ಉಡುಪಿ, ಆಗಸ್ಟ್ 18: ರಾಷ್ಟ್ರೀಯ ಹೆದ್ದಾರಿ 66ರ ಹೆಜಮಾಡಿ ಟೋಲ್ ವ್ಯಾಪ್ತಿಯಲ್ಲಿ ವಾಸಿಸುವ ಸ್ಥಳೀಯರಿಗೆ ಸಾಸ್ತಾನ ಹಾಗೂ ಶಿರೂರು ಟೋಲ್‌ಗಳಲ್ಲಿ ನೀಡುತ್ತಿರುವ ಮಾದರಿಯಲ್ಲೇ ಸುಂಕ ವಿನಾಯಿತಿ ಅಥವಾ ಮಾಸಿಕ ಪಾಸ್ ಸೌಲಭ್ಯ ಕಲ್ಪಿಸುವಂತೆ ಲೋಕೋಪಯೋಗಿ ಇಲಾಖೆಯ ಕಾರ್ಯದರ್ಶಿಗೆ ಶಿಫಾರಸು ಪತ್ರ ಸಲ್ಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ತಿಳಿಸಿದ್ದಾರೆ.
ಮಣಿಪಾಲದ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ರಾಷ್ಟ್ರೀಯ ಹೆದ್ದಾರಿ ಟೋಲ್ ಸುಂಕ ವಸೂಲಿ ಕುರಿತು ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಾಸ್ತಾನ ಮತ್ತು ಶಿರೂರು ಟೋಲ್ ಕೇಂದ್ರಗಳಲ್ಲಿ ಸ್ಥಳೀಯ ವಾಹನಗಳಿಗೆ ಈಗಾಗಲೇ ರಿಯಾಯಿತಿ ನೀಡಲಾಗುತ್ತಿದೆ. ಆದರೆ ಹೆಜಮಾಡಿ ಟೋಲ್ ವ್ಯಾಪ್ತಿಯಲ್ಲಿ ಈ ಸೌಲಭ್ಯ ಸಿಗುತ್ತಿಲ್ಲ ಎಂಬ ದೂರುಗಳು ಸಾರ್ವಜನಿಕರಿಂದ ಕೇಳಿಬರುತ್ತಿವೆ. ಸಾಸ್ತಾನದಲ್ಲಿ ಟೋಲ್‌ನಿಂದ 10 ಕಿ.ಮೀ. ವ್ಯಾಪ್ತಿಯೊಳಗಿನ ಸ್ಥಳೀಯರಿಗೆ ವಿನಾಯಿತಿ ನೀಡಲಾಗುತ್ತಿದ್ದು, ಇದೇ ವ್ಯವಸ್ಥೆಯನ್ನು ಹೆಜಮಾಡಿಯಲ್ಲೂ ಜಾರಿಗೆ ತಂದರೆ ಸ್ಥಳೀಯರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂಬ ಬೇಡಿಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತದಿಂದ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.
ಹೆಜಮಾಡಿ ಟೋಲ್ ಸುತ್ತಮುತ್ತ ವಾಸಿಸುವವರು ತಮ್ಮ ದೈನಂದಿನ ಕೆಲಸ ಕಾರ್ಯಗಳಿಗಾಗಿ ದಿನದಲ್ಲಿ ಹಲವು ಬಾರಿ ಟೋಲ್ ಮೂಲಕ ಸಂಚರಿಸಬೇಕಾಗುತ್ತದೆ. ಪ್ರತಿಬಾರಿಯೂ ಟೋಲ್ ಶುಲ್ಕ ಪಾವತಿಸುವುದು ಸ್ಥಳೀಯರಿಗೆ ಹೊರೆಯಾಗುತ್ತಿದೆ. ಹೀಗಾಗಿ ಟೋಲ್ ಸುತ್ತಮುತ್ತಲಿನ ಸ್ಥಳೀಯ ವಾಹನಗಳಿಗೆ ಹಾಗೂ ನಿಗದಿತ ವ್ಯಾಪ್ತಿಯಲ್ಲಿರುವ ನೋಂದಾಯಿತ ವಾಹನಗಳಿಗೆ ಸುಂಕ ವಿನಾಯಿತಿ ಅಥವಾ ಮಾಸಿಕ ಪಾಸ್ ನೀಡಬೇಕು ಎಂಬ ಬೇಡಿಕೆ ಸಭೆಯಲ್ಲಿ ಕೇಳಿಬಂತು.
ಇದೇ ವೇಳೆ ರಾಷ್ಟ್ರೀಯ ಹೆದ್ದಾರಿ 66ರ ವಿವಿಧ ಭಾಗಗಳಲ್ಲಿ ಸರ್ವಿಸ್ ರಸ್ತೆ ನಿರ್ಮಾಣಕ್ಕೆ ಈಗಾಗಲೇ ಅನುಮತಿ ದೊರೆತಿದ್ದು, ಕಾಮಗಾರಿಗಳನ್ನು ತ್ವರಿತವಾಗಿ ಆರಂಭಿಸಿ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು.
ರಸ್ತೆ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುವಂತೆ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ನಿರ್ದೇಶನ ನೀಡಿದ ಅವರು, ಸರ್ವಿಸ್ ರಸ್ತೆ ನಿರ್ಮಾಣ, ರಸ್ತೆ ರಿಫ್ಲೆಕ್ಟರ್ ಅಳವಡಿಕೆ, ದಾರಿದೀಪಗಳ ವ್ಯವಸ್ಥೆ, ಹೊಂಡ-ಗುಂಡಿಗಳ ದುರಸ್ತಿ, ಒಳಚರಂಡಿ ಕಾಮಗಾರಿ ಹಾಗೂ ಜಂಕ್ಷನ್‌ಗಳಲ್ಲಿ ಸೂಕ್ತ ಸೂಚನಾ ಫಲಕ ಅಳವಡಿಸುವ ಕಾಮಗಾರಿಗಳನ್ನು ಶೀಘ್ರ ಕೈಗೊಳ್ಳಬೇಕು ಎಂದರು. ಇಂತಹ ಸುರಕ್ಷತಾ ಕ್ರಮಗಳಿಂದ ಅಪಘಾತಗಳನ್ನು ನಿಯಂತ್ರಿಸಲು ಸಾಧ್ಯವಾಗಲಿದೆ ಎಂದು ಹೇಳಿದರು.
ಸಭೆಯಲ್ಲಿ ಹೆಜಮಾಡಿ ಟೋಲ್ ವ್ಯಾಪ್ತಿಯ ಸ್ಥಳೀಯರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ತಮ್ಮ ಸಮಸ್ಯೆಗಳನ್ನು ಜಿಲ್ಲಾಡಳಿತದ ಗಮನಕ್ಕೆ ತಂದರು. ಪ್ರತಿದಿನ ಹಲವು ಬಾರಿ ಟೋಲ್ ಮೂಲಕ ಸಂಚರಿಸುವ ಸ್ಥಳೀಯರಿಗೆ ಸಾಸ್ತಾನದಲ್ಲಿ ನೀಡುತ್ತಿರುವ ರೀತಿಯಲ್ಲೇ ವಿನಾಯಿತಿ ಕಲ್ಪಿಸಬೇಕು ಎಂದು ಒತ್ತಾಯಿಸಿದರು. ಇದರ ಜೊತೆಗೆ ಸರ್ವಿಸ್ ರಸ್ತೆ ನಿರ್ಮಾಣ, ರಸ್ತೆ ದೀಪಗಳ ಅಳವಡಿಕೆ ಹಾಗೂ ಟೋಲ್ ಸಿಬ್ಬಂದಿ ಸಾರ್ವಜನಿಕರೊಂದಿಗೆ ಸಂಯಮದಿಂದ ವರ್ತಿಸುವಂತೆ ಕ್ರಮ ಕೈಗೊಳ್ಳಬೇಕು ಎಂಬ ಮನವಿಯನ್ನೂ ಸಲ್ಲಿಸಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್, ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಕಿರಣ್ ಎಸ್., ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಅಬ್ದುಲ್ ಜಾವೇದ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಎಂಜಿನಿಯರ್‌ಗಳು, ಸಾರ್ವಜನಿಕರು ಹಾಗೂ ಇತರರು ಉಪಸ್ಥಿತರಿದ್ದರು.
About the Author
Prajwal is the Founder and Editor of Suddilive.com. He covers Karnataka news, politics, education, employment, sports, technology, and current affairs. He is committed to providing accurate, timely, and reliable information through responsible digital journalism.
📢 SUDDI LIVE WhatsApp Community
ತಾಜಾ ಸುದ್ದಿಗಳು, ಬ್ರೇಕಿಂಗ್ ನ್ಯೂಸ್, ರಾಜಕೀಯ, ಕ್ರೀಡೆ, ಮನರಂಜನೆ ಹಾಗೂ ಸ್ಥಳೀಯ ಸುದ್ದಿಗಳಿಗಾಗಿ SUDDI LIVE WhatsApp Community ಸೇರಿ.
📲 Join WhatsApp Community📢 SUDDI LIVE Facebook Page
ತಾಜಾ ಸುದ್ದಿಗಳು, ಬ್ರೇಕಿಂಗ್ ನ್ಯೂಸ್, ರಾಜಕೀಯ, ಕ್ರೀಡೆ, ಮನರಂಜನೆ ಹಾಗೂ ಸ್ಥಳೀಯ ಸುದ್ದಿಗಳಿಗಾಗಿ SUDDI LIVE Facebook ಪೇಜ್ ಅನ್ನು Follow ಮಾಡಿ.
👍 Follow SUDDI LIVEನಿಮ್ಮ ಬೆಂಬಲವೇ ನಮ್ಮ ಶಕ್ತಿ ❤️

