}

ತುರ್ತು ಸೇವೆಯಲ್ಲಿ ಹೊಸ ಮೈಲುಗಲ್ಲು: ಕರ್ನಾಟಕದಿಂದ ಸ್ಮಾರ್ಟ್ ಆಂಬುಲೆನ್ಸ್ ವ್ಯವಸ್ಥೆ

suddilive.com
By -
0


 ಬೆಂಗಳೂರು: “ಒಂದು ಕರೆ ನಮಗೆ, ತುರ್ತು ಸೇವೆ ನಿಮಗೆ” ಎಂಬ ಘೋಷವಾಕ್ಯದಡಿಯಲ್ಲಿ ರಾಜ್ಯದಲ್ಲಿ ಪ್ರಥಮ ಬಾರಿಗೆ ಕರ್ನಾಟಕ ಸರ್ಕಾರದ ಆರೋಗ್ಯ ಇಲಾಖೆ ಮಹತ್ವದ ತುರ್ತು ವೈದ್ಯಕೀಯ ಸೇವಾ ಉನ್ನತೀಕರಣ ಯೋಜನೆಯನ್ನು ಜಾರಿಗೆ ತಂದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬೆಂಬಲ ಹಾಗೂ ಪ್ರೋತ್ಸಾಹದೊಂದಿಗೆ ಈ ಯೋಜನೆ ರೂಪುಗೊಂಡಿದ್ದು, ಅತ್ಯಾಧುನಿಕ ಕಮಾಂಡ್ ಮತ್ತು ಕಂಟ್ರೋಲ್ ರೂಂ ಸ್ಥಾಪನೆಯ ಮೂಲಕ ತುರ್ತು ಆರೋಗ್ಯ ಸೇವೆಯನ್ನು ಇನ್ನಷ್ಟು ವೇಗವಾಗಿ ಮತ್ತು ಪರಿಣಾಮಕಾರಿಯಾಗಿ ಜನರಿಗೆ ತಲುಪಿಸುವ ಗುರಿಯನ್ನು ಹೊಂದಿದೆ.


2008ರಲ್ಲಿ ಜನರ ಅನುಕೂಲಕ್ಕಾಗಿ ಆರಂಭಿಸಲಾದ 108 ಆಂಬುಲೆನ್ಸ್ ಸೇವೆಯನ್ನು ಈವರೆಗೆ ಖಾಸಗಿ ಸಂಸ್ಥೆ ನಿರ್ವಹಿಸುತ್ತಿತ್ತು. ಆದರೆ ಕಾರ್ಯಾಚರಣೆಯಲ್ಲಿ ಹಲವಾರು ಸಮಸ್ಯೆಗಳು ಎದುರಾಗುತ್ತಿದ್ದ ಹಿನ್ನೆಲೆಯಲ್ಲಿ, 2025-26ನೇ ಸಾಲಿನ ಆಯವ್ಯಯ ಭಾಷಣದಲ್ಲಿ ಮುಖ್ಯಮಂತ್ರಿ ಈ ಸೇವೆಯನ್ನು ಉನ್ನತೀಕರಿಸಲಾಗುವುದು ಎಂದು ಘೋಷಿಸಿದ್ದರು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.


ನಂತರ ಸರ್ಕಾರವೇ ಈ ಸೇವೆಯನ್ನು ನೇರವಾಗಿ ನಿರ್ವಹಿಸಬೇಕು ಹಾಗೂ ಅದಕ್ಕೆ ಅತ್ಯಾಧುನಿಕ ತಂತ್ರಜ್ಞಾನ ಆಧಾರಿತ ವ್ಯವಸ್ಥೆಯನ್ನು ಅಳವಡಿಸಬೇಕು ಎಂಬ ತೀರ್ಮಾನಕ್ಕೆ ಬರಲಾಗಿತ್ತು. ಈ ಹಿನ್ನೆಲೆಯಲ್ಲಿ ವಿವಿಧ ದೇಶಗಳ ಮಾದರಿಗಳನ್ನು ಅಧ್ಯಯನ ಮಾಡಲಾಗಿದ್ದು, ವಿಶೇಷವಾಗಿ ಸಿಂಗಪೂರ್ ದೇಶದ ತುರ್ತು ಆರೋಗ್ಯ ಸೇವಾ ವ್ಯವಸ್ಥೆಯನ್ನು ಪರಿಶೀಲಿಸಿ ರಾಜ್ಯದ ಅವಶ್ಯಕತೆಗೆ ತಕ್ಕಂತೆ ರೂಪಾಂತರಗೊಳಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.


