}

ಮಂಗಳೂರು: ರಹಮಾನ್ ಹತ್ಯೆ ಪ್ರಕರಣ: 'ಪೊಲೀಸರ ನೋಟಿಸ್ ನನ್ನ ಕೂದಲಿಗೆ ಸಮ' ಎಂದ ಕಲ್ಲಡ್ಕ ಪ್ರಭಾಕರ್ ಭಟ್, ಬಿ.ಸಿ.ರೋಡ್ ಚಲೋದಲ್ಲಿ ವಜ್ರದೇಹಿ ಸ್ವಾಮೀಜಿ ಗುಡುಗು

Prajwal amin
By -
0


ಮಂಗಳೂರು: ರಹಮಾನ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನೀಡಿರುವ ನೋಟಿಸ್‌ಗೆ ಹಿಂದೂ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, "ಪೊಲೀಸರ ಈ ನೋಟಿಸ್ ನನ್ನ ಒಂದು ಕೂದಲಿಗೆ ಸಮ" ಎಂದು ಗುಡುಗಿದ್ದಾರೆ. ಇಂತಹ ಬೆದರಿಕೆಗಳಿಗೆ ನಾವು ಜಗ್ಗುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಅವರು, ಭರತ್ ಕುಮ್ದೇಲ್ ಅವರೊಂದಿಗೆ  ದೂರವಾಣಿಯಲ್ಲಿ ಮಾತನಾಡಿದ್ದೇನೆಯೇ ಹೊರತು, ಯಾವುದೇ ಕೊಲೆ ಅಥವಾ ಹಲ್ಲೆಗೆ ಪ್ರಚೋದನೆ ನೀಡುವ ಮಾತುಗಳನ್ನಾಡಿಲ್ಲ ಎಂದು ತಿರುಗೇಟು ನೀಡಿದ್ದಾರೆ.


 ತಮ್ಮ ಮಾತುಕತೆಯ ಆಡಿಯೋ ದಾಖಲೆಗಳು ಪೊಲೀಸರ ಬಳಿಯಿದ್ದರೂ, ಕೇವಲ ರಾಜಕೀಯ ಒತ್ತಡಕ್ಕೆ ಮಣಿದು ಈ ರೀತಿಯಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಹೇಳಿದ್ದಾರೆ .ಈಗಾಗಲೇ ತಮ್ಮ ವಿರುದ್ಧ ಹಲವು ಪ್ರಕರಣಗಳಿದ್ದು, ಈ ಹೊಸ ನೋಟಿಸ್‌ಗೆ ಯಾವುದೇ ಅಂಜಿಕೆಯಿಲ್ಲ ಎಂದಿರುವ ಅವರು, ಪ್ರಕರಣದಲ್ಲಿ ಯಾವುದೇ ಪಾತ್ರವಿಲ್ಲದ ಭರತ್ ಸೇರಿದಂತೆ ಇತರರ ವಿರುದ್ಧ ಗೂಂಡಾ ಕಾಯ್ದೆಯಡಿ ಕಠಿಣ ಕ್ರಮ ಕೈಗೊಂಡಿರುವುದನ್ನು ತೀವ್ರವಾಗಿ ಖಂಡಿಸಿದ್ದಾರೆ.


ಭರತ್ ಬಂಧನದ ಬಳಿಕ ಅವರ ಕುಟುಂಬ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ ಎಂದು ಕಳವಳ ವ್ಯಕ್ತಪಡಿಸಿದ ಭಟ್, ಅನಾರೋಗ್ಯ ಪೀಡಿತ ಮಗುವನ್ನು ಆಸ್ಪತ್ರೆಗೆ ಕರೆದೊಯ್ದ ರಿಕ್ಷಾ ಚಾಲಕನ ಮೇಲೂ ಪ್ರಕರಣ ದಾಖಲಿಸಿರುವುದು ಪೊಲೀಸ್ ಇಲಾಖೆಯ ಅತಿರೇಕದ ವರ್ತನೆಗೆ ಸಾಕ್ಷಿಯಾಗಿದೆ ಎಂದಿದ್ದಾರೆ. 


ತಾವು ಎಂದಿಗೂ ಹತ್ಯೆ ಅಥವಾ ಹಿಂಸಾಚಾರವನ್ನು ಬೆಂಬಲಿಸುವುದಿಲ್ಲ, ಆದರೆ ನಿರಪರಾಧಿಗಳನ್ನು ಉದ್ದೇಶಪೂರ್ವಕವಾಗಿ ಪ್ರಕರಣದಲ್ಲಿ ಸಿಲುಕಿಸುವುದನ್ನು ಒಪ್ಪುವುದಿಲ್ಲ ಎಂದು ಹೇಳಿದ್ದಾರೆ.


 ಇನ್ನು ಇದೇ ವೇಳೆ , ಧರ್ಮಸ್ಥಳದ ಸೌಜನ್ಯ ಪ್ರಕರಣದ ಮರುತನಿಖೆಗೆ ರಾಜ್ಯ ಸರ್ಕಾರ ಎಸ್‌ಐಟಿ ರಚಿಸಿರುವುದನ್ನು ಸ್ವಾಗತಿಸಿದ ಅವರು, ಹಾಲಿ ತನಿಖಾ ತಂಡದ ಕೆಲವು ಅಧಿಕಾರಿಗಳ ನಿಷ್ಠೆ ಹಾಗೂ ಕಾರ್ಯವೈಖರಿಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಯಾವುದೇ ರಾಜಕೀಯ ಪ್ರಭಾವಕ್ಕೆ ಒಳಗಾಗದೆ ಸಂಪೂರ್ಣ ಸತ್ಯ ಹೊರಬರಬೇಕಾದರೆ, ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಅವರಂತಹ ದಕ್ಷ ಅಧಿಕಾರಿಗಳನ್ನು ಎಸ್‌ಐಟಿಗೆ ನೇಮಿಸಿದ್ದರೆ ಸಾರ್ವಜನಿಕರಲ್ಲಿ ಹೆಚ್ಚಿನ ವಿಶ್ವಾಸ ಮೂಡುತ್ತಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.



