ಉಡುಪಿ: ಕಾಪು ವಿಧಾನಸಭಾ ಕ್ಷೇತ್ರದ ಕರಾವಳಿ ಪ್ರದೇಶದಲ್ಲಿ ನಿರಂತರವಾಗಿ ಉಂಟಾಗುತ್ತಿರುವ ಕಡಲ್ಕೊರೆತ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ₹100 ಕೋಟಿ ವೆಚ್ಚದ ಮಾಸ್ಟರ್ ಪ್ಲಾನ್ ಸಿದ್ಧಪಡಿಸಿ ಸರ್ಕಾರಕ್ಕೆ ಕಳುಹಿಸಲಾಗಿದೆ ಎಂದು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ತಿಳಿಸಿದ್ದಾರೆ.
ಸೋಮವಾರ ಸಂಜೆ ತೀವ್ರ ಕಡಲ್ಕೊರೆತಕ್ಕೆ ಒಳಗಾಗಿರುವ ಮಟ್ಟು ಬೀಚ್ ಪ್ರದೇಶಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದ ಬಳಿಕ ಅವರು ಈ ಕುರಿತು ಪ್ರತಿಕ್ರಿಯಿಸಿದರು.
ಹೆಜಮಾಡಿ, ಪಡುಬಿದ್ರಿ, ಕಾಪು, ಪೊಲಿಪು ಹಾಗೂ ಕಟಪಾಡಿ-ಮಟ್ಟು ಭಾಗಗಳಲ್ಲಿ ಪ್ರತಿವರ್ಷ ಕಡಲ್ಕೊರೆತದ ಸಮಸ್ಯೆ ಎದುರಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕರಾವಳಿಗೆ ಶಾಶ್ವತ ಪರಿಹಾರ ಒದಗಿಸುವ ಯೋಜನೆ ಜಾರಿಗೆ ಉಡುಪಿ ಜಿಲ್ಲಾಧಿಕಾರಿಗಳು ಈಗಾಗಲೇ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ ಎಂದು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಹೇಳಿದರು.
ಮಟ್ಟು ಬೀಚ್ ಪ್ರದೇಶದಲ್ಲಿ ವೈಜ್ಞಾನಿಕ ರೀತಿಯಲ್ಲಿ ಶಾಶ್ವತ ತಡೆಗೋಡೆ ನಿರ್ಮಿಸಬೇಕಿದ್ದು, ತಾತ್ಕಾಲಿಕ ಕ್ರಮಗಳಿಗೆ ಮಾತ್ರ ಸೀಮಿತವಾಗಬಾರದು. ಈ ಭಾಗದಲ್ಲಿ ಶಾಶ್ವತ ತಡೆಗೋಡೆ ನಿರ್ಮಾಣಕ್ಕೆ ₹12 ಕೋಟಿ ಮೊತ್ತದ ಯೋಜನೆಯನ್ನು ಸಲ್ಲಿಸಲಾಗಿದೆ. ಯೋಜನೆಗೆ ಶೀಘ್ರ ಅನುಮೋದನೆ ದೊರೆಯುವಂತೆ ಬೆಂಗಳೂರಿನಲ್ಲಿ ಸಂಬಂಧಪಟ್ಟ ಸಚಿವರು, ಅಧಿಕಾರಿಗಳು ಹಾಗೂ ಮುಖ್ಯಮಂತ್ರಿಯವರ ಗಮನಕ್ಕೆ ತಂದು ಪ್ರಯತ್ನಿಸುವುದಾಗಿ ಅವರು ಹೇಳಿದರು.
ಈ ಹಿಂದೆ ಕೂಡ ಸಚಿವರನ್ನು ಕರಾವಳಿ ಪ್ರದೇಶಕ್ಕೆ ಕರೆತಂದು ಇಲ್ಲಿನ ಸಮಸ್ಯೆಯ ಗಂಭೀರತೆಯನ್ನು ಮನವರಿಕೆ ಮಾಡಿಕೊಡಲು ಪ್ರಯತ್ನಿಸಲಾಗಿದೆ. ಇದೀಗ ಮಟ್ಟು ಪ್ರದೇಶದಲ್ಲಿ ಅಪಾಯದ ಮಟ್ಟ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ತುರ್ತು ಸುರಕ್ಷತಾ ತಡೆಗೋಡೆ ಕಾಮಗಾರಿಯನ್ನು ಕೂಡಲೇ ಆರಂಭಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಶಾಶ್ವತ ಯೋಜನೆಗಳಿಗೆ ಪ್ರಸ್ತಾವನೆ ಸಲ್ಲಿಸಿದರೂ ಆರ್ಥಿಕ ಇಲಾಖೆಯ ಅನುಮೋದನೆ ಹಾಗೂ ಹಣಕಾಸಿನ ಲಭ್ಯತೆ ಪ್ರಮುಖ ಅಂಶವಾಗಿದೆ. ಹಣದ ಕೊರತೆಯ ಕಾರಣದಿಂದ ಹಲವು ಅಭಿವೃದ್ಧಿ ಯೋಜನೆಗಳು ವಿಳಂಬವಾಗುತ್ತಿವೆ. ಶಾಸಕರು ಸಲ್ಲಿಸುವ ಅಭಿವೃದ್ಧಿ ಯೋಜನೆಗಳಿಗೆ ಹಣಕಾಸಿನ ನೆರವು ಯಾವಾಗ ದೊರೆಯಲಿದೆ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲದಿರುವುದು ಸಮಸ್ಯೆಯಾಗಿದೆ ಎಂದು ಅವರು ಹೇಳಿದರು.
