}

ಮುದರಂಗಡಿ ಡೇವಿಡ್ ಡಿಸೋಜಾ ಕೊಲೆ: ಮತ್ತೆ ಮುನ್ನೆಲೆಗೆ ಬಂದ ‘ಹೆಚ್‌ಪಿ’ ಹೆಸರು; ಮುಂಬೈ ಅಂಡರ್‌ವರ್ಲ್ಡ್ ನಂಟಿನ ಶಂಕೆ

suddilive.com
By -
0

 



ಉಡುಪಿ: ಮುದರಂಗಡಿಯಲ್ಲಿ ಉದ್ಯಮಿ ಡೇವಿಡ್ ಡಿಸೋಜಾ ಹತ್ಯೆ ಪ್ರಕರಣದ ತನಿಖೆ ಮುಂದುವರಿದಂತೆ, ಮುಂಬೈ ಅಂಡರ್‌ವರ್ಲ್ಡ್‌ನ ನಂಟಿನ ಆರೋಪವೂ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸರಣಿ ಬಂಧನಗಳು ನಡೆಯುತ್ತಿರುವ ಬೆನ್ನಲ್ಲೇ, ಛೋಟಾ ರಾಜನ್ ಗ್ಯಾಂಗ್‌ನ ನಿಕಟವರ್ತಿಯಾಗಿದ್ದ ಎನ್ನಲಾದ ಗ್ಯಾಂಗ್‌ಸ್ಟರ್ ಹೇಮಂತ್ ಪೂಜಾರಿ (ಹೆಚ್‌ಪಿ) ಹೆಸರು ತನಿಖೆಯಲ್ಲಿ ಕೇಳಿಬಂದಿದೆ.


ಪೊಲೀಸರ ತನಿಖೆಯ ಪ್ರಕಾರ, ಹತ್ಯೆಗೆ ಅಗತ್ಯವಿದ್ದ ಹಣಕಾಸಿನ ನೆರವನ್ನು ಹೇಮಂತ್ ಪೂಜಾರಿಯ ಸಹೋದರ ಕಿಶೋರ್ ಪೂಜಾರಿ ಒದಗಿಸಿದ್ದಾನೆ ಎಂಬ ಆರೋಪವಿದೆ. ಪಡುಬಿದ್ರಿಯ ಯುಪಿಸಿಎಲ್‌ನಲ್ಲಿ ಗುತ್ತಿಗೆ ಪಡೆಯಲು ಕಿಶೋರ್ ಪೂಜಾರಿ ಪ್ರಯತ್ನಿಸಿದ್ದ ಎನ್ನಲಾಗಿದ್ದು, ಆ ಗುತ್ತಿಗೆ ಡೇವಿಡ್ ಡಿಸೋಜಾ ಅವರಿಗೆ ಸಿಕ್ಕಿರುವುದು ವಿವಾದಕ್ಕೆ ಕಾರಣವಾಗಿತ್ತು ಎಂಬುದು ತನಿಖೆಯಲ್ಲಿನ ಪ್ರಮುಖ ಅಂಶವಾಗಿದೆ.


ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಹೇಮಂತ್ ಪೂಜಾರಿ ಹೆಸರಿನಲ್ಲಿ ಎನ್ನಲಾದ ಕೆಲವು ಬೆದರಿಕೆ ಆಡಿಯೋ ಕ್ಲಿಪ್‌ಗಳು ಪೊಲೀಸರ ಕೈಗೆ ಸಿಕ್ಕಿವೆ. ಆಡಿಯೋದಲ್ಲಿರುವ ಧ್ವನಿ ನಿಜವಾಗಿಯೂ ಹೇಮಂತ್ ಪೂಜಾರಿಯದ್ದೇ ಎಂಬುದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.


ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ನೀಡಿರುವ ಮಾಹಿತಿಯಂತೆ, ಯುಪಿಸಿಎಲ್ ಅಧಿಕಾರಿಗಳು ಹಾಗೂ ಡೇವಿಡ್ ಡಿಸೋಜಾ ಅವರಿಗೆ ಕರೆ ಮಾಡಿದ್ದ ವ್ಯಕ್ತಿಯೊಬ್ಬ ತಾನು ಹೇಮಂತ್ ಪೂಜಾರಿ ಎಂದು ಪರಿಚಯಿಸಿಕೊಂಡು, ಗುತ್ತಿಗೆಯನ್ನು ಕಿಶೋರ್ ಪೂಜಾರಿಗೆ ನೀಡುವಂತೆ ಒತ್ತಡ ಹೇರಿದ್ದ ಎನ್ನಲಾಗಿದೆ.


ತನಿಖೆಯಲ್ಲಿ ಹೇಮಂತ್ ಪೂಜಾರಿ ಪ್ರಕರಣದ ಆರೋಪಿಗಳಾದ ಚಿರಾಗ್ ಪೂಜಾರಿ, ಸದಾನಂದ ದೇವಾಡಿಗ ಹಾಗೂ ಶೂಟರ್‌ಗಳೆಂದು ಗುರುತಿಸಲಾಗಿರುವ ರಾಜು, ಅನ್ಮೋಲ್ ರಸ್ತೋಗಿ ಮತ್ತು ಜಿಯಾವುಲ್ ಶೇಖ್ ಅವರೊಂದಿಗೆ ಸಂಪರ್ಕದಲ್ಲಿದ್ದನೆಂಬ ಮಾಹಿತಿಯೂ ಹೊರಬಂದಿದೆ. ಕಾರ್ಯಾಚರಣೆಯ ಸಮನ್ವಯದಲ್ಲೂ ಆತನ ಪಾತ್ರವಿತ್ತು ಎಂಬ ಆರೋಪವನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.


ಮುಂಬೈ ಅಂಡರ್‌ವರ್ಲ್ಡ್‌ನಲ್ಲಿ ‘ಹೆಚ್‌ಪಿ’ ಹೆಸರು


ಮುಂಬೈನಲ್ಲಿ ಹೋಟೆಲ್ ಮಾಲೀಕರ ಹತ್ಯೆ ಹಾಗೂ ಹಫ್ತಾ ವಸೂಲಿಯಲ್ಲಿ ಸಕ್ರಿಯನಾಗಿದ್ದ ಎನ್ನಲಾದ ಹೇಮಂತ್ ಪೂಜಾರಿ, 2011ರಲ್ಲಿ ಬೇಕರಿ ಮಾಲೀಕ ಅಂಗಾರ ಪೂಜಾರಿ ಹತ್ಯೆ ಪ್ರಕರಣದ ಬಳಿಕ ನಾಪತ್ತೆಯಾಗಿದ್ದ. ಬಳಿಕ 2013ರಲ್ಲಿ ಆತ ವಿದೇಶದಲ್ಲಿ ಮೃತಪಟ್ಟಿದ್ದಾನೆ ಎಂಬ ವದಂತಿಗಳೂ ಹರಿದಾಡಿದ್ದವು.


ಸುಮಾರು 11 ವರ್ಷಗಳ ಬಳಿಕ ಮುದರಂಗಡಿ ಕೊಲೆ ಪ್ರಕರಣದ ತನಿಖೆಯಲ್ಲಿ ಹೇಮಂತ್ ಪೂಜಾರಿ ಹೆಸರು ಮತ್ತೆ ಕೇಳಿಬಂದಿರುವುದು ಇದೀಗ ಕುತೂಹಲಕ್ಕೆ ಕಾರಣವಾಗಿದೆ. ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಕರಾವಳಿ ಹಾಗೂ ಮುಂಬೈ ಮೂಲದ ಉದ್ಯಮಿಗಳಲ್ಲೂ ಆತಂಕ ಮೂಡಿದ್ದು, ಮುಂಬೈ ಪೊಲೀಸರು ಕೂಡ ಪ್ರಕರಣದ ಬಗ್ಗೆ ಪ್ರತ್ಯೇಕವಾಗಿ ಮಾಹಿತಿ ಕಲೆಹಾಕುತ್ತಿದ್ದಾರೆ ಎನ್ನಲಾಗಿದೆ.


