ಕೋಟ: ಸರ್ಕಾರಿ ಅಕ್ಕಿಯನ್ನು ಅಕ್ರಮವಾಗಿ ಖರೀದಿಸಿ ದಾಸ್ತಾನು ಮಾಡಿರುವುದಾಗಿ ಆರೋಪಿಸಿ ಪ್ರಕರಣ ದಾಖಲಿಸುವುದಾಗಿ ಬೆದರಿಸಿ ಹಣಕ್ಕೆ ಬೇಡಿಕೆ ಇಟ್ಟಿರುವ ಆರೋಪದ ಪ್ರಕರಣ ಕೋಟ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಈ ಸಂಬಂಧ ಕಾಂಗ್ರೆಸ್ ಮುಖಂಡ ನಾಗೇಂದ್ರ ಪುತ್ರನ್, ಸಚಿನ್ ಹಾಗೂ ಪ್ರದೀಪ್ ಅಲಿಯಾಸ್ ಎಸ್‌ಟಿಡಿ ಪ್ರದೀಪ್ ವಿರುದ್ಧ ದೂರು ದಾಖಲಾಗಿದೆ.
ಸಾಸ್ತಾನದ ಗುಜರಿ ವ್ಯಾಪಾರಿ ಜಿ. ಮೊಹಮ್ಮದ್ ನೀಡಿರುವ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ದೂರಿನ ಪ್ರಕಾರ, ಆ.31ರಂದು ಬೆಳಗ್ಗೆ ಸುಮಾರು 11.30ಕ್ಕೆ ಸಚಿನ್ ಎಂಬಾತ ಮೊಹಮ್ಮದ್ ಅವರಿಗೆ ಕರೆ ಮಾಡಿ, ಎರಡು ಚೀಲ ಅಕ್ಕಿಯನ್ನು ಅವರ ಮನೆಯ ಅಂಗಳದಲ್ಲಿ ಇರಿಸಿರುವುದಾಗಿ ತಿಳಿಸಿದ್ದಾನೆ. ಇದಕ್ಕೆ ಮೊಹಮ್ಮದ್ ಅವರು ಕೂಡಲೇ ಮನೆಗೆ ಬರುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ.
ಈ ನಡುವೆ ನಾಗೇಂದ್ರ ಪುತ್ರನ್ ಮೊಹಮ್ಮದ್ ಅವರಿಗೆ ಕರೆ ಮಾಡಿ, ಅವರು ಸರ್ಕಾರಿ ಅಕ್ಕಿಯನ್ನು ಖರೀದಿಸಿ ಅಕ್ರಮವಾಗಿ ದಾಸ್ತಾನು ಮಾಡಿರುವ ವಿಚಾರ ತನಗೆ ತಿಳಿದಿದೆ. ಈ ಬಗ್ಗೆ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಮೊಹಮ್ಮದ್ ಮನೆಗೆ ಬಂದು ಪರಿಶೀಲಿಸಿದಾಗ ಸಚಿನ್ ಆಟೋ ರಿಕ್ಷಾದಲ್ಲಿ, ನಾಗೇಂದ್ರ ಪುತ್ರನ್ ಹಾಗೂ ಪ್ರದೀಪ್ ಬೈಕ್‌ನಲ್ಲಿ ಅಲ್ಲಿಗೆ ಬಂದಿದ್ದರು ಎನ್ನಲಾಗಿದೆ. ನಾಗೇಂದ್ರ ಪುತ್ರನ್ ತಾನು ಸಾಮಾಜಿಕ ಕಾರ್ಯಕರ್ತನಾಗಿದ್ದು, ಸರ್ಕಾರಿ ಅಕ್ಕಿಯ ಚೀಲಗಳನ್ನು ಮನೆಯ ಅಂಗಳದಲ್ಲಿ ಇರಿಸಿರುವ ದೃಶ್ಯವನ್ನು ವಿಡಿಯೋ ಮಾಡಿಕೊಂಡಿರುವುದಾಗಿ ಹೇಳಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ವಿಚಾರದಲ್ಲಿ ದೂರು ದಾಖಲಿಸಿ ಜೈಲಿಗೆ ಕಳುಹಿಸುವುದಾಗಿ ಬೆದರಿಸಿ ಆರೋಪಿಗಳು ಆರಂಭದಲ್ಲಿ ₹2 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಹಣ ನೀಡದಂತೆ ಮನವಿ ಮಾಡಿಕೊಂಡರೂ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊನೆಗೆ ₹1 ಲಕ್ಷ ನೀಡುವಂತೆ ಒತ್ತಾಯಿಸಿದ್ದಾರೆ ಎಂದು ಮೊಹಮ್ಮದ್ ದೂರಿನಲ್ಲಿ ತಿಳಿಸಿದ್ದಾರೆ.