ಬಿ.ಸಿ. ರೋಡ್ ಚಲೋ ಪ್ರತಿಭಟನಾ ಸಭೆಯಲ್ಲಿ ಗುಡುಗಿದ ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ, ಪೊಲೀಸ್ ಅಧಿಕಾರಿಗಳ ಕಾರ್ಯವೈಖರಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಬಂಟ್ವಾಳದಲ್ಲಿ ನಡೆದ ಹತ್ಯೆಯನ್ನು ತಾವು ಅಥವಾ ಹಿಂದೂ ಸಮಾಜ ಸಮರ್ಥಿಸುವುದಿಲ್ಲ, ಆದರೆ ನಿರಪರಾಧಿಗಳ ಮೇಲೆ ದ್ವೇಷಪೂರಿತ ಪ್ರಕರಣಗಳನ್ನು ದಾಖಲಿಸುವುದರ ವಿರುದ್ಧ ಗಟ್ಟಿಯಾಗಿ ಪ್ರತಿಭಟಿಸುವ ಸಮಯ ಬಂದಿದೆ ಎಂದು ಎಚ್ಚರಿಸಿದರು. ಭರತ್ ಕುಮ್ದೇಲ್ ಅವರಿಗೆ ಜಾಮೀನು ಸಿಗದಂತೆ ತಡೆಯುವ ಉದ್ದೇಶದಿಂದಲೇ ಮೊದಲು ಕೋಕಾ ಹಾಗೂ ಇದೀಗ ಗೂಂಡಾ ಕಾಯ್ದೆ ಪ್ರಯೋಗಿಸಿರುವುದನ್ನು ಪ್ರಶ್ನಿಸಿದ ಸ್ವಾಮೀಜಿ, ತಕ್ಷಣವೇ ಆತನ ಮೇಲಿನ ಗೂಂಡಾ ಕಾಯ್ದೆಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ಡಾ. ಕಲ್ಲಡ್ಕ ಪ್ರಭಾಕರ್ ಭಟ್ ಅವರ ಬೆಂಬಲಕ್ಕೆ ವಿಶ್ವ ಹಿಂದೂ ಪರಿಷತ್, ಬಜರಂಗದಳ ಸೇರಿದಂತೆ ಇಡೀ ಹಿಂದೂ ಸಮಾಜವೇ ಬಂಡೆಯಂತೆ ನಿಂತಿದ್ದು, ಅವರಿಗೆ ಕಿರುಕುಳ ನೀಡುವ ಪ್ರಯತ್ನ ಕೈಬಿಡಬೇಕು ಎಂದರು. ಪೊಲೀಸ್ ಅಧಿಕಾರಿಗಳು ಪ್ರಭಾಕರ್ ಭಟ್ ಅವರ ದಿಟ್ಟ ನಿಲುವಿನಿಂದ ಧೈರ್ಯವನ್ನು ಕಲಿಯಬೇಕು ಎಂದು ಚಾಟಿ ಬೀಸಿದ ಸ್ವಾಮೀಜಿ, ಭರತ್ ವಿರುದ್ಧ ಬೆದರಿಕೆ ಅಥವಾ ಹಿಂಸಾತ್ಮಕ ಹೇಳಿಕೆ ನೀಡುವವರ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದರು. ಕಾರ್ಯಕರ್ತರು ಸಂಘಟನೆಗೆ ಬದ್ಧರಾಗಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಿದ ಅವರು, ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಸರ್ಕಾರ ಬದಲಾದಾಗ ಈಗಿನ ಅಧಿಕಾರಿಗಳ ಕ್ರಮಗಳಿಗೂ ತಕ್ಕ ಪರಿಣಾಮ ಎದುರಾಗಬಹುದು ಎಂದು ಎಚ್ಚರಿಕೆ ರವಾನಿಸಿದ್ದಾರೆ.

About the Author

PRAJWAL prajwal covers Karnataka news, politics, education, employment, sports, technology, and current affairs. He is committed to providing accurate, timely, and reliable information through responsible digital journalism.

📢 SUDDI LIVE WhatsApp Community

ತಾಜಾ ಸುದ್ದಿಗಳು, ಬ್ರೇಕಿಂಗ್ ನ್ಯೂಸ್, ರಾಜಕೀಯ, ಕ್ರೀಡೆ, ಮನರಂಜನೆ ಹಾಗೂ ಸ್ಥಳೀಯ ಸುದ್ದಿಗಳಿಗಾಗಿ SUDDI LIVE WhatsApp Community ಸೇರಿ.

📲 Join WhatsApp Community

📢 SUDDI LIVE Facebook Page

ತಾಜಾ ಸುದ್ದಿಗಳು, ಬ್ರೇಕಿಂಗ್ ನ್ಯೂಸ್, ರಾಜಕೀಯ, ಕ್ರೀಡೆ, ಮನರಂಜನೆ ಹಾಗೂ ಸ್ಥಳೀಯ ಸುದ್ದಿಗಳಿಗಾಗಿ SUDDI LIVE Facebook ಪೇಜ್ ಅನ್ನು Follow ಮಾಡಿ.

👍 Follow SUDDI LIVE

ನಿಮ್ಮ ಬೆಂಬಲವೇ ನಮ್ಮ ಶಕ್ತಿ ❤️

Tags:

Post a Comment

0 Comments

Post a Comment (0)
3/related/default