ಬೆಳ್ತಂಗಡಿ: ತೀವ್ರ ರಾಜಕೀಯ ಜಿದ್ದಾಜಿದ್ದಿ ಹಾಗೂ ಆಂತರಿಕ ವಲಯದ ಚರ್ಚೆಗಳ ಬೆನ್ನಲ್ಲೇ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ದಕ್ಷಿಣ ಕನ್ನಡ ಜಿಲ್ಲೆಯ ಪರಮ ಪವಿತ್ರ ಪುಣ್ಯಕ್ಷೇತ್ರವಾದ ಧರ್ಮಸ್ಥಳಕ್ಕೆ ಭೇಟಿ ನೀಡಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದಿದ್ದಾರೆ. ಪ್ರಸ್ತುತ ರಾಜಕೀಯ ವಿದ್ಯಮಾನಗಳ ನಡುವೆ ಅವರ ಈ ಭೇಟಿ ಕರಾವಳಿ ಭಾಗದಲ್ಲಿ ಭಾರೀ ಕುತೂಹಲಕ್ಕೆ ಕಾರಣವಾಗಿದೆ.
ಗುರುವಾರ ಸಂಜೆಯೇ ಧರ್ಮಸ್ಥಳಕ್ಕೆ ಆಗಮಿಸಿದ್ದ ಬಿ.ಯುವಿಜಯೇಂದ್ರ ಅವರು ರಾತ್ರಿ ಕ್ಷೇತ್ರದಲ್ಲೇ ವಾಸ್ತವ್ಯ ಹೂಡಿದ್ದರು. ತದನಂತರ ಇಂದು ಶುಕ್ರವಾರ ಬೆಳಗ್ಗೆ ಸುಮಾರು 8 ಗಂಟೆಯ ವೇಳೆಗೆ ದೇವಸ್ಥಾನಕ್ಕೆ ಭೇಟಿ ನೀಡಿ, ಶ್ರೀ ಮಂಜುನಾಥ ಸ್ವಾಮಿ ಹಾಗೂ ಪರಿವಾರ ದೇವರುಗಳ ದರ್ಶನ ಪಡೆದರು. ಈ ವೇಳೆ ಸ್ವಾಮಿಗೆ ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಿದ ಅವರಿಗೆ, ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಮತ್ತು ಕರಾವಳಿ ಭಾಗದ ಪ್ರಮುಖ ಬಿಜೆಪಿ ಶಾಸಕರು ಸಾಥ್ ನೀಡಿದರು.
ಆಣೆ-ಪ್ರಮಾಣದ ವಿವಾದ ಮತ್ತು ಹಿನ್ನೆಲೆ
ಇತ್ತೀಚೆಗೆ ನಡೆದ ಚುನಾವಣೆಯ ಸಂದರ್ಭದಲ್ಲಿ ಪಕ್ಷದಲ್ಲಿ ಅಡ್ಡ ಮತದಾನ (ಕ್ರಾಸ್ ವೋಟಿಂಗ್) ನಡೆದಿದೆ ಎಂಬ ಆರೋಪಗಳು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ತಪ್ಪಿತಸ್ಥರನ್ನು ಪತ್ತೆಹಚ್ಚಲು ಎಲ್ಲಾ ಬಿಜೆಪಿ ಶಾಸಕರು ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸಿ ದೇವರ ಸನ್ನಿಧಿಯಲ್ಲಿ ಆಣೆ-ಪ್ರಮಾಣ ಮಾಡಬೇಕೆಂದು ಬಿ.ವೈ.ವಿಜಯೇಂದ್ರ ಅವರು ಈ ಹಿಂದೆ ಬಹಿರಂಗವಾಗಿ ಹೇಳಿಕೆ ನೀಡಿದ್ದರು. ಆದರೆ, ರಾಜಕೀಯದ ವೈಯಕ್ತಿಕ ಹಾಗೂ ಪಕ್ಷದ ವಿಚಾರಗಳಿಗೆ ಧಾರ್ಮಿಕ ಕ್ಷೇತ್ರಗಳನ್ನು ಎಳೆದು ತರುತ್ತಿರುವುದಕ್ಕೆ ಸ್ವಪಕ್ಷದ ನಾಯಕರಿಂದಲೇ ತೀವ್ರ ವಿರೋಧ ವ್ಯಕ್ತವಾಗಿತ್ತು. ಸಾರ್ವಜನಿಕ ವಲಯದಲ್ಲೂ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ, ಆಣೆ-ಪ್ರಮಾಣ ಮಾಡುವ ತೀರ್ಮಾನವನ್ನು ಅಧಿಕೃತವಾಗಿ ಕೈಬಿಡಲಾಗಿತ್ತು.
