ನವದೆಹಲಿ, ಮೇ.15: ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಭಾರೀ ಏರಿಕೆ ಕಂಡ ಹಿನ್ನೆಲೆ ಭಾರತೀಯ ರೂಪಾಯಿ ಮೌಲ್ಯವು ಶುಕ್ರವಾರ ಐತಿಹಾಸಿಕ ಕುಸಿತ ದಾಖಲಿಸಿದೆ. ಅಮೆರಿಕನ್ ಡಾಲರ್ ಎದುರು ರೂಪಾಯಿ ಮೌಲ್ಯವು ಸಾರ್ವಕಾಲಿಕ ಕನಿಷ್ಠ ಮಟ್ಟವಾದ 96.14 ರೂ.ಗೆ ಇಳಿದಿದ್ದು, ದೇಶದ ಆರ್ಥಿಕ ವಲಯದಲ್ಲಿ ಆತಂಕ ಹೆಚ್ಚಿಸಿದೆ.
ಅಂತರಬ್ಯಾಂಕ್ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಶುಕ್ರವಾರ ಬೆಳಿಗ್ಗೆ ರೂಪಾಯಿ ಮೌಲ್ಯವು ಡಾಲರ್ ಎದುರು 95.86 ರೂ.ನಲ್ಲಿ ವಹಿವಾಟು ಆರಂಭಿಸಿತು. ದಿನದ ವಹಿವಾಟಿನ ಅವಧಿಯಲ್ಲಿ ನಿರಂತರ ಒತ್ತಡಕ್ಕೆ ಒಳಗಾದ ರೂಪಾಯಿ, ಅಂತಿಮವಾಗಿ 96.14 ರೂ. ಮಟ್ಟಕ್ಕೆ ಕುಸಿಯಿತು. ಇದು ಹಿಂದಿನ ವಹಿವಾಟಿನಿಗಿಂತ ಸುಮಾರು 50 ಪೈಸೆಯಷ್ಟು ಕುಸಿತವಾಗಿದೆ ಎಂದು ಹಣಕಾಸು ತಜ್ಞರು ತಿಳಿಸಿದ್ದಾರೆ.
ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ಬ್ಯಾರೆಲ್‌ಗೆ 110 ಡಾಲರ್ ತಲುಪಿರುವುದು ರೂಪಾಯಿ ಮೌಲ್ಯ ಕುಸಿತಕ್ಕೆ ಪ್ರಮುಖ ಕಾರಣವೆಂದು ವಿಶ್ಲೇಷಿಸಲಾಗಿದೆ. ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿ, ವಿಶೇಷವಾಗಿ ಇರಾನ್ ಸಂಬಂಧಿತ ಯುದ್ಧ ಭೀತಿ, ಜಾಗತಿಕ ತೈಲ ಸರಬರಾಜಿನ ಮೇಲೆ ಪರಿಣಾಮ ಬೀರಿದೆ. ಇದರಿಂದ ತೈಲದ ಬೆಲೆ ಏರಿಕೆಯಾಗಿದ್ದು, ಭಾರತ ಸೇರಿದಂತೆ ತೈಲ ಆಮದು ಮಾಡುವ ರಾಷ್ಟ್ರಗಳ ಆರ್ಥಿಕತೆಗೆ ಹೊಡೆತ ಬಿದ್ದಿದೆ.
ಭಾರತವು ತನ್ನ ಇಂಧನ ಅವಶ್ಯಕತೆಗಳ ಬಹುಪಾಲನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತಿರುವುದರಿಂದ, ತೈಲದ ಬೆಲೆ ಏರಿಕೆಯಿಂದ ಡಾಲರ್ ಬೇಡಿಕೆ ಹೆಚ್ಚಾಗಿದೆ. ಇದರಿಂದ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ರೂಪಾಯಿಗೆ ಒತ್ತಡ ಹೆಚ್ಚಾಗಿ ಮೌಲ್ಯ ಕುಸಿದಿದೆ. ಜೊತೆಗೆ ವಿದೇಶಿ ಹೂಡಿಕೆದಾರರು ಭಾರತೀಯ ಮಾರುಕಟ್ಟೆಯಿಂದ ಬಂಡವಾಳ ಹಿಂಪಡೆಯುತ್ತಿರುವುದು ಕೂಡ ರೂಪಾಯಿ ಮೌಲ್ಯ ಕುಸಿತಕ್ಕೆ ಮತ್ತೊಂದು ಕಾರಣವಾಗಿದೆ.
ರೂಪಾಯಿ ಮೌಲ್ಯ ಕುಸಿತವು ದೇಶೀಯ ಮಾರುಕಟ್ಟೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಪೆಟ್ರೋಲ್, ಡೀಸೆಲ್ ಸೇರಿದಂತೆ ಇಂಧನ ಉತ್ಪನ್ನಗಳ ಬೆಲೆ ಏರಿಕೆಯಾಗುವ ಸಾಧ್ಯತೆ ಇರುವುದರಿಂದ ಸಾರಿಗೆ ವೆಚ್ಚ ಹೆಚ್ಚಾಗಬಹುದು. ಇದರಿಂದ ದಿನನಿತ್ಯ ಬಳಕೆಯ ವಸ್ತುಗಳ ಬೆಲೆಯ ಮೇಲೂ ಪರಿಣಾಮ ಬೀಳುವ ಆತಂಕ ವ್ಯಕ್ತವಾಗಿದೆ.
ಹಣಕಾಸು ತಜ್ಞರ ಪ್ರಕಾರ, ರೂಪಾಯಿ ಮೌಲ್ಯದ ಈ ತೀವ್ರ ಕುಸಿತ ಮುಂದಿನ ದಿನಗಳಲ್ಲಿ ಹಣದುಬ್ಬರ ಹೆಚ್ಚುವ ಸಾಧ್ಯತೆಯನ್ನು ಸೂಚಿಸುತ್ತಿದೆ. ಜಾಗತಿಕ ಮಾರುಕಟ್ಟೆಯ ಅನಿಶ್ಚಿತತೆ ಮುಂದುವರಿದರೆ ಭಾರತೀಯ ಆರ್ಥಿಕತೆಯ ಮೇಲಿನ ಒತ್ತಡ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಎಚ್ಚರಿಕೆ ನೀಡಲಾಗಿದೆ.
