ಧರ್ಮಸ್ಥಳ ಗ್ರಾಮದ ಬಹುಚರ್ಚಿತ 'ಬುರುಡೆ ಪ್ರಕರಣ'ದ ತನಿಖೆಯಲ್ಲಿ ಈಗ ಅತ್ಯಂತ ಮಹತ್ವದ ಹಾಗೂ ಸ್ಫೋಟಕ ತಿರುವು ಸಿಕ್ಕಿದೆ. ಕ್ಷೇತ್ರಕ್ಕೆ ಮಸಿ ಬಳಿಯಲು ಬರೋಬ್ಬರಿ 200 ಕೋಟಿ ರೂಪಾಯಿಗಳ ಬಜೆಟ್ ಇಟ್ಟುಕೊಂಡು ಬೃಹತ್ ಷಡ್ಯಂತ್ರ ರೂಪಿಸಲಾಗಿತ್ತು ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಈ ಇಡೀ ಸಂಚಿನ ಕುರಿತು ಸಮಗ್ರ ತನಿಖಾ ವರದಿ ಸಲ್ಲಿಕೆಗೆ ಕೋರಿ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಚಿನ್ನ ಸಿ.ಎನ್. (ಚಿನ್ನಯ್ಯ) ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದು, ಇಡೀ ಪ್ರಕರಣಕ್ಕೆ ಹೊಸ ಆಯಾಮ ನೀಡಿದ್ದಾನೆ.
ಹಿರಿಯ ವಕೀಲ ವಿವೇಕ್ ಸುಬ್ಬಾರೆಡ್ಡಿ ಅವರ ಮೂಲಕ ಸಲ್ಲಿಕೆಯಾಗಿರುವ ಈ ಅರ್ಜಿಯನ್ನು ಪುರಸ್ಕರಿಸಿರುವ ಹೈಕೋರ್ಟ್‌ನ ಏಕಸದಸ್ಯ ಪೀಠದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜು ಅವರು, ರಾಜ್ಯ ಸರ್ಕಾರ ಹಾಗೂ ವಿಶೇಷ ತನಿಖಾ ತಂಡಕ್ಕೆ (SIT) ನೋಟಿಸ್ ಜಾರಿ ಮಾಡಿದ್ದಾರೆ. ಅಲ್ಲದೆ, ತನಿಖೆಯ ಸದ್ಯದ ಸ್ಥಿತಿಗತಿಯ ಬಗ್ಗೆ ಸಂಪೂರ್ಣ ಮಾಹಿತಿ ನೀಡುವಂತೆ ಎಸ್‌ಐಟಿಗೆ ಸೂಚಿಸಿ, ವಿಚಾರಣೆಯನ್ನು ಜೂನ್ 29 ಕ್ಕೆ ಮುಂದೂಡಿದ್ದಾರೆ.
ಸೂತ್ರಧಾರರು ಹೊರಗಿದ್ದಾರೆ, ನಾನೊಬ್ಬನೇ ಏಕೆ ಬಲಿಪಶು?
ಚಿನ್ನಯ್ಯ ತಮ್ಮ ಅರ್ಜಿಯಲ್ಲಿ ಇಡೀ ಜಾಲವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದು, ಎಸ್‌ಐಟಿ ತನಿಖೆಯ ಕರ್ತವ್ಯಲೋಪವನ್ನು ಗಂಭೀರವಾಗಿ ಪ್ರಶ್ನಿಸಿದ್ದಾರೆ. ನನ್ನ ಪಾಡಿಗೆ ನಾನಿದ್ದೆ, ಇವರೇ ನನ್ನನ್ನು ಒತ್ತಾಯಪೂರ್ವಕವಾಗಿ ಕರೆತಂದು ಇದರಲ್ಲಿ ಸಿಲುಕಿಸಿದ್ದಾರೆ. ಇಷ್ಟೆಲ್ಲಾ ದೊಡ್ಡ ಮಟ್ಟದ ಪ್ರಭಾವಿಗಳು ಸೇರಿ ಷಡ್ಯಂತ್ರ ಹೆಣೆದಿದ್ದರೂ, ಜೈಲಿಗೆ ಹೋಗಿದ್ದು ಪರಿಶಿಷ್ಟ ಜಾತಿಗೆ ಸೇರಿದ ನಾನೊಬ್ಬನೇ. ಅಸಲಿ ಸೂತ್ರಧಾರರು ಈಗಲೂ ಆರಾಮಾಗಿದ್ದಾರೆ ಎಂದು ಚಿನ್ನಯ್ಯ ತನ್ನ ಅರ್ಜಿಯಲ್ಲಿ ಅಳಲು ತೋಡಿಕೊಂಡಿದ್ದಾನೆ.
