}

ಉಡುಪಿಯಲ್ಲಿ ಮನೆಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು: ಇಬ್ಬರು ಅರೆಸ್ಟ್‌, ₹23.56 ಲಕ್ಷ ಸೊತ್ತು ವಶ

suddilive.com
By -
0

 


ಉಡುಪಿ, ಆ.27: ಉಡುಪಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಮನೆಕಳ್ಳತನ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ ಸುಮಾರು ₹23.56 ಲಕ್ಷ ಮೌಲ್ಯದ ಚಿನ್ನಾಭರಣ, ಬೆಳ್ಳಿ ಆಭರಣ, ವಿದೇಶಿ ಕರೆನ್ಸಿ, ನಗದು ಸೇರಿದಂತೆ ವಿವಿಧ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.


ಬಂಧಿತರನ್ನು ಪೆರಂಪಳ್ಳಿ ಕುಂಜಿಬೆಟ್ಟು ನಿವಾಸಿ ಅರುಣ್ ಎಸ್.ವಿ. (43) ಹಾಗೂ ತೆಂಕನಿಡಿಯೂರು ಗ್ರಾಮದ ಕೌಶೀಕ್ (19) ಎಂದು ಗುರುತಿಸಲಾಗಿದೆ.


ಪುತ್ತೂರು ಗ್ರಾಮದ ಭಗವತಿ ಲೇಔಟ್ ನಿವಾಸಿ ಸನಂ (39) ಅವರು ದುಬೈಯಿಂದ ಊರಿಗೆ ಬಂದಿದ್ದರು. ಪತಿ ವಿದೇಶಕ್ಕೆ ತೆರಳಿದ್ದ ಹಿನ್ನೆಲೆಯಲ್ಲಿ ಆ.8ರಂದು ಸಂಬಂಧಿಕರ ಮನೆಗೆ ತೆರಳಿದ್ದರು. ಆ.11ರಂದು ಬೆಳಗ್ಗೆ 11.30ರ ಸುಮಾರಿಗೆ ಮನೆಗೆ ಮರಳಿದಾಗ ಟೆರೇಸ್‌ನ ಬಾಗಿಲನ್ನು ಆಯುಧ ಬಳಸಿ ಬಲವಂತವಾಗಿ ತೆರೆಯಲಾಗಿರುವುದು ಗಮನಕ್ಕೆ ಬಂದಿದೆ.


ಮನೆಯ ಕಪಾಟಿನ ಡ್ರಾವರ್‌ನಲ್ಲಿದ್ದ 10,000 ಎಇಡಿ ವಿದೇಶಿ ಕರೆನ್ಸಿ ಹಾಗೂ ₹14,000 ನಗದು ಕಳವಾಗಿರುವುದು ಬಳಿಕ ಗೊತ್ತಾಗಿದೆ. ಈ ಕುರಿತು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.


ಪ್ರಕರಣದ ತನಿಖೆ ಹಾಗೂ ಕಳವಾದ ಸೊತ್ತುಗಳ ಪತ್ತೆಗಾಗಿ ಹಿರಿಯ ಪೊಲೀಸ್ ಅಧಿಕಾರಿಗಳ ನಿರ್ದೇಶನದಂತೆ ಉಡುಪಿ ನಗರ ಠಾಣಾ ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್ ಅವರ ಮಾರ್ಗದರ್ಶನದಲ್ಲಿ ಪಿಎಸ್‌ಐ (ತನಿಖೆ) ಪ್ರಕಾಶ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು.


ತನಿಖೆ ಮುಂದುವರಿಸಿದ ಪೊಲೀಸರು ಖಚಿತ ಮಾಹಿತಿ ಆಧರಿಸಿ ಆ.23ರಂದು ಪೆರಂಪಳ್ಳಿ ಸಂತೋಷನಗರದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.


₹23.56 ಲಕ್ಷ ಮೌಲ್ಯದ ಸೊತ್ತು ವಶ


ಬಂಧಿತರಿಂದ 88.400 ಗ್ರಾಂ ಚಿನ್ನಾಭರಣ, 1 ಕೆಜಿ 360 ಗ್ರಾಂ ಬೆಳ್ಳಿ ಆಭರಣ, 1.45 ಗ್ರಾಂ ತೂಕದ ಚಿನ್ನದ ನಾಣ್ಯಗಳು, ವಿದೇಶಿ ಕರೆನ್ಸಿ, ₹33,000 ನಗದು, ಎರಡು ಮೊಬೈಲ್ ಫೋನ್‌ಗಳು, ವಿದೇಶಿ ಕೈಗಡಿಯಾರ, ಆಟೋರಿಕ್ಷಾ ಹಾಗೂ ಕಳವು ಮಾಡಲಾಗಿದ್ದ ಪಲ್ಸರ್ ಬೈಕ್ ಸೇರಿದಂತೆ ವಿವಿಧ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.


ಪೊಲೀಸರ ಪ್ರಕಾರ, ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಅಂದಾಜು ಮೌಲ್ಯ ₹23,56,230.


ಬೀಗ ಹಾಕಿರುವ ಮನೆಗಳೇ ಟಾರ್ಗೆಟ್


ಆರೋಪಿಗಳು ಬೀಗ ಹಾಕಿರುವ ಮನೆಗಳನ್ನು ಗುರುತಿಸಿ ಕಳ್ಳತನ ಮಾಡುತ್ತಿದ್ದರು ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಕಳವು ಮಾಡಿದ್ದ ಪಲ್ಸರ್ ಬೈಕ್‌ನಲ್ಲಿ ಸಂಚರಿಸಿ ಮನೆಗಳನ್ನು ಗುರುತಿಸಿಕೊಂಡ ಬಳಿಕ ಕೃತ್ಯ ಎಸಗುತ್ತಿದ್ದರು ಎನ್ನಲಾಗಿದೆ.


ಇಬ್ಬರು ಆರೋಪಿಗಳ ವಿರುದ್ಧ ಒಟ್ಟು ಐದು ಪ್ರಕರಣಗಳಿಗೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದೆ. ಅವುಗಳಲ್ಲಿ ಉಡುಪಿ ಕೊಡಂಕೂರು ಗ್ರಾಮದ ಶಶಿರೇಖಾ ಅವರ ಮನೆಯಲ್ಲಿ ನಡೆದ ಕಳ್ಳತನ, ಪುತ್ತೂರು ಗ್ರಾಮದ ಭಗವತಿ ಲೇಔಟ್‌ನ ಸನಂ ಅವರ ಮನೆಯಲ್ಲಿ ನಡೆದ ಕಳ್ಳತನ, ಮಲ್ಪೆ ಠಾಣಾ ವ್ಯಾಪ್ತಿಯ ನೇಜಾರು ಮಸೀದಿ ಬಳಿಯ ಗ್ಯಾರೇಜ್‌ನಿಂದ ಸಂದೇಶ್ ಅವರ ಪಲ್ಸರ್ ಬೈಕ್ ಕಳವು ಹಾಗೂ ಕೆಳಾರ್ಕಳಬೆಟ್ಟುವಿನಲ್ಲಿ ತೃಪ್ತಿ ಅವಿನಾಶ್ ಮತ್ತು ರವಿ ಉಪಾಧ್ಯ ಅವರ ಮನೆಗಳಲ್ಲಿ ನಡೆದ ಕಳ್ಳತನ ಪ್ರಕರಣಗಳು ಸೇರಿವೆ.


ಬಂಧಿತರ ಪೈಕಿ ಅರುಣ್ ಆಚಾರಿ ಈ ಹಿಂದೆ ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯ ಪೋಕ್ಸೋ ಪ್ರಕರಣದಲ್ಲಿ ಒಂಬತ್ತು ವರ್ಷಗಳ ಕಾರಾಗೃಹ ಶಿಕ್ಷೆ ಅನುಭವಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. 2025ರ ಜುಲೈನಲ್ಲಿ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಿ ಬಂದಿದ್ದ ಎಂದು ಮಾಹಿತಿ ನೀಡಿದ್ದಾರೆ.


ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್, ಐಪಿಎಸ್ ಅವರ ನಿರ್ದೇಶನದಂತೆ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ್ ನಾಯ್ಕ ಹಾಗೂ ಉಡುಪಿ ಉಪವಿಭಾಗದ ಡಿವೈಎಸ್‌ಪಿ ಬೆಳ್ಳಿಯಪ್ಪ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆದಿದೆ.


ಉಡುಪಿ ನಗರ ಠಾಣಾ ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್ ನೇತೃತ್ವದಲ್ಲಿ ಪಿಎಸ್‌ಐ ಪ್ರಕಾಶ್, ಪ್ರಸನ್ನ ಸಿ., ಜೀವನ್‌ಕುಮಾರ್, ಕೃಷ್ಣದೇವಾಡಿಗ, ಆನಂದ ಗಾಣಿಗ, ಆನಂದ ಎಸ್., ಓಬಳೇಶ್ ಹಾಗೂ ಮಣಿಪಾಲ ಠಾಣೆಯ ಮಲ್ಲಯ್ಯ ಹಿರೇಮಠ್, ಹೇಮಂತ್‌ಕುಮಾರ್ ಸೇರಿದಂತೆ ಪೊಲೀಸ್ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

About the Author

Prajwal is the Founder and Editor of Suddilive.com. He covers Karnataka news, politics, education, employment, sports, technology, and current affairs. He is committed to providing accurate, timely, and reliable information through responsible digital journalism.

📢 SUDDI LIVE WhatsApp Community

ತಾಜಾ ಸುದ್ದಿಗಳು, ಬ್ರೇಕಿಂಗ್ ನ್ಯೂಸ್, ರಾಜಕೀಯ, ಕ್ರೀಡೆ, ಮನರಂಜನೆ ಹಾಗೂ ಸ್ಥಳೀಯ ಸುದ್ದಿಗಳಿಗಾಗಿ SUDDI LIVE WhatsApp Community ಸೇರಿ.

📲 Join WhatsApp Community

📢 SUDDI LIVE Facebook Page

ತಾಜಾ ಸುದ್ದಿಗಳು, ಬ್ರೇಕಿಂಗ್ ನ್ಯೂಸ್, ರಾಜಕೀಯ, ಕ್ರೀಡೆ, ಮನರಂಜನೆ ಹಾಗೂ ಸ್ಥಳೀಯ ಸುದ್ದಿಗಳಿಗಾಗಿ SUDDI LIVE Facebook ಪೇಜ್ ಅನ್ನು Follow ಮಾಡಿ.

👍 Follow SUDDI LIVE

ನಿಮ್ಮ ಬೆಂಬಲವೇ ನಮ್ಮ ಶಕ್ತಿ ❤️

Tags:

Post a Comment

0 Comments

Post a Comment (0)
3/related/default