ಬೆಂಗಳೂರು: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಕರಾಳ ಪರಿಣಾಮ ಇದೀಗ ನೇರವಾಗಿ ಭಾರತದ ಜನಸಾಮಾನ್ಯರ ಬದುಕಿನ ಮೇಲೆ ಬೀಳತೊಡಗಿದೆ. ಇಂಧನ, ಆಹಾರ ಪದಾರ್ಥಗಳು ಮತ್ತು ದೈನಂದಿನ ಅಗತ್ಯ ವಸ್ತುಗಳ ಬೆಲೆ ಏರಿಕೆಯ ಬೆನ್ನಲ್ಲೇ ಈಗ ಜೀವ ರಕ್ಷಕ ಔಷಧಗಳ ದರವೂ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವುದು ಸಾರ್ವಜನಿಕರಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ.
ಕರ್ನಾಟಕ ಫಾರ್ಮಾ ಮೆಡಿಕಲ್ ಅಸೋಸಿಯೇಷನ್ ನೀಡಿರುವ ಮಾಹಿತಿಯ ಪ್ರಕಾರ, ಮಾರುಕಟ್ಟೆಗೆ ಹೊಸದಾಗಿ ಬರುತ್ತಿರುವ ಹಲವು ಔಷಧಗಳ ಬ್ಯಾಚ್‌ಗಳ ಬೆಲೆಯಲ್ಲಿ ಸರಾಸರಿ ಶೇ.15ರಿಂದ 20ರಷ್ಟು ಹೆಚ್ಚಳ ದಾಖಲಾಗಿದೆ. ಇದರಿಂದ ಸಾಮಾನ್ಯ ಜನರು ಮಾತ್ರವಲ್ಲದೆ, ನಿತ್ಯವೂ ಔಷಧಗಳ ಮೇಲೆ ಅವಲಂಬಿತರಾಗಿರುವ ರೋಗಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಯುದ್ಧ ಪರಿಸ್ಥಿತಿಯಿಂದ ಜಾಗತಿಕ ಪೂರೈಕೆ ಸರಪಳಿ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಔಷಧ ತಯಾರಿಕೆಗೆ ಅಗತ್ಯವಾಗಿರುವ ಹಲವು ಪ್ರಮುಖ ಕಚ್ಚಾವಸ್ತುಗಳು ಪೆಟ್ರೋ ಕೆಮಿಕಲ್ಸ್ ಆಧಾರಿತವಾಗಿವೆ. ಆದರೆ ಕಚ್ಚಾ ತೈಲದ ಬೆಲೆ ಏರಿಕೆ, ಸಾಗಣೆ ವೆಚ್ಚದ ಹೆಚ್ಚಳ ಹಾಗೂ ಆಮದು ಪ್ರಕ್ರಿಯೆಯ ವಿಳಂಬದಿಂದಾಗಿ ಫಾರ್ಮಾ ಕಂಪನಿಗಳ ಉತ್ಪಾದನಾ ವೆಚ್ಚ ಗಣನೀಯವಾಗಿ ಹೆಚ್ಚಾಗಿದೆ. ಪರಿಣಾಮವಾಗಿ ಹೊಸದಾಗಿ ಉತ್ಪಾದನೆಯಾಗುತ್ತಿರುವ ಮಾತ್ರೆಗಳು, ಸಿರಪ್‌ಗಳು ಮತ್ತು ಇತರ ಮೆಡಿಕಲ್ ಉತ್ಪನ್ನಗಳ ದರವನ್ನು ಹಂತ ಹಂತವಾಗಿ ಏರಿಸಲಾಗುತ್ತಿದೆ ಎಂದು ತಜ್ಞರು ತಿಳಿಸಿದ್ದಾರೆ.
