ರಾಮನಗರ: ರಾಜ್ಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿರುವ ನಡುವೆಯೇ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಪಟ್ಟ ಒಲಿಯುವ ಸಾಧ್ಯತೆಗಳು ಗಟ್ಟಿಯಾಗುತ್ತಿರುವ ಸುದ್ದಿ ಕಾಂಗ್ರೆಸ್ ವಲಯದಲ್ಲಿ ಭಾರೀ ಸಂಭ್ರಮಕ್ಕೆ ಕಾರಣವಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ರಾಮನಗರ ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್ ಭಾವುಕರಾಗಿ ಮಾತನಾಡಿ, “ಭಗವಂತನ ದಯೆಯಿಂದ ಕೊನೆಗೂ ಒಳ್ಳೆಯ ಕಾಲ ಕೂಡಿ ಬಂದಿದೆ. ರಾಜ್ಯದ ಜನತೆ ನಮ್ಮ ನಾಯಕರಾದ ಡಿ.ಕೆ. ಶಿವಕುಮಾರ್ ಅವರಿಗೆ ಯಾವ ಸ್ಥಾನ ಬಯಸಿದ್ದರೋ, ಅದನ್ನು ದೇವರು ನೆರವೇರಿಸುವ ಕಾಲ ಬಂದಿದೆ. ಆ ಭಗವಂತನಿಗೆ ಕೋಟಿ ಕೋಟಿ ನಮಸ್ಕಾರಗಳು” ಎಂದು ಸಂತಸ ವ್ಯಕ್ತಪಡಿಸಿದರು.
ದೆಹಲಿಯಲ್ಲಿ ನಡೆದ ಹೈವೋಲ್ಟೇಜ್ ರಾಜಕೀಯ ಚಟುವಟಿಕೆಗಳ ಹಿನ್ನೆಲೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತಮ್ಮ ನಾಯಕನಿಗೆ ಮುಖ್ಯಮಂತ್ರಿ ಸ್ಥಾನ ಸಿಗುತ್ತಿರುವ ವಿಚಾರದಿಂದ ಅಪಾರ ಉತ್ಸಾಹಗೊಂಡಿರುವುದಾಗಿ ಹೇಳಿದರು. “ಈ ಸಂತಸದ ಸುದ್ದಿ ಕೇಳಿದ ನಂತರ ನನಗೆ ರಾತ್ರಿಯೆಲ್ಲಾ ಸರಿಯಾಗಿ ನಿದ್ದೆಯೇ ಬರಲಿಲ್ಲ. ದೆಹಲಿಯಲ್ಲಿ ಏನು ಬೆಳವಣಿಗೆಗಳು ನಡೆಯುತ್ತಿವೆ ಎಂಬುದರ ಬಗ್ಗೆ ನಿರಂತರ ಮಾಹಿತಿ ಪಡೆದುಕೊಳ್ಳುತ್ತಿದ್ದೆ. ಯಾರ ಜೊತೆ ಮಾತನಾಡಬೇಕಿತ್ತೋ ಅವರ ಜೊತೆ ಸಂಪರ್ಕದಲ್ಲಿದ್ದು ಕ್ಷಣ ಕ್ಷಣದ ಮಾಹಿತಿಯನ್ನು ತಿಳಿದುಕೊಳ್ಳುತ್ತಿದ್ದೆ. ಕೊನೆಗೂ ದೇವರು ನನ್ನ ಆಸೆಯನ್ನು ಈಡೇರಿಸುವ ಕೆಲಸ ಮಾಡಿದ್ದಾನೆ” ಎಂದು ಭಾವುಕರಾಗಿ ನುಡಿದರು.