ಎಸ್‌ಐಟಿ ವಿಳಂಬ ನೀತಿ
ಎಫ್‌ಐಆರ್ ಸಂಖ್ಯೆ 39/2025 ರ ತನಿಖೆ ಆರಂಭವಾಗಿ ಇಷ್ಟು ದಿನಗಳಾದರೂ ಎಸ್‌ಐಟಿ ಅಂತಿಮ ವರದಿ ಸಲ್ಲಿಸದೆ ವಿಳಂಬ ಮಾಡುತ್ತಿದೆ. ಪ್ರಾಥಮಿಕ ವರದಿಯಲ್ಲಿ ಅಸಲಿ ಆರೋಪಿಗಳ ಹೆಸರುಗಳನ್ನು ಸ್ಪಷ್ಟವಾಗಿ ಉಲ್ಲೇಖಿಸಿದ್ದರೂ, ಅವರ ವಿರುದ್ಧ ಎಸ್‌ಐಟಿ ಯಾವುದೇ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಅರ್ಜಿಯಲ್ಲಿ ಆಕ್ಷೇಪ ವ್ಯಕ್ತಪಡಿಸಲಾಗಿದೆ.
200 ಕೋಟಿ ರೂ. ಬಜೆಟ್ ಮತ್ತು ಕೇರಳದ ಹಣದ ಲಿಂಕ್!
ಈ ಷಡ್ಯಂತ್ರದ ಹಿಂದೆ ಅಂತರರಾಜ್ಯ ಮಟ್ಟದ ಆರ್ಥಿಕ ವಹಿವಾಟು ನಡೆದಿರುವ ಬಗ್ಗೆ ಚಿನ್ನಯ್ಯ ಕೋರ್ಟ್‌ಗೆ ಮಾಹಿತಿ ನೀಡಿದ್ದಾನೆ. ಧರ್ಮಸ್ಥಳದ ವಿರುದ್ಧ ಸುಳ್ಳು ಹಬ್ಬಿಸಲು ಒಟ್ಟು 200 ಕೋಟಿ ರೂಪಾಯಿಗಳ ಬಜೆಟ್ ಸಿದ್ಧವಾಗಿತ್ತು. ಈ ಸಂಚಿನ ಭಾಗವಾಗಿ ನನಗೆ 50 ಲಕ್ಷ ರೂಪಾಯಿ ಕೊಡುವ ಆಮಿಷವನ್ನು ಮಹೇಶ್ ಶೆಟ್ಟಿ ತಿಮರೋಡಿ ಒಡ್ಡಿದ್ದ. ಈ ಷಡ್ಯಂತ್ರಕ್ಕಾಗಿ ಕೇರಳದಿಂದ ಹಣ ಸಂದಾಯವಾಗಿದೆ. ಇದರೊಂದಿಗೆ ಚಿತ್ರದುರ್ಗದ ರಮಾ ನಾಗರಾಜ್ ಎಂಬುವವರೂ ಕೂಡ ಹಣ ನೀಡಿದ್ದಾರೆ. ತಮ್ಮ ಪತ್ನಿಯ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆಯಾಗಿರುವ ಹಾಗೂ ನಗದು ಹಣದ ವಹಿವಾಟಿನ ಸಂಪೂರ್ಣ ವಿವರಗಳನ್ನು ಚಿನ್ನಯ್ಯ ನ್ಯಾಯಾಲಯಕ್ಕೆ ಸಲ್ಲಿಸಿದ್ದಾನೆ.