ಹಣ ನೀಡದಿದ್ದರೆ ಜನರನ್ನು ಸೇರಿಸಿ, ತಮ್ಮ ಹುಡುಗರನ್ನು ಕರೆಸಿ ಹಲ್ಲೆ ನಡೆಸುವುದಲ್ಲದೆ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿದ್ದಾರೆ ಎಂಬ ಗಂಭೀರ ಆರೋಪವನ್ನೂ ದೂರಿನಲ್ಲಿ ಮಾಡಲಾಗಿದೆ.
ಮೊದಲ ಆರೋಪಿ ಮಧ್ಯಾಹ್ನ ಸುಮಾರು 2.45ರವರೆಗೂ ಹಣ ನೀಡದೆ ಸ್ಥಳದಿಂದ ತೆರಳುವುದಿಲ್ಲ ಎಂದು ಪಟ್ಟು ಹಿಡಿದಿದ್ದ ಎನ್ನಲಾಗಿದೆ. ಬಳಿಕ ಮೊಹಮ್ಮದ್ ಅವರ ಮಕ್ಕಳು ಸ್ಥಳಕ್ಕೆ ಬಂದಾಗಲೂ ಅವಾಚ್ಯ ಶಬ್ದಗಳಿಂದ ನಿಂದಿಸಿ ಆರೋಪಿಯು ಅಲ್ಲಿಂದ ತೆರಳಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಘಟನೆ ಕುರಿತು ಕೋಟ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ಆರೋಪಗಳ ಬಗ್ಗೆ ಮುಂದಿನ ತನಿಖೆ ನಡೆಸುತ್ತಿದ್ದಾರೆ.
About the Author
Prajwal is the Founder and Editor of Suddilive.com. He covers Karnataka news, politics, education, employment, sports, technology, and current affairs. He is committed to providing accurate, timely, and reliable information through responsible digital journalism.
📢 SUDDI LIVE WhatsApp Community
ತಾಜಾ ಸುದ್ದಿಗಳು, ಬ್ರೇಕಿಂಗ್ ನ್ಯೂಸ್, ರಾಜಕೀಯ, ಕ್ರೀಡೆ, ಮನರಂಜನೆ ಹಾಗೂ ಸ್ಥಳೀಯ ಸುದ್ದಿಗಳಿಗಾಗಿ SUDDI LIVE WhatsApp Community ಸೇರಿ.
📲 Join WhatsApp Community📢 SUDDI LIVE Facebook Page
ತಾಜಾ ಸುದ್ದಿಗಳು, ಬ್ರೇಕಿಂಗ್ ನ್ಯೂಸ್, ರಾಜಕೀಯ, ಕ್ರೀಡೆ, ಮನರಂಜನೆ ಹಾಗೂ ಸ್ಥಳೀಯ ಸುದ್ದಿಗಳಿಗಾಗಿ SUDDI LIVE Facebook ಪೇಜ್ ಅನ್ನು Follow ಮಾಡಿ.
👍 Follow SUDDI LIVEನಿಮ್ಮ ಬೆಂಬಲವೇ ನಮ್ಮ ಶಕ್ತಿ ❤️

