ಉಡುಪಿ ಜಿಲ್ಲೆಯ ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭರ್ಜರಿ ಕಾರ್ಯಾಚರಣೆ ನಡೆಸಿರುವ ಪೊಲೀಸರು, ಹೋಂ ಸ್ಟೇ ಒಂದರ ಮೇಲೆ ದಾಳಿ ನಡೆಸಿ ಸಾರ್ವಜನಿಕರಿಗೆ ಮಾರಾಟ ಮಾಡಲು ಅಕ್ರಮವಾಗಿ ಮಾದಕ ವಸ್ತುಗಳನ್ನು ಸಂಗ್ರಹಿಸಿಟ್ಟಿದ್ದ ಮಹಿಳೆ ಸೇರಿದಂತೆ ಒಟ್ಟು ಏಳು ಜನ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಉಡುಪಿ ತಾಲೂಕಿನ ತೆಂಕನಿಡಿಯೂರು ಗ್ರಾಮದ ತೊಟ್ಟಂ ಚರ್ಚ್ ಬಳಿ ಕಾರ್ಯಾಚರಿಸುತ್ತಿದ್ದ 'ವಿಶ್ರಾಮ್ ಹೋಂ ಸ್ಟೇ'ಯಲ್ಲಿ ಈ ಅಕ್ರಮ ದಂಧೆ ನಡೆಯುತ್ತಿದ್ದು, ಖಚಿತ ಮಾಹಿತಿ ಆಧರಿಸಿ ಪೊಲೀಸರು ಈ ಮಹತ್ವದ ಕ್ರಮ ಕೈಗೊಂಡಿದ್ದಾರೆ. ಪ್ರವಾಸೋದ್ಯಮ ಇಲಾಖೆ ಹಾಗೂ ಮಲ್ಪೆ ಠಾಣಾಧಿಕಾರಿಗಳು ಈ ಹಿಂದೆ ನೋಟಿಸ್ ನೀಡಿದ್ದರೂ ಸಹ, ನಿಯಮಗಳನ್ನು ಗಾಳಿಗೆ ತೂರಿ ಅನಧಿಕೃತವಾಗಿ ಹೋಂ ಸ್ಟೇ ನಡೆಸಲಾಗುತ್ತಿತ್ತು ಎಂಬ ಆಘಾತಕಾರಿ ಅಂಶ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ದಿನಾಂಕ 18-06-2026 ರಂದು ವಿಶ್ರಾಮ್ ಹೋಂ ಸ್ಟೇಯಲ್ಲಿ ಮಾದಕ ವಸ್ತುಗಳನ್ನು ಅಕ್ರಮವಾಗಿ ಇಟ್ಟುಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಉಡುಪಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರು ಹಾಗೂ ಮಲ್ಪೆ ಪೊಲೀಸ್ ವೃತ್ತ ನಿರೀಕ್ಷಕರ ಮಾರ್ಗದರ್ಶನದಲ್ಲಿ ಮಲ್ಪೆ ಠಾಣೆಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಉಪನಿರೀಕ್ಷಕರಾದ ಅನಿಲ್ ಕುಮಾರ್ ಡಿ, ತನಿಖಾ ವಿಭಾಗದ ಪಿಎಸ್ಐ ಗಂಗಪ್ಪ ಎಸ್ ಮತ್ತು ಠಾಣಾ ಸಿಬ್ಬಂದಿಗಳಾದ ಆದರ್ಶ, ನಾಗೇಶ, ಉದಯ, ಆನಂದ ಗಾಣಿಗ, ನಾಗರಾಜ, ಕುಬೇರ, ಅಭಿಷೇಕ್ ಹಾಗೂ ಪ್ರವೀಣ್ ಆರ್ ಅವರನ್ನೊಳಗೊಂಡ ವಿಶೇಷ ತಂಡವು ಸ್ಥಳಕ್ಕೆ ಜಂಟಿ ದಾಳಿ ನಡೆಸಿತು. ದಾಳಿಯ ವೇಳೆ ಹೋಂ ಸ್ಟೇ ರೂಮ್ ಒಂದರಲ್ಲಿ ಪರಿಶೀಲನೆ ನಡೆಸಿದಾಗ ಎಫ್.ಎಂ. ನಾಜಿಲ್, ಮೊಹಮ್ಮದ್ ಅಜರುದ್ದೀನ್, ಮೊಹಮ್ಮದ್ ಅಫ್ನಾನ್ ಹಾಗೂ ವಿಘ್ನೇಶ್ ಎಂಬ ನಾಲ್ವರು ಮಾದಕ ವಸ್ತು ಸೇವನೆ ಮಾಡಿರುವುದು ದೃಢಪಟ್ಟಿದೆ.
