}

ಕೊಟ್ಟಿಯೂರು ದರ್ಶನಕ್ಕೆ ಬರುವ ಕನ್ನಡಿಗರಿಗೆ ಭರವಸೆ: ಕನ್ನಡದಲ್ಲೇ ಸಂದೇಶ ನೀಡಿದ ಡಿಐಜಿ ಯತೀಶ್ ಚಂದ್ರ

suddilive.com
By -
0

 


ಜೂನ್ 10, ಬೆಂಗಳೂರು: ಕೇರಳದ ಕೊಟ್ಟಿಯೂರು ದೇವಾಲಯದಲ್ಲಿ ಕರ್ನಾಟಕದ ಭಕ್ತರ ಮೇಲೆ ದೌರ್ಜನ್ಯ ನಡೆದಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ, ಭಕ್ತರು ಈ ದೇವಾಲಯಕ್ಕೆ ಭೇಟಿ ನೀಡದಂತೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲಿನ ಆಡಳಿತ ವ್ಯವಸ್ಥೆ ಮತ್ತು ನಿರ್ವಹಣೆಯ ಕುರಿತು ಅಸಮಾಧಾನ ವ್ಯಕ್ತವಾಗಿದೆ. ಈ ವಿವಾದದ ನಡುವೆಯೇ, ಕಣ್ಣೂರು ವಲಯದ ಡಿಐಜಿ ಯತೀಶ್ ಚಂದ್ರ ಅವರು ಕನ್ನಡದಲ್ಲಿಯೇ ಮಾತನಾಡಿ, ಕರ್ನಾಟಕದ ಭಕ್ತರನ್ನು ಆತ್ಮೀಯವಾಗಿ ಸ್ವಾಗತಿಸಿ ಭರವಸೆ ನೀಡಿದ್ದಾರೆ.



ಈ ವಿವಾದದ ಬಳಿಕ, ಕರ್ನಾಟಕದ ಭಕ್ತರ ಅನುಕೂಲಕ್ಕಾಗಿ ಕ್ಷೇತ್ರದಲ್ಲಿ ಕನ್ನಡ ನಾಮಫಲಕಗಳನ್ನು ಅಳವಡಿಸಲಾಗಿದ್ದು, ಡಿಐಜಿ ಯತೀಶ್ ಚಂದ್ರ ಅವರ ಕನ್ನಡ ಭಾಷಣದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ. ವೀಡಿಯೊದಲ್ಲಿ ಮಾತನಾಡಿರುವ ಯತೀಶ್ ಚಂದ್ರ ಅವರು, ಕೊಟ್ಟಿಯೂರು ದೇವಸ್ಥಾನದ ಆಡಳಿತ ಮಂಡಳಿ ಮತ್ತು ಪಂಚಾಯತ್ ವೈಶಾಖ ಮಹೋತ್ಸವಕ್ಕೆ ಅತ್ಯುತ್ತಮ ಸಿದ್ಧತೆಗಳನ್ನು ಮಾಡಿಕೊಂಡಿವೆ ಎಂದು ತಿಳಿಸಿದ್ದಾರೆ. ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ಮೂಲ ಸೌಕರ್ಯಗಳನ್ನು ಕಲ್ಪಿಸಲಾಗಿದೆ ಮತ್ತು ವಾಹನ ನಿಲುಗಡೆಗೆ ವಿಶೇಷ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಅವರು ವಿವರಿಸಿದ್ದಾರೆ. ಕರ್ನಾಟಕದಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವುದರಿಂದ, ದೇವಸ್ಥಾನದ ಆವರಣದಲ್ಲಿ ಕನ್ನಡ ನಾಮಫಲಕಗಳನ್ನು ಅಳವಡಿಸಲಾಗಿದೆ ಹಾಗೂ ಧ್ವನಿವರ್ಧಕದ ಮೂಲಕ ಕನ್ನಡದಲ್ಲಿಯೇ ಪ್ರಕಟಣೆಗಳನ್ನು ಹೊರಡಿಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.



ಪವಿತ್ರವಾದ ಈ ಅರಣ್ಯ ಪ್ರದೇಶಕ್ಕೆ ಬರುವ ಭಕ್ತರು ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದು ಮನವಿ ಮಾಡಿರುವ ಡಿಐಜಿ, ಪ್ಲಾಸ್ಟಿಕ್ ಹಾಗೂ ಬಟ್ಟೆಗಳನ್ನು ಎಲ್ಲೆಂದರಲ್ಲಿ ಬಿಸಾಡದೆ ಸಹಕರಿಸುವಂತೆ ಕೋರಿದ್ದಾರೆ. ಕ್ಯೂನಲ್ಲಿ ಶಿಸ್ತಿನಿಂದ ಬಂದು ದೇವರ ದರ್ಶನ ಪಡೆಯಲು ಭಕ್ತರಿಗೆ ಸೂಚಿಸಿದ್ದು, ಭದ್ರತೆಗೆ ಪೊಲೀಸರು ಸನ್ನದ್ಧರಾಗಿದ್ದೇವೆ ಎಂದು ಭರವಸೆ ನೀಡಿದ್ದಾರೆ. 26 ದಿನಗಳ ಕಾಲ ನಡೆಯಲಿರುವ ಈ ಮಹೋತ್ಸವಕ್ಕೆ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಯಶಸ್ವಿಗೊಳಿಸಬೇಕೆಂದು ಅವರು ವಿನಂತಿಸಿದ್ದಾರೆ.



ಈ ಪ್ರಕರಣದೊಂದಿಗೆ ಸಾರ್ವಜನಿಕರ ಗಮನ ಸೆಳೆದಿರುವ ಯತೀಶ್ ಚಂದ್ರ ಅವರು ಮೂಲತಃ ಕರ್ನಾಟಕದ ದಾವಣಗೆರೆಯವರಾಗಿದ್ದಾರೆ. ಇಂಜಿನಿಯರಿಂಗ್ ಪದವೀಧರರಾಗಿ ಉದ್ಯೋಗದಲ್ಲಿದ್ದರೂ, ಸಮಾಜ ಸೇವೆ ಮಾಡುವ ಉದ್ದೇಶದಿಂದ ಯುಪಿಎಸ್‌ಸಿ ಪರೀಕ್ಷೆ ಬರೆದು ಐಪಿಎಸ್ ಅಧಿಕಾರಿಯಾದವರು. ಈ ಹಿಂದೆ ಪ್ರಧಾನಮಂತ್ರಿಯವರ ಫಿಟ್‌ನೆಸ್ ಚಾಲೆಂಜ್ ಸ್ವೀಕರಿಸಿ ವೈರಲ್ ಆಗಿದ್ದ ಇವರು, 2021ರಲ್ಲಿ ಡೆಪ್ಯುಟೇಶನ್ ಮೇಲೆ ಕರ್ನಾಟಕಕ್ಕೆ ಬಂದು ಬೆಂಗಳೂರಿನಲ್ಲಿ ಡಿಸಿಪಿಯಾಗಿ ಕಾರ್ಯನಿರ್ವಹಿಸಿದ್ದರು. ಕರ್ನಾಟಕದಲ್ಲಿನ ಸೇವೆಯ ಬಳಿಕ ಮರಳಿ ಕೇರಳಕ್ಕೆ ತೆರಳಿ, ಅಲ್ಲಿ ಮಾಹಿತಿ, ಸಂವಹನ ಮತ್ತು ತಂತ್ರಜ್ಞಾನ ವಿಭಾಗದ ಎಸ್ಪಿಯಾಗಿ ಸೇವೆ ಸಲ್ಲಿಸಿದ್ದರು. ಪ್ರಸ್ತುತ ಕಣ್ಣೂರು ರೇಂಜ್ ಡಿಐಜಿಯಾಗಿ ಕಾರ್ಯನಿರ್ವಹಿಸುತ್ತಿರುವ ಅವರು, ಕನ್ನಡಿಗರಿಗೆ ತಮ್ಮ ಮಾತೃಭಾಷೆಯಲ್ಲೇ ಸಂದೇಶ ನೀಡುವ ಮೂಲಕ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.

About the Author

Prajwal is the Founder and Editor of Suddilive.com. He covers Karnataka news, politics, education, employment, sports, technology, and current affairs. He is committed to providing accurate, timely, and reliable information through responsible digital journalism.

📢 SUDDI LIVE WhatsApp Community

ತಾಜಾ ಸುದ್ದಿಗಳು, ಬ್ರೇಕಿಂಗ್ ನ್ಯೂಸ್, ರಾಜಕೀಯ, ಕ್ರೀಡೆ, ಮನರಂಜನೆ ಹಾಗೂ ಸ್ಥಳೀಯ ಸುದ್ದಿಗಳಿಗಾಗಿ SUDDI LIVE WhatsApp Community ಸೇರಿ.

📲 Join WhatsApp Community

📢 SUDDI LIVE Facebook Page

ತಾಜಾ ಸುದ್ದಿಗಳು, ಬ್ರೇಕಿಂಗ್ ನ್ಯೂಸ್, ರಾಜಕೀಯ, ಕ್ರೀಡೆ, ಮನರಂಜನೆ ಹಾಗೂ ಸ್ಥಳೀಯ ಸುದ್ದಿಗಳಿಗಾಗಿ SUDDI LIVE Facebook ಪೇಜ್ ಅನ್ನು Follow ಮಾಡಿ.

👍 Follow SUDDI LIVE

ನಿಮ್ಮ ಬೆಂಬಲವೇ ನಮ್ಮ ಶಕ್ತಿ ❤️

Post a Comment

0 Comments

Post a Comment (0)
3/related/default