ ನಮ್ಮ ಶಕ್ತಿ ❤️

Tags:

Post a Comment

0 Comments

Post a Comment (0)
3/related/default