ನಟ ಪ್ರಕಾಶ್ ರಾಜ್ ಹೆಸರು ಪ್ರಸ್ತಾಪ
ಚಿನ್ನಯ್ಯ ಸಲ್ಲಿಸಿರುವ ರಿಟ್ ಅರ್ಜಿಯಲ್ಲಿ ಪ್ರಭಾವಿ ವ್ಯಕ್ತಿಗಳು ಹಾಗೂ ಯೂಟ್ಯೂಬರ್‌ಗಳ ಹೆಸರುಗಳು ಉಲ್ಲೇಖವಾಗಿರುವುದು ತೀವ್ರ ಸಂಚಲನ ಮೂಡಿಸಿದೆ. ಗಿರೀಶ್ ಮಟ್ಟೆಣ್ಣವರ್ ಹೇಳಿಕೊಟ್ಟಂತೆ ನೀನು ಹೇಳಿಕೆ ಕೊಡು, 29ನೇ ತಾರೀಕು ಬಂದು ನಿನ್ನನ್ನು ಅಪ್ಪಿಕೊಳ್ಳುತ್ತೇನೆ ಎಂದು ನಟ ಪ್ರಕಾಶ್ ರಾಜ್ ಅವರು ತಮಿಳಿನಲ್ಲಿ ತಮಗೆ ಹೇಳಿದ್ದರು ಎಂಬುದಾಗಿ ಚಿನ್ನಯ್ಯ ಅರ್ಜಿಯಲ್ಲಿ ಉಲ್ಲೇಖಿಸಿದ್ದಾನೆ.
ಜೊತೆಗೆ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟೆಣ್ಣವರ್, ವಿಠಲಗೌಡ, ಮತ್ತು ಜಯಂತ್ ಈ ಇಡೀ ಷಡ್ಯಂತ್ರದ ಮುಖ್ಯ ರೂವಾರಿಗಳು ಎಂದು ಹೆಸರಿಸಲಾಗಿದೆ. ಯೂಟ್ಯೂಬರ್‌ಗಳಾದ ಸಮೀರ್ ಎಂ.ಡಿ ಹಾಗೂ ಅಜಯ್ ಅಂಚನ್ ಎಂಬುವವರು ತಮ್ಮ ಸ್ವಾರ್ಥಕ್ಕೆ ಬೇಕಾದ ರೀತಿಯಲ್ಲಿ 30 ರಿಂದ 35 ವೀಡಿಯೋಗಳನ್ನು ಮೊದಲೇ ಮಾಡಿಕೊಂಡಿದ್ದರು. ಅವರು ತೋರಿಸಿದ ಸ್ಥಳಗಳನ್ನೇ ನಾನು ನಂತರ ಎಸ್‌ಐಟಿ ಅಧಿಕಾರಿಗಳಿಗೆ ತೋರಿಸಬೇಕಾಯಿತು ಎಂದು ಚಿನ್ನಯ್ಯ ದೂರಿದ್ದಾರೆ.
ಚಾಕು ತೋರಿಸಿ ಬೆದರಿಕೆ, ಒತ್ತೆಯಾಳಾಗಿಟ್ಟಿದ್ದ ಗ್ಯಾಂಗ್!
ಧರ್ಮಸ್ಥಳದ ಧರ್ಮಾಧಿಕಾರಿಗಳ ವಿರುದ್ಧ ಸುಳ್ಳು ಹೇಳಲು ನನ್ನ ಆತ್ಮಸಾಕ್ಷಿ ಒಪ್ಪಲಿಲ್ಲ. ಆಗ ಮಹೇಶ್ ಶೆಟ್ಟಿ ತಿಮರೋಡಿ ಚಾಕುವಿನಿಂದ ನನ್ನನ್ನು ಕೊಲ್ಲಲು ಬಂದಿದ್ದ. ಹೇಳಿಕೊಟ್ಟಂತೆ ಕೇಳದಿದ್ದರೆ ನಿನ್ನ ಹೆಂಡತಿಯನ್ನು ಕೊಲ್ಲುತ್ತೇವೆ ಎಂದು ಹೆದರಿಸಿದ್ದರು. ಒಂದು ವೇಳೆ ತಪ್ಪು ಹೇಳಿಕೆ ನೀಡಿದರೆ, ಅದೇ ಜಾಗದಲ್ಲಿ ಹೂತು ಹಾಕುವುದಾಗಿ ಗ್ಯಾಂಗ್ ಬೆದರಿಕೆ ಹಾಕಿತ್ತು. ನನ್ನ ಕೈಗೆ ಬುರುಡೆ ಕೊಟ್ಟು ಫೋಟೋ ತೆಗೆಸಿಕೊಂಡಿದ್ದರು. ಸುಜಾತಾ ಭಟ್ ಎಂಬುವವರ ಜೊತೆ ದೆಹಲಿಗೆ ಕರೆದೊಯ್ದು ಕಂಡಕಂಡಲ್ಲಿ ಸಹಿ ಹಾಕಿಸಿಕೊಂಡರು.
ವಕೀಲರ ಕಚೇರಿಯಲ್ಲಿ ಕೂರಿಸಿ ಹೇಗೆ ಹೇಳಿಕೆ ನೀಡಬೇಕೆಂದು ತರಬೇತಿ ನೀಡಲಾಗಿತ್ತು. ನನ್ನನ್ನು ಸಂಪೂರ್ಣವಾಗಿ ಒತ್ತೆಯಾಳುವಿನಂತೆ ಇರಿಸಿಕೊಳ್ಳಲಾಗಿತ್ತು. ನನಗೆ ಹಾಕಲಾಗಿದ್ದ ಮಾಸ್ಕ್‌ನ ಹಿಂದೆ ಹೆಡ್‌ಫೋನ್ ಇರಿಸಲಾಗಿತ್ತು. ಅದರಲ್ಲಿ ಕ್ಷಣಕ್ಷಣಕ್ಕೂ ನಾನು ಏನು ಮಾತನಾಡಬೇಕು ಎಂಬ ಸೂಚನೆಗಳು ಬರುತ್ತಿದ್ದವು. ಈ ಮಾನಸಿಕ ಕಿರುಕುಳ ತಾಳಲಾರದೆ ನಾನು ಒಮ್ಮೆ ಆತ್ಮಹತ್ಯೆಗೂ ಯತ್ನಿಸಿದ್ದೆ ಎಂದು ಚಿನ್ನಯ್ಯ ಕೋರ್ಟ್ ಗೆ ಸಲ್ಲಿಸಿದ ಅರ್ಜಿಯಲ್ಲಿ ಉಲ್ಲೇಖಿಸಿದ್ದಾನೆ.
ತಪ್ಪಿತಸ್ಥರೆಲ್ಲರೂ ಹೊರಗಡೆ ಮುಕ್ತವಾಗಿ ತಿರುಗಾಡುತ್ತಿದ್ದಾರೆ. ಕಾನೂನು ಕ್ರಮ ಜರುಗಿಸುವುದಾದರೆ ಇಡೀ ಷಡ್ಯಂತ್ರ ರೂಪಿಸಿದ ಎಲ್ಲರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಚಿನ್ನಯ್ಯ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾನೆ. ಸದ್ಯ ಹೈಕೋರ್ಟ್ ಸರ್ಕಾರ ಮತ್ತು ಎಸ್‌ಐಟಿಗೆ ನೋಟಿಸ್ ನೀಡಿರುವುದರಿಂದ, ಜೂನ್ 29ರ ಮುಂದಿನ ವಿಚಾರಣೆಯೊಳಗೆ ಎಸ್‌ಐಟಿ ಯಾವ ರೀತಿಯ ವರದಿ ಸಲ್ಲಿಸಲಿದೆ ಮತ್ತು ಈ ಹೈಪ್ರೊಫೈಲ್ ಬುರುಡೆ ಪ್ರಕರಣ ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ.
ವರದಿ: www.suddilive.com
About the Author
Prajwal is the Founder and Editor of Suddilive.com. He covers Karnataka news, politics, education, employment, sports, technology, and current affairs. He is committed to providing accurate, timely, and reliable information through responsible digital journalism.
📢 SUDDI LIVE WhatsApp Community
ತಾಜಾ ಸುದ್ದಿಗಳು, ಬ್ರೇಕಿಂಗ್ ನ್ಯೂಸ್, ರಾಜಕೀಯ, ಕ್ರೀಡೆ, ಮನರಂಜನೆ ಹಾಗೂ ಸ್ಥಳೀಯ ಸುದ್ದಿಗಳಿಗಾಗಿ SUDDI LIVE WhatsApp Community ಸೇರಿ.
📲 Join WhatsApp Community📢 SUDDI LIVE Facebook Page
ತಾಜಾ ಸುದ್ದಿಗಳು, ಬ್ರೇಕಿಂಗ್ ನ್ಯೂಸ್, ರಾಜಕೀಯ, ಕ್ರೀಡೆ, ಮನರಂಜನೆ ಹಾಗೂ ಸ್ಥಳೀಯ ಸುದ್ದಿಗಳಿಗಾಗಿ SUDDI LIVE Facebook ಪೇಜ್ ಅನ್ನು Follow ಮಾಡಿ.
👍 Follow SUDDI LIVEನಿಮ್ಮ ಬೆಂಬಲವೇ ನಮ್ಮ ಶಕ್ತಿ ❤️