ಇದನ್ನೂ ಓದಿ: ಬ್ಯಾಂಕಾಕ್‌ನಿಂದ ಕೋಟಿ ಕೋಟಿ ಮೌಲ್ಯದ ಗಾಂಜಾ ಸಾಗಣೆ? ಮಾಡೆಲ್ ಹರ್ಷ ಸನ್ನಿ ಅರೆಸ್ಟ್
ಸ್ಥಳದಲ್ಲಿ ಪಂಚರ ಸಮಕ್ಷಮ ನಡೆಸಲಾದ ತೀವ್ರ ಶೋಧನೆಯಲ್ಲಿ ಪೊಲೀಸರು ಒಟ್ಟು ₹3,000 ಅಂದಾಜು ಮೌಲ್ಯದ 33.81 ಗ್ರಾಂ ಗಾಂಜಾ, ₹20,000 ಅಂದಾಜು ಮೌಲ್ಯದ 9.73 ಗ್ರಾಂ ಎಂಡಿಎಂಎ (MDMA) ಮಾದಕ ವಸ್ತು, ಐದು ಮೊಬೈಲ್ ಫೋನ್‌ಗಳು ಹಾಗೂ ಅಕ್ರಮ ದಂಧೆಗೆ ಬಳಸುತ್ತಿದ್ದ ಇತರೆ ಸ್ವತ್ತುಗಳನ್ನು ಪತ್ತೆ ಹಚ್ಚಿ, ಮಹಜರು ಪ್ರಕ್ರಿಯೆಯ ಮೂಲಕ ಯಶಸ್ವಿಯಾಗಿ ಸ್ವಾಧೀನಪಡಿಸಿಕೊಂಡಿದ್ದಾರೆ. ಇದರೊಂದಿಗೆ, ಹೋಂ ಸ್ಟೇಯಲ್ಲಿ ಮಾದಕ ವಸ್ತುಗಳ ಸೇವನೆ ಮತ್ತು ಮಾರಾಟಕ್ಕೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸುತ್ತಿದ್ದ ವಿಶ್ರಾಮ್ ಹೋಂ ಸ್ಟೇ ಮಾಲೀಕರಾದ ಧನ್ವನ್ ರಿಕಿತ್, ಅಲ್ಲಿನ ಕೆಲಸಗಾರ ಬಸವರಾಜ್ ಮತ್ತು ಈ ಜಾಲದಲ್ಲಿ ಭಾಗಿಯಾಗಿದ್ದ ಗೀತಾಂಜಲಿ ಜೇನ ಎಂಬ ಮಹಿಳೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತ ಆರೋಪಿಗಳ ವಿರುದ್ಧ ಮಲ್ಪೆ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 67/2026 ರಂತೆ ಎನ್ಡಿಪಿಎಸ್ (NDPS) ಕಾಯ್ದೆಯ ಕಲಂ 8(a), 20(b)(ii)(a), 22(b) ಅಡಿಯಲ್ಲಿ ಗಂಭೀರ ಪ್ರಕರಣ ದಾಖಲಿಸಲಾಗಿದೆ.