ಈ ದರ ಏರಿಕೆಯ ಪರಿಣಾಮ ಕೇವಲ ಕೆಲವೇ ಔಷಧಗಳಿಗೆ ಸೀಮಿತವಾಗಿಲ್ಲ. ಜನರು ದಿನನಿತ್ಯ ಬಳಸುವ ಬಿಪಿ ಮಾತ್ರೆಗಳು, ಮಧುಮೇಹದ ಔಷಧಗಳು, ಹೃದಯ ಸಂಬಂಧಿ ಮೆಡಿಸಿನ್‌ಗಳು, ಗ್ಯಾಸ್ಟ್ರಿಕ್ ಟ್ಯಾಬ್ಲೆಟ್‌ಗಳು, ಕೆಮ್ಮಿನ ಸಿರಪ್, ಐರನ್ ಟಾನಿಕ್ ಹಾಗೂ ಸಾಮಾನ್ಯ ಜ್ವರಕ್ಕೆ ಬಳಸುವ ಪ್ಯಾರಾಸಿಟಮಾಲ್ ಸೇರಿದಂತೆ ಸುಮಾರು 600ಕ್ಕೂ ಹೆಚ್ಚು ಅಗತ್ಯ ಔಷಧಗಳ ಬೆಲೆ ಏರಿಕೆಯಾಗಿದೆ. ಆಸ್ಪತ್ರೆ ಮತ್ತು ಮೆಡಿಕಲ್ ಅಂಗಡಿಗಳಿಗೆ ಭೇಟಿ ನೀಡುತ್ತಿರುವ ರೋಗಿಗಳು ಈಗ ಹಿಂದಿನಿಗಿಂತ ಹೆಚ್ಚು ಹಣ ಪಾವತಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ವಿಶೇಷವಾಗಿ ವೃದ್ಧರು, ದೀರ್ಘಕಾಲದ ಕಾಯಿಲೆಗಳಿಂದ ಬಳಲುತ್ತಿರುವವರು ಹಾಗೂ ಮಧ್ಯಮ ವರ್ಗದ ಕುಟುಂಬಗಳು ಈ ಬೆಳವಣಿಗೆಯಿಂದ ಸಂಕಷ್ಟ ಅನುಭವಿಸುತ್ತಿವೆ. ಹಲವಾರು ಕುಟುಂಬಗಳಲ್ಲಿ ತಿಂಗಳಿಗೆ ಸಾವಿರಾರು ರೂಪಾಯಿ ಔಷಧಗಳಿಗೆ ಖರ್ಚಾಗುತ್ತಿದ್ದು, ಈಗಿನ ದರ ಏರಿಕೆ ಅವರ ಆರ್ಥಿಕ ಸ್ಥಿತಿಗೆ ಮತ್ತಷ್ಟು ಹೊರೆ ತಂದಿದೆ. “ಪ್ರತಿದಿನ ಸೇವಿಸಬೇಕಾದ ಔಷಧಗಳ ಬೆಲೆ ಏರಿಕೆಯಿಂದ ಸಾಮಾನ್ಯ ಜನರ ಜೀವನ ನಿರ್ವಹಣೆ ಕಷ್ಟವಾಗುತ್ತಿದೆ” ಎಂದು ಹಲವು ಗ್ರಾಹಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಔಷಧಗಳ ಜೊತೆಗೆ ದೈನಂದಿನ ಬಳಕೆಯ ಕಾಸ್ಮೆಟಿಕ್ಸ್ ಹಾಗೂ ಬೇಬಿ ಕೇರ್ ಉತ್ಪನ್ನಗಳ ದರದಲ್ಲೂ ಏರಿಕೆ ಕಂಡುಬಂದಿದೆ. ಮಕ್ಕಳ ಪೌಡರ್, ಸೋಪ್, ಲೋಷನ್, ಕ್ರೀಮ್, ಶ್ಯಾಂಪು ಸೇರಿದಂತೆ ಅನೇಕ ಉತ್ಪನ್ನಗಳ ಬೆಲೆಗಳು ಹೆಚ್ಚಳವಾಗಿವೆ. ಮಕ್ಕಳ ಆರೈಕೆಗೆ ಬಳಸುವ ಉತ್ಪನ್ನಗಳ ಬೆಲೆ ಏರಿಕೆಯು ಯುವ ಪೋಷಕರಿಗೆ ಹೆಚ್ಚುವರಿ ಹೊರೆ ತಂದಿದೆ. ಅಗತ್ಯ ವಸ್ತುಗಳ ಪಟ್ಟಿಯಲ್ಲಿರುವ ಈ ಉತ್ಪನ್ನಗಳ ದರ ಏರಿಕೆಯಿಂದ ಕುಟುಂಬಗಳ ಮಾಸಿಕ ಬಜೆಟ್ ಸಂಪೂರ್ಣ ಏರುಪೇರಾಗುತ್ತಿದೆ.
ಕರ್ನಾಟಕ ಫಾರ್ಮಾ ಮೆಡಿಕಲ್ ಅಸೋಸಿಯೇಷನ್ ಪ್ರಕಾರ, ಸದ್ಯದ ಪರಿಸ್ಥಿತಿ ಮುಂದಿನ ದಿನಗಳಲ್ಲಿ ಇನ್ನಷ್ಟು ಗಂಭೀರವಾಗುವ ಸಾಧ್ಯತೆಯಿದೆ. ಮಧ್ಯಪ್ರಾಚ್ಯದ ಯುದ್ಧ ಪರಿಸ್ಥಿತಿ ಶಮನಗೊಂಡು ಜಾಗತಿಕ ಮಾರುಕಟ್ಟೆ ಮತ್ತು ಪೂರೈಕೆ ವ್ಯವಸ್ಥೆ ಸಹಜ ಸ್ಥಿತಿಗೆ ಮರಳುವವರೆಗೆ ಔಷಧಗಳ ಬೆಲೆ ಏರಿಕೆಯ ಪ್ರಕ್ರಿಯೆ ಮುಂದುವರಿಯುವ ಸಾಧ್ಯತೆ ಹೆಚ್ಚಿದೆ. ಇದರಿಂದ ಸಾರ್ವಜನಿಕರಲ್ಲಿ ಭವಿಷ್ಯದ ಬಗ್ಗೆ ಆತಂಕ ಮತ್ತಷ್ಟು ಹೆಚ್ಚಾಗಿದೆ.