ಈ ಯೋಜನೆಯನ್ನು ಮೊದಲಿಗೆ ಚಾಮರಾಜನಗರ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರಲಾಗಿತ್ತು. ಇದರ ಯಶಸ್ಸಿನ ನಂತರ ರಾಜ್ಯಮಟ್ಟದಲ್ಲಿ ವಿಸ್ತರಿಸಲಾಗಿದ್ದು, ಸರ್ಕಾರಿ ಸ್ವಾಮ್ಯದ ಸಿ-ಡಾಕ್ ಸಂಸ್ಥೆಯು ಅಗತ್ಯ ಸಾಫ್ಟ್‌ವೇರ್ ಅಭಿವೃದ್ಧಿಪಡಿಸಿದೆ. ಇದರಿಂದಾಗಿ 24/7 ಕಾರ್ಯನಿರ್ವಹಿಸುವ ಸುಸಜ್ಜಿತ ಕಮಾಂಡ್ ಮತ್ತು ಕಂಟ್ರೋಲ್ ರೂಂ ಸ್ಥಾಪನೆಯಾಗಿದ್ದು, ತುರ್ತು ಸೇವೆಗಳ ಮೇಲ್ವಿಚಾರಣೆ ನಿರಂತರವಾಗಿ ನಡೆಯುತ್ತಿದೆ.


ಹೊಸ ವ್ಯವಸ್ಥೆಯ ಪ್ರಮುಖ ವೈಶಿಷ್ಟ್ಯವಾಗಿ ಆಂಬುಲೆನ್ಸ್ ಟ್ರಾಕಿಂಗ್ ವ್ಯವಸ್ಥೆ ಅಳವಡಿಸಲಾಗಿದೆ. MDT ಸಾಧನದ ಮೂಲಕ ಆಂಬುಲೆನ್ಸ್‌ನಲ್ಲೇ ತುರ್ತು ಸಂದರ್ಭಗಳಲ್ಲಿ ವೈದ್ಯರೊಂದಿಗೆ ನೇರ ಸಂಪರ್ಕ ಸಾಧಿಸಲು ಸಾಧ್ಯವಾಗುತ್ತದೆ. ಜೊತೆಗೆ ಆಸ್ಪತ್ರೆಗಳಿಗೆ ತಕ್ಷಣ ಮಾಹಿತಿ ರವಾನಿಸಿ ಅಗತ್ಯ ಸಿದ್ಧತೆ ಕೈಗೊಳ್ಳುವ ವ್ಯವಸ್ಥೆಯೂ ಇದೆ. ರೋಗಿಯ ಸ್ಥಿತಿಯನ್ನು ಆಧರಿಸಿ ಯಾವ ಆಸ್ಪತ್ರೆಗೆ ಕಳುಹಿಸಬೇಕು ಎಂಬ ನಿರ್ಧಾರವನ್ನು ತ್ವರಿತವಾಗಿ ಕೈಗೊಳ್ಳಲು ಸಹ ಈ ವ್ಯವಸ್ಥೆ ಸಹಕಾರಿಯಾಗಲಿದೆ ಎಂದು ತಿಳಿಸಲಾಗಿದೆ.