ಘಾಟ್‌ಕೋಪರ್‌ನಲ್ಲಿ ವೇಟರ್ ಆಗಿ ಕೆಲಸ ಮಾಡುತ್ತಿದ್ದ ಹೇಮಂತ್ ಪೂಜಾರಿ ಬಳಿಕ ಛೋಟಾ ರಾಜನ್ ಗ್ಯಾಂಗ್ ಸೇರಿದ್ದ. ಅಲ್ಲಿಂದ ಪ್ರಮುಖ ಶೂಟರ್ ಆಗಿ ಗುರುತಿಸಿಕೊಂಡಿದ್ದ ಆತ, 2002ರ ವೇಳೆಗೆ ಗ್ಯಾಂಗ್‌ನಿಂದ ಹೊರಬಂದು ಸ್ವಂತ ತಂಡ ಕಟ್ಟಿಕೊಂಡಿದ್ದ ಎನ್ನಲಾಗಿದೆ.


ಸದ್ಯ ಮುದರಂಗಡಿ ಪ್ರಕರಣದಲ್ಲಿ ಲಭ್ಯವಾಗಿರುವ ಆಡಿಯೋ ಕ್ಲಿಪ್‌ಗಳ ಧ್ವನಿ ಹೇಮಂತ್ ಪೂಜಾರಿಯದ್ದೇ ಎಂಬುದು ದೃಢಪಟ್ಟರೆ, ಪ್ರಕರಣದ ತನಿಖೆಗೆ ಮತ್ತೊಂದು ಮಹತ್ವದ ತಿರುವು ಸಿಗಲಿದೆ. ಆದರೆ ಧ್ವನಿಯ ಸತ್ಯಾಸತ್ಯತೆ ಹಾಗೂ ಹೇಮಂತ್ ಪೂಜಾರಿಯ ನಿಜವಾದ ಪಾತ್ರದ ಬಗ್ಗೆ ಪೊಲೀಸರು ಇನ್ನೂ ಅಧಿಕೃತ ದೃಢೀಕರಣ ನೀಡಬೇಕಿದೆ.

About the Author

Prajwal is the Founder and Editor of Suddilive.com. He covers Karnataka news, politics, education, employment, sports, technology, and current affairs. He is committed to providing accurate, timely, and reliable information through responsible digital journalism.

📢 SUDDI LIVE WhatsApp Community

ತಾಜಾ ಸುದ್ದಿಗಳು, ಬ್ರೇಕಿಂಗ್ ನ್ಯೂಸ್, ರಾಜಕೀಯ, ಕ್ರೀಡೆ, ಮನರಂಜನೆ ಹಾಗೂ ಸ್ಥಳೀಯ ಸುದ್ದಿಗಳಿಗಾಗಿ SUDDI LIVE WhatsApp Community ಸೇರಿ.

📲 Join WhatsApp Community

📢 SUDDI LIVE Facebook Page

ತಾಜಾ ಸುದ್ದಿಗಳು, ಬ್ರೇಕಿಂಗ್ ನ್ಯೂಸ್, ರಾಜಕೀಯ, ಕ್ರೀಡೆ, ಮನರಂಜನೆ ಹಾಗೂ ಸ್ಥಳೀಯ ಸುದ್ದಿಗಳಿಗಾಗಿ SUDDI LIVE Facebook ಪೇಜ್ ಅನ್ನು Follow ಮಾಡಿ.

👍 Follow SUDDI LIVE

ನಿಮ್ಮ ಬೆಂಬಲವೇ ನಮ್ಮ ಶಕ್ತಿ ❤️

Tags:

Post a Comment

0 Comments

Post a Comment (0)
3/related/default