ನವದೆಹಲಿ: 2,000 ರೂ.ಗಿಂತ ಹೆಚ್ಚಿನ ಮೊತ್ತದ ಯುಪಿಐ ಪಾವತಿ ಮೇಲೆ ಕೇಂದ್ರ ಸರ್ಕಾರ ವಿಧಿಸಿದ್ದ ಶುಲ್ಕದ ನಿರ್ಧಾರಕ್ಕೆ ತಡೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಹಾಗೂ ನ್ಯಾಯಮೂರ್ತಿಗಳಾದ ಜಾಯ್‌ಮಾಲ್ಯ ಬಾಗ್ಚಿ ಮತ್ತು ವಿ. ಮೋಹನಾ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು, ಈ ಕುರಿತು ನಾಲ್ಕು ವಾರಗಳಲ್ಲಿ ತಮ್ಮ ಆಕ್ಷೇಪಣಾ ಅಫಿಡವಿಟ್ ಸಲ್ಲಿಸುವಂತೆ ಕೇಂದ್ರ ಸರ್ಕಾರ, ಭಾರತೀಯ ರಿಸರ್ವ್ ಬ್ಯಾಂಕ್ಗೆ ಸೂಚನೆ ನೀಡಿದೆ. ಶುಲ್ಕ ವಿಧಿಸುವ ನಿರ್ಧಾರದ ಹಿಂದಿನ ಆಧಾರವನ್ನು ವಿವರಿಸುವ ಅಫಿಡವಿಟ್ ಅನ್ನು ಸಲ್ಲಿಸುವಂತೆ ಸರ್ವೋಚ್ಚ ನ್ಯಾಯಾಲಯವು ಕೇಂದ್ರ ಸರ್ಕಾರಕ್ಕೆ ಕೇಳಿದೆ.
ಕೇಂದ್ರ ಹಣಕಾಸು ಸಚಿವಾಲಯವು ಸೆಪ್ಟೆಂಬರ್ 14 ಮತ್ತು 15 ರಂದು ಹೊರಡಿಸಿದ ಅಧಿಸೂಚನೆಗಳನ್ನು ಪ್ರಶ್ನಿಸಿ ವಕೀಲ ಅಂಜನ್ ದತ್ತಾ ಅವರು ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಇದು ಕಾನೂನಿಗಿಂತ ಹೆಚ್ಚಾಗಿ ತಾಂತ್ರಿಕ ವಿಷಯವಾಗಿದೆ ಎಂದು ಅಭಿಪ್ರಾಯಪಟ್ಟಿತು.
ಕೇಂದ್ರದ ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಎನ್. ವೆಂಕಟರಮಣ ಅವರು, ಯುಪಿಐ ಪಾವತಿ ವ್ಯವಸ್ಥೆಯನ್ನು ಬಳಸುವ ಶೇಕಡಾ 96 ರಷ್ಟು ಜನರಿಗೆ ಈ ಶುಲ್ಕದಿಂದ ವಿನಾಯಿತಿ ಇದೆ ಎಂದು ಪೀಠಕ್ಕೆ ತಿಳಿಸಿದರು. ವಾದಗಳನ್ನು ಆಲಿಸಿದ ಪೀಠವು, ವಿಚಾರಣೆಯನ್ನು ಮುಂದೂಡಿದೆ.
ಸರ್ಕಾರದ ಈ ಹೊಸ ಶುಲ್ಕ ನೀತಿಯನ್ನು ವಿರೋಧಿಸಿ ಅಖಿಲ ಭಾರತ ಮೊಬೈಲ್ ಚಿಲ್ಲರೆ ವ್ಯಾಪಾರಿಗಳ ಸಂಘ (AIMRA) ಅಕ್ಟೋಬರ್ 2, 2026 ರಂದು 'ನೋ ಯುಪಿಐ ಡೇ' (No UPI Day) ಎಂಬ ಪ್ರತಿಭಟನೆಗೆ ಕರೆ ನೀಡಿದೆ. ಗಾಂಧಿ ಜಯಂತಿಯಂದು ದೇಶಾದ್ಯಂತ ಮೊಬೈಲ್ ವ್ಯಾಪಾರಿಗಳು ತಮ್ಮ ಕ್ಯೂಆರ್ ಕೋಡ್‌ಗಳನ್ನು ಕಪ್ಪು ಬಟ್ಟೆಯಿಂದ ಮುಚ್ಚುವ ಮೂಲಕ ಯುಪಿಐ ಪಾವತಿಗಳನ್ನು ಸ್ವೀಕರಿಸದಿರಲು ನಿರ್ಧರಿಸಿದ್ದಾರೆ. ಈ ಶೇ. 0.4 ರಷ್ಟು ಶುಲ್ಕದಿಂದಾಗಿ ಸಣ್ಣ ವ್ಯಾಪಾರಿಗಳಿಗೆ ಪ್ರತಿ ತಿಂಗಳು 2,000 ದಿಂದ 12,000 ರೂ.ಗಳವರೆಗೆ ನಷ್ಟವಾಗಲಿದೆ ಎಂದು ಸಂಘ ಕಳವಳ ವ್ಯಕ್ತಪಡಿಸಿದ್ದು, ಡಿಜಿಟಲ್ ಇಂಡಿಯಾ ಬೆಳೆಯಬೇಕಾದರೆ ಯುಪಿಐ ಪಾವತಿಗಳ ಮೇಲಿನ 'ಶೂನ್ಯ ಎಂಡಿಆರ್' (Zero MDR) ವ್ಯವಸ್ಥೆ ಹಾಗೆಯೇ ಮುಂದುವರಿಯಬೇಕು ಎಂದು ಆಗ್ರಹಿಸಿದೆ.
About the Author
PRAJWAL prajwal covers Karnataka news, politics, education, employment, sports, technology, and current affairs. He is committed to providing accurate, timely, and reliable information through responsible digital journalism.
📢 SUDDI LIVE WhatsApp Community
ತಾಜಾ ಸುದ್ದಿಗಳು, ಬ್ರೇಕಿಂಗ್ ನ್ಯೂಸ್, ರಾಜಕೀಯ, ಕ್ರೀಡೆ, ಮನರಂಜನೆ ಹಾಗೂ ಸ್ಥಳೀಯ ಸುದ್ದಿಗಳಿಗಾಗಿ SUDDI LIVE WhatsApp Community ಸೇರಿ.
📲 Join WhatsApp Community📢 SUDDI LIVE Facebook Page
ತಾಜಾ ಸುದ್ದಿಗಳು, ಬ್ರೇಕಿಂಗ್ ನ್ಯೂಸ್, ರಾಜಕೀಯ, ಕ್ರೀಡೆ, ಮನರಂಜನೆ ಹಾಗೂ ಸ್ಥಳೀಯ ಸುದ್ದಿಗಳಿಗಾಗಿ SUDDI LIVE Facebook ಪೇಜ್ ಅನ್ನು Follow ಮಾಡಿ.
👍 Follow SUDDI LIVEನಿಮ್ಮ ಬೆಂಬಲವೇ ನಮ್ಮ ಶಕ್ತಿ ❤️