ಇದರೊಂದಿಗೆ ಆಂಬುಲೆನ್ಸ್‌ಗಳಲ್ಲಿ ಇಂಧನ ಬಳಕೆಯನ್ನು ಮೇಲ್ವಿಚಾರಣೆ ಮಾಡಲು ಫ್ಯೂಯೆಲ್ ಗೇಜ್ ವ್ಯವಸ್ಥೆಯನ್ನೂ ಅಳವಡಿಸಲಾಗಿದೆ. ರಾಜ್ಯದ ಎಲ್ಲಾ ಆಂಬುಲೆನ್ಸ್‌ಗಳನ್ನು ಈ ಕೇಂದ್ರೀಕೃತ ವ್ಯವಸ್ಥೆಯಡಿ ತರಲಾಗಿದ್ದು, ಟೆಲಿ ಮನಸ್, ಇ-ಸಂಜೀವಿನಿ ಹಾಗೂ ಮಹಿಳಾ ಮತ್ತು ಮಕ್ಕಳ ಸಹಾಯವಾಣಿ ಸೇವೆಗಳನ್ನೂ ಇದರೊಂದಿಗೆ ಏಕೀಕರಿಸಲಾಗಿದೆ. ಇದರಿಂದ ಸಾರ್ವಜನಿಕ ಆರೋಗ್ಯ ಸೇವೆಗಳ ಸಮನ್ವಯ ಮತ್ತು ತುರ್ತು ಪ್ರತಿಕ್ರಿಯೆ ಮತ್ತಷ್ಟು ಬಲಪಡಲಿದೆ.


ಈ ಸಂದರ್ಭದಲ್ಲಿ ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್, ಶಾಸಕರಾದ ಸುರೇಶ್ ಕುಮಾರ್ ಮತ್ತು ಪ್ರಿಯಾಕೃಷ್ಣ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಾರ್ಯದರ್ಶಿ ರಿತ್ವಿಕ್ ರಂಜನಂ ಪಾಂಡೆ, ಡಿಜಿಟಲ್ ಹೆಲ್ತ್ ಸೊಸೈಟಿ ನಿರ್ದೇಶಕ ವಿಪಿನ್ ಸಿಂಗ್, ಆರೋಗ್ಯ ಇಲಾಖೆ ನಿರ್ದೇಶಕಿ ಡಾ. ರಜನಿ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

About the Author

Prajwal is the Founder and Editor of Suddilive.com. He covers Karnataka news, politics, education, employment, sports, technology, and current affairs. He is committed to providing accurate, timely, and reliable information through responsible digital journalism.

📢 SUDDI LIVE WhatsApp Community

ತಾಜಾ ಸುದ್ದಿಗಳು, ಬ್ರೇಕಿಂಗ್ ನ್ಯೂಸ್, ರಾಜಕೀಯ, ಕ್ರೀಡೆ, ಮನರಂಜನೆ ಹಾಗೂ ಸ್ಥಳೀಯ ಸುದ್ದಿಗಳಿಗಾಗಿ SUDDI LIVE WhatsApp Community ಸೇರಿ.

📲 Join WhatsApp Community

📢 SUDDI LIVE Facebook Page

ತಾಜಾ ಸುದ್ದಿಗಳು, ಬ್ರೇಕಿಂಗ್ ನ್ಯೂಸ್, ರಾಜಕೀಯ, ಕ್ರೀಡೆ, ಮನರಂಜನೆ ಹಾಗೂ ಸ್ಥಳೀಯ ಸುದ್ದಿಗಳಿಗಾಗಿ SUDDI LIVE Facebook ಪೇಜ್ ಅನ್ನು Follow ಮಾಡಿ.

👍 Follow SUDDI LIVE

ನಿಮ್ಮ ಬೆಂಬಲವೇ ನಮ್ಮ ಶಕ್ತಿ ❤️

Tags:

Post a Comment

0 Comments

Post a Comment (0)
3/related/default