ಬಂಧಿತ ಆರೋಪಿಗಳ ಪೈಕಿ ಮೊದಲನೆಯವನಾದ ಹೂಡೆಯ ನಿವಾಸಿ ಎಫ್ ಎಂ ರಫೀಕ್ ಅವರ ಪುತ್ರ ನಾಜೀಲ್ (31), ಎರಡನೆಯವನಾದ ಕಾಪು ತಾಲೂಕಿನ ಮಂಚಕಲ್ ಗ್ರಾಮದ ನಿವಾಸಿ ಮೊಹಮ್ಮದ್ ಅಜರುದ್ದೀನ್ (42) ಮತ್ತು ಮೂರನೆಯವನಾದ ಆತನ ಮಗ ಮೊಹಮ್ಮದ್ ಅಫನಾನ್ (19) ಎಂದು ಗುರುತಿಸಲಾಗಿದೆ. ನಾಲ್ಕನೇ ಆರೋಪಿಯಾದ ತೆಂಕನಿಡಿಯೂರು ಗ್ರಾಮದ ಲಕ್ಷ್ಮಿನಗರದ ದಯಾನಂದ ಕೋಟ್ಯಾನ್ ಅವರ ಪುತ್ರ ವಿಘ್ನೇಶ (35) ಹಾಗೂ ಐದನೇ ಆರೋಪಿಯಾದ ನೇಪಾಳ ದೇಶದ ಕಠ್ಮಂಡು ಮೂಲದವನಾಗಿದ್ದು ಪ್ರಸ್ತುತ ಹೋಂ ಸ್ಟೇನಲ್ಲೇ ತಂಗಿದ್ದ ರಾಮ್ ಸಿಂಗ್ ಅವರ ಮಗ ಬಸವರಾಜು (36) ಎಂಬಾತನನ್ನು ಬಂಧಿಸಲಾಗಿದೆ. ಆರನೇ ಆರೋಪಿಯಾದ ಕಾಪು ತಾಲೂಕಿನ ದೆಂದೂರುಕಟ್ಟೆ ಮೂಲದವನಾಗಿದ್ದು ಸದ್ಯ ಪೆರಂಪಳ್ಳಿ ಚರ್ಚ್ ಎದುರಿನ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿದ್ದ ಮೋಹನ್ ಪ್ರೇಮ್ ಕುಮಾರ್ ಅವರ ಪುತ್ರ ಧನ್ವತ್ ರಿಕೀತ್ (36) ಮತ್ತು ಏಳನೇ ಆರೋಪಿಯಾದ ಒಡಿಸ್ಸಾ ರಾಜ್ಯದ ಗಾಂಜಾಂ ಜಿಲ್ಲೆಯ ಮೂಲದವಳಾಗಿದ್ದು ಪ್ರಸ್ತುತ ಹೂಡೆಯ ಉರ್ದು ಶಾಲೆ ಬಳಿ ವಾಸವಿದ್ದ ಬೌರಿ ಎಂಬವರ ಪತ್ನಿ ಗೀತಾಜಂಲಿ ಜಿನಾ (44) ಎಂಬಾಕೆಯನ್ನು ದಸ್ತಗಿರಿ ಮಾಡಲಾಗಿದ್ದು, ಸದ್ಯದಲ್ಲೇ ಎಲ್ಲಾ ಆರೋಪಿಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲು ಪೊಲೀಸರು ಕ್ರಮ ಕೈಗೊಂಡಿದ್ದಾರೆ.
About the Author
Prajwal is the Founder and Editor of Suddilive.com. He covers Karnataka news, politics, education, employment, sports, technology, and current affairs. He is committed to providing accurate, timely, and reliable information through responsible digital journalism.
📢 SUDDI LIVE WhatsApp Community
ತಾಜಾ ಸುದ್ದಿಗಳು, ಬ್ರೇಕಿಂಗ್ ನ್ಯೂಸ್, ರಾಜಕೀಯ, ಕ್ರೀಡೆ, ಮನರಂಜನೆ ಹಾಗೂ ಸ್ಥಳೀಯ ಸುದ್ದಿಗಳಿಗಾಗಿ SUDDI LIVE WhatsApp Community ಸೇರಿ.
📲 Join WhatsApp Community📢 SUDDI LIVE Facebook Page
ತಾಜಾ ಸುದ್ದಿಗಳು, ಬ್ರೇಕಿಂಗ್ ನ್ಯೂಸ್, ರಾಜಕೀಯ, ಕ್ರೀಡೆ, ಮನರಂಜನೆ ಹಾಗೂ ಸ್ಥಳೀಯ ಸುದ್ದಿಗಳಿಗಾಗಿ SUDDI LIVE Facebook ಪೇಜ್ ಅನ್ನು Follow ಮಾಡಿ.
👍 Follow SUDDI LIVEನಿಮ್ಮ ಬೆಂಬಲವೇ ನಮ್ಮ ಶಕ್ತಿ ❤️