ರಾಜ್ಯ ರಾಜಕಾರಣದಲ್ಲಿ ಪ್ರತಿಯೊಂದು ಬೆಳವಣಿಗೆಗೂ ತನ್ನದೇ ಆದ ಸಮಯ ಮತ್ತು ಮಿತಿಯಿರುತ್ತದೆ ಎಂದು ಹೇಳಿದ ಇಕ್ಬಾಲ್ ಹುಸೇನ್, “ಪಕ್ಷದ ವರಿಷ್ಠರು ನಮಗೆಲ್ಲಾ ಶಿಸ್ತಿನಿಂದ ಇರಲು ಸೂಚಿಸಿದ್ದರು. ಸರಿಯಾದ ಸಮಯ ಬಂದಾಗ ಮಾತನಾಡಿ ಎಂದು ತಿಳಿಸಿದ್ದರು. ಈಗ ಆ ಸುಸಮಯ ಬಂದಿದೆ. ಹೈಕಮಾಂಡ್ ನಮ್ಮ ನಾಯಕರಿಗೆ ದೊಡ್ಡ ಅವಕಾಶವನ್ನು ಕಲ್ಪಿಸಿಕೊಟ್ಟಿದೆ” ಎಂದು ಹೇಳಿದರು.
ಡಿ.ಕೆ. ಶಿವಕುಮಾರ್ ಅವರು ಶೀಘ್ರದಲ್ಲೇ ಬೆಂಗಳೂರಿಗೆ ಆಗಮಿಸಲಿದ್ದು, ಬಂದ ಬಳಿಕ ಅವರೊಂದಿಗೆ ಚರ್ಚೆ ನಡೆಸುವುದಾಗಿ ಇಕ್ಬಾಲ್ ಹುಸೇನ್ ತಿಳಿಸಿದರು. “ಮುಂದಿನ ರಾಜಕೀಯ ನಡೆಗಳ ಬಗ್ಗೆ ಡಿ.ಕೆ. ಶಿವಕುಮಾರ್ ಅವರು ಕಾರ್ಯಕರ್ತರು ಮತ್ತು ನಾಯಕರ ಜೊತೆ ಸಮಾಲೋಚನೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ. ಪಕ್ಷದ ಹಿತವೇ ನಮ್ಮ ಮುಖ್ಯ ಗುರಿ” ಎಂದು ಹೇಳಿದರು.
ಇದೇ ವೇಳೆ ಕಾಂಗ್ರೆಸ್ ಪಕ್ಷದ ಶಿಸ್ತು ಮತ್ತು ಸಂಘಟನಾ ಬದ್ಧತೆಯನ್ನು ಮುಂದುವರಿಸಿಕೊಂಡು ಹೋಗುವುದಾಗಿ ಅವರು ಸ್ಪಷ್ಟಪಡಿಸಿದರು. “ನಾವು ಮೊದಲಿನಿಂದಲೂ ಪಕ್ಷದ ಶಿಸ್ತನ್ನು ಕಾಪಾಡಿಕೊಂಡು ಬಂದಿದ್ದೇವೆ. ಮುಂದೆಯೂ ಅದನ್ನೇ ಅನುಸರಿಸುತ್ತೇವೆ” ಎಂದು ಹೇಳಿದರು.
ಡಿ.ಕೆ. ಶಿವಕುಮಾರ್ ಅವರ ಆಪ್ತ ವಲಯದಲ್ಲಿ ಪ್ರಮುಖ ನಾಯಕರಾಗಿ ಗುರುತಿಸಿಕೊಂಡಿರುವ ಇಕ್ಬಾಲ್ ಹುಸೇನ್ ಅವರ ಈ ಹೇಳಿಕೆ, ಕನಕಪುರ ಬಂಡೆಯ ಬೆಂಬಲಿಗರಲ್ಲಿ ಈಗಾಗಲೇ ಮನೆಮಾಡಿರುವ ಸಂಭ್ರಮದ ವಾತಾವರಣಕ್ಕೆ ಮತ್ತಷ್ಟು ಬಲ ನೀಡಿದೆ. ರಾಜ್ಯ ಕಾಂಗ್ರೆಸ್ ರಾಜಕಾರಣದಲ್ಲಿ ಹೊಸ ಅಧ್ಯಾಯ ಆರಂಭವಾಗುವ ನಿರೀಕ್ಷೆ ಕಾರ್ಯಕರ್ತರಲ್ಲಿ ಹೆಚ್ಚಾಗಿದೆ.
About the Author
Prajwal is the Founder and Editor of Suddilive.com. He covers Karnataka news, politics, education, employment, sports, technology, and current affairs. He is committed to providing accurate, timely, and reliable information through responsible digital journalism.
📢 SUDDI LIVE WhatsApp Community
ತಾಜಾ ಸುದ್ದಿಗಳು, ