}

ದಿಶಾ ಸಾಲಿಯಾನ್ ಪ್ರಕರಣ: 6 ವರ್ಷಗಳ ಬಳಿಕ ಸಿಬಿಐ ತನಿಖೆಗೆ ಮುಂಬೈ ಹೈಕೋರ್ಟ್ ಮಹತ್ವದ ಆದೇಶ

suddilive.com
By -
0

 


ಬಾಲಿವುಡ್ ನಟ ದಿವಂಗತ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ನಿಗೂಢ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದ್ದು, ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿದೆ. ದಿಶಾ ಸಾಲಿಯಾನ್ ಅವರ ಸಾವು ಆತ್ಮಹತ್ಯೆಯಲ್ಲ, ಬದಲಾಗಿ  ಕೊಲೆ ಎಂದು ಅವರ ತಂದೆ ಸತೀಶ್ ಸಾಲಿಯಾನ್ ಅವರು ವ್ಯಕ್ತಪಡಿಸಿದ್ದ ಗಂಭೀರ ಅನುಮಾನಗಳ ಹಿನ್ನೆಲೆಯಲ್ಲಿ ನ್ಯಾಯಾಲಯ ಈ ಆದೇಶ ನೀಡಿದೆ.

ಪ್ರಕರಣದ ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್‌ನ ನ್ಯಾಯಮೂರ್ತಿಗಳಾದ ಸಾರಂಗ್ ಕೋತ್ವಾಲ್ ಮತ್ತು ರಂಜಿತ್‌ಸಿನ್ಹ ರಾಜಾ ಭೋಂಸ್ಲೆ ಅವರನ್ನೊಳಗೊಂಡ ವಿಭಾಗೀಯ ಪೀಠವು, ತಕ್ಷಣವೇ ಎಫ್‌ಐಆರ್ ದಾಖಲಿಸುವಂತೆ ಮತ್ತು ದಿಶಾ ತಂದೆಯ ಹೇಳಿಕೆಯನ್ನು ದಾಖಲಿಸಿಕೊಳ್ಳುವಂತೆ ಸಿಬಿಐಗೆ ಸೂಚಿಸಿದೆ. ಅಲ್ಲದೆ, ಈ ಸೂಕ್ಷ್ಮ ಪ್ರಕರಣದ ತನಿಖೆಯನ್ನು ಸೂಕ್ತ ಅನುಭವವಿರುವ ಹಿರಿಯ ಅಧಿಕಾರಿಗೆ ವಹಿಸುವಂತೆ ನ್ಯಾಯಾಲಯ ನಿರ್ದೇಶನ ನೀಡಿದೆ. ತನಿಖೆ ಪೂರ್ಣಗೊಂಡು ಸಮರ್ಪಕ ಸಾಕ್ಷ್ಯಾಧಾರಗಳೊಂದಿಗೆ ಅಪರಾಧ ಸಾಬೀತಾಗುವವರೆಗೆ ಯಾರನ್ನೂ ಆರೋಪಿ ಎಂದು ಪರಿಗಣಿಸಬಾರದು ಎಂದು ಸ್ಪಷ್ಟಪಡಿಸಿರುವ ಪೀಠವು, ಸಾಲಿಯಾನ್ ಅವರ ಸಾವಿನ ಸುತ್ತಲಿನ ಎಲ್ಲಾ ಆಯಾಮಗಳ ಕುರಿತು ಸಮಗ್ರ ತನಿಖೆ ನಡೆಸುವಂತೆ ತನಿಖಾಧಿಕಾರಿಗೆ ಕಟ್ಟುನಿಟ್ಟಾಗಿ ಸೂಚಿಸಿದೆ. ಒಂದು ವೇಳೆ ಸಿಬಿಐ ತನಿಖೆಯ ನಂತರವೂ ಸೂಕ್ತ ಪ್ರಕರಣ ದಾಖಲಾಗದಿದ್ದರೆ, ತಂದೆ ಸತೀಶ್ ಸಾಲಿಯಾನ್ ಅವರಿಗೆ ಮೇಲ್ಮನವಿ ಸಲ್ಲಿಸಲು ಮುಕ್ತ ಅವಕಾಶವಿದೆ ಎಂದು ನ್ಯಾಯಾಲಯ ತಿಳಿಸಿದೆ.

ಕಳೆದ ವರ್ಷ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ ಸತೀಶ್ ಸಾಲಿಯಾನ್, ತಮ್ಮ ಪುತ್ರಿಯ ಸಾವು ಆತ್ಮಹತ್ಯೆಯಲ್ಲ, ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿದೆ ಎಂದು ಆರೋಪಿಸಿದ್ದರು. ಅಲ್ಲದೆ, ಪ್ರಭಾವಿ ವ್ಯಕ್ತಿಗಳನ್ನು ರಕ್ಷಿಸುವ ಉದ್ದೇಶದಿಂದ ರಾಜಕೀಯ ಪ್ರೇರಿತವಾಗಿ ಸಾಕ್ಷ್ಯಗಳನ್ನು ಮುಚ್ಚಿಹಾಕಲಾಗಿದೆ ಎಂದು ಅವರು ದೂರಿದ್ದರು. ಈ ಪ್ರಕರಣದಲ್ಲಿ ಶಿವಸೇನೆ (ಯುಬಿಟಿ) ನಾಯಕ ಆದಿತ್ಯ ಠಾಕ್ರೆ ಅವರ ಪಾತ್ರದ ಬಗ್ಗೆಯೂ ಅನುಮಾನ ವ್ಯಕ್ತಪಡಿಸಿದ್ದ ಅವರು, ಠಾಕ್ರೆ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ತಮ್ಮ ಅರ್ಜಿಯಲ್ಲಿ ಒತ್ತಾಯಿಸಿದ್ದರು. ಸತೀಶ್ ಸಾಲಿಯಾನ್ ಪರ ವಕೀಲರಾದ ನಿಲೇಶ್ ಓಜಾ ಅವರು ಈ ಹಿಂದಿನ ಪೊಲೀಸ್ ತನಿಖೆಯ ಬಗ್ಗೆ ನ್ಯಾಯಾಲಯದಲ್ಲಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ನ್ಯಾಯಾಲಯದ ಆದೇಶದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಸತೀಶ್ ಸಾಲಿಯಾನ್, ಹೈಕೋರ್ಟ್ ನಿರ್ದೇಶನದಿಂದ ತಮಗೆ ತೀವ್ರ ಸಮಾಧಾನವಾಗಿದೆ ಎಂದು ತಿಳಿಸಿದ್ದಾರೆ.

28 ವರ್ಷದ ದಿಶಾ ಸಾಲಿಯಾನ್ ಅವರು 2020ರ ಜೂನ್ 8ರಂದು ಮುಂಬೈನ ಮಲಾಡ್ ಪ್ರದೇಶದ ವಸತಿ ಸಮುಚ್ಚಯವೊಂದರ 14ನೇ ಮಹಡಿಯಿಂದ ಬಿದ್ದು ಮೃತಪಟ್ಟಿದ್ದರು. ಘಟನೆ ನಡೆದಾಗ ಮುಂಬೈ ಪೊಲೀಸರು ಆಕಸ್ಮಿಕ ಸಾವು (ಎಡಿಆರ್) ಎಂದು ಪ್ರಕರಣ ದಾಖಲಿಸಿಕೊಂಡಿದ್ದರು. ಬಳಿಕ ವಿಚಾರಣೆ ನಡೆಸಿದ್ದ ಪೊಲೀಸರು, ದಿಶಾ ಸಾವು ಒಂದು ಆತ್ಮಹತ್ಯೆ ಎಂದು ತೀರ್ಮಾನಿಸಿ ಕಡತ ಮುಚ್ಚಿದ್ದರು. ಅಚ್ಚರಿಯೆಂದರೆ, ದಿಶಾ ಸಾವನ್ನಪ್ಪಿದ ಕೆಲವೇ ದಿನಗಳಲ್ಲಿ ನಟ ಸುಶಾಂತ್ ಸಿಂಗ್ ರಜಪೂತ್ ಕೂಡ ಬಾಂದ್ರಾದ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದರು. ಈ ಎರಡೂ ಸಾವುಗಳ ನಡುವೆ ಕೊಂಡಿಯಿದೆ ಎಂಬ ಅನುಮಾನಗಳು ದೇಶಾದ್ಯಂತ ತೀವ್ರ ಸಂಚಲನ ಮೂಡಿಸಿದ್ದವು.








About the Author

Prajwal is the Founder and Editor of Suddilive.com. He covers Karnataka news, politics, education, employment, sports, technology, and current affairs. He is committed to providing accurate, timely, and reliable information through responsible digital journalism.

📢 SUDDI LIVE WhatsApp Community

ತಾಜಾ ಸುದ್ದಿಗಳು, ಬ್ರೇಕಿಂಗ್ ನ್ಯೂಸ್, ರಾಜಕೀಯ, ಕ್ರೀಡೆ, ಮನರಂಜನೆ ಹಾಗೂ ಸ್ಥಳೀಯ ಸುದ್ದಿಗಳಿಗಾಗಿ SUDDI LIVE WhatsApp Community ಸೇರಿ.

📲 Join WhatsApp Community

📢 SUDDI LIVE Facebook Page

ತಾಜಾ ಸುದ್ದಿಗಳು, ಬ್ರೇಕಿಂಗ್ ನ್ಯೂಸ್, ರಾಜಕೀಯ, ಕ್ರೀಡೆ, ಮನರಂಜನೆ ಹಾಗೂ ಸ್ಥಳೀಯ ಸುದ್ದಿಗಳಿಗಾಗಿ SUDDI LIVE Facebook ಪೇಜ್ ಅನ್ನು Follow ಮಾಡಿ.

👍 Follow SUDDI LIVE

ನಿಮ್ಮ ಬೆಂಬಲವೇ ನಮ್ಮ ಶಕ್ತಿ ❤️

Post a Comment

0 Comments

Post a Comment (0)
3/related/default