ಯಾವುದೇ ಸರ್ಕಾರ ಅಧಿಕಾರದಲ್ಲಿದ್ದರೂ ಜನರಿಂದ ಆಯ್ಕೆಯಾದ ಶಾಸಕರ ಕ್ಷೇತ್ರಗಳ ಅಭಿವೃದ್ಧಿಗೆ ಅಗತ್ಯವಿರುವ ಹಣಕಾಸನ್ನು ತಾರತಮ್ಯವಿಲ್ಲದೆ ಒದಗಿಸಬೇಕಾಗಿದೆ ಎಂದು ಗುರ್ಮೆ ಸುರೇಶ್ ಶೆಟ್ಟಿ ಅಭಿಪ್ರಾಯಪಟ್ಟರು.
ಸೆಪ್ಟೆಂಬರ್ 18ರಂದು ಮಂಗಳೂರಿನಲ್ಲಿ ಮುಖ್ಯಮಂತ್ರಿ ಕರೆದಿರುವ ಕರಾವಳಿ ಸಮಸ್ಯೆ ಮತ್ತು ಅಭಿವೃದ್ಧಿ ಕುರಿತ ಸಭೆಯಲ್ಲೂ ಈ ವಿಷಯವನ್ನು ಪ್ರಸ್ತಾಪಿಸುವುದಾಗಿ ಅವರು ತಿಳಿಸಿದರು. ಕರಾವಳಿಯ ಐವರು ಶಾಸಕರು ಒಗ್ಗೂಡಿ ಕರಾವಳಿ ಪ್ರದೇಶಕ್ಕೆ ಸಿಗಬೇಕಾದ ಹಕ್ಕು ಹಾಗೂ ಅಗತ್ಯ ಅನುದಾನಕ್ಕಾಗಿ ಒತ್ತಾಯಿಸುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಸಹಾಯಕ ಅಭಿಯಂತರ ಪ್ರಶಾಂತ್ ಬಾಂದೇಕರ್, ಕೋಟೆ ಗ್ರಾಮ ಪಂಚಾಯಿತಿಯ ನಿಕಟಪೂರ್ವ ಉಪಾಧ್ಯಕ್ಷ ಯೋಗೀಶ್ ಮಟ್ಟು, ನಿಕಟಪೂರ್ವ ಸದಸ್ಯರಾದ ರಮೇಶ್ ಪೂಜಾರಿ ಹಾಗೂ ನಾಗರಾಜ ಮೆಂಡನ್, ಬಿಜೆಪಿ ಕಾಪು ಮಂಡಲ ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ ರಾವ್ ಮಟ್ಟು, ಕೋಟೆ ಶಕ್ತಿ ಕೇಂದ್ರದ ಹರ್ಷಿತ್ ಪೂಜಾರಿ, ಸಂತೋಷ್, ಸ್ಥಳೀಯರಾದ ಸತ್ಯನಾರಾಯಣ ರಾವ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
About the Author
Prajwal is the Founder and Editor of Suddilive.com. He covers Karnataka news, politics, education, employment, sports, technology, and current affairs. He is committed to providing accurate, timely, and reliable information through responsible digital journalism.
📢 SUDDI LIVE WhatsApp Community
ತಾಜಾ ಸುದ್ದಿಗಳು, ಬ್ರೇಕಿಂಗ್ ನ್ಯೂಸ್, ರಾಜಕೀಯ, ಕ್ರೀಡೆ, ಮನರಂಜನೆ ಹಾಗೂ ಸ್ಥಳೀಯ ಸುದ್ದಿಗಳಿಗಾಗಿ SUDDI LIVE WhatsApp Community ಸೇರಿ.
📲 Join WhatsApp Community📢 SUDDI LIVE Facebook Page
ತಾಜಾ ಸುದ್ದಿಗಳು, ಬ್ರೇಕಿಂಗ್ ನ್ಯೂಸ್, ರಾಜಕೀಯ, ಕ್ರೀಡೆ, ಮನರಂಜನೆ ಹಾಗೂ ಸ್ಥಳೀಯ ಸುದ್ದಿಗಳಿಗಾಗಿ SUDDI LIVE Facebook ಪೇಜ್ ಅನ್ನು Follow ಮಾಡಿ.
👍 Follow SUDDI LIVEನಿಮ್ಮ ಬೆಂಬಲವೇ ನಮ್ಮ ಶಕ್ತಿ ❤️