ರಾಜಕೀಯ ವಲಯದಲ್ಲಿ ದಟ್ಟವಾದ ಅನುಮಾನಗಳು
ಎಲ್ಲಾ ಶಾಸಕರನ್ನು ಒಟ್ಟಾಗಿ ಕರೆತಂದು ಆಣೆ-ಪ್ರಮಾಣ ಮಾಡಿಸುವ ಪ್ರಕ್ರಿಯೆಯನ್ನು ರದ್ದುಗೊಳಿಸಿದ ಬೆನ್ನಲ್ಲೇ, ಇದೀಗ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಕರಾವಳಿಯ ಆಯ್ದ ಶಾಸಕರೊಂದಿಗೆ ಮಾತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿರುವುದು ಹಲವು ರಾಜಕೀಯ ಚರ್ಚೆಗಳಿಗೆ ಗ್ರಾಸವಾಗಿದೆ.
ಅಡ್ಡ ಮತದಾನದ ವಿಷಯದಲ್ಲಿ ದೇವರ ಸನ್ನಿಧಿಗೆ ಬರುವುದಾಗಿ ಹೇಳಿ ನಂತರ ನಿರ್ಧಾರ ಬದಲಿಸಿದ್ದಕ್ಕೆ ಪ್ರಾಯಶ್ಚಿತ್ತವಾಗಿ ಅಥವಾ ಹರಕೆಯ ರೂಪದಲ್ಲಿ ಅವರು ಮಂಜುನಾಥ ಸ್ವಾಮಿಗೆ ‘ತಪ್ಪು ಕಾಣಿಕೆ’ ಒಪ್ಪಿಸಲು ಬಂದಿದ್ದಾರೆಯೇ ಎಂಬ ಶಂಕೆಗಳು ರಾಜಕೀಯ ಕಾರಿಡಾರ್‌ನಲ್ಲಿ ದಟ್ಟವಾಗಿ ಕೇಳಿಬರುತ್ತಿವೆ. ಒಟ್ಟಿನಲ್ಲಿ ವಿಜಯೇಂದ್ರ ಅವರ ಈ ಧರ್ಮಸ್ಥಳ ಭೇಟಿ ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲನ ಮೂಡಿಸಿರುವುದಂತೂ ಸುಳ್ಳಲ್ಲ.
About the Author
Prajwal is the Founder and Editor of Suddilive.com. He covers Karnataka news, politics, education, employment, sports, technology, and current affairs. He is committed to providing accurate, timely, and reliable information through responsible digital journalism.
📢 SUDDI LIVE WhatsApp Community
ತಾಜಾ ಸುದ್ದಿಗಳು, ಬ್ರೇಕಿಂಗ್ ನ್ಯೂಸ್, ರಾಜಕೀಯ, ಕ್ರೀಡೆ, ಮನರಂಜನೆ ಹಾಗೂ ಸ್ಥಳೀಯ ಸುದ್ದಿಗಳಿಗಾಗಿ SUDDI LIVE WhatsApp Community ಸೇರಿ.
📲 Join WhatsApp Community📢 SUDDI LIVE Facebook Page
ತಾಜಾ ಸುದ್ದಿಗಳು, ಬ್ರೇಕಿಂಗ್ ನ್ಯೂಸ್, ರಾಜಕೀಯ, ಕ್ರೀಡೆ, ಮನರಂಜನೆ ಹಾಗೂ ಸ್ಥಳೀಯ ಸುದ್ದಿಗಳಿಗಾಗಿ SUDDI LIVE Facebook ಪೇಜ್ ಅನ್ನು Follow ಮಾಡಿ.
👍 Follow SUDDI LIVEನಿಮ್ಮ ಬೆಂಬಲವೇ ನಮ್ಮ ಶಕ್ತಿ ❤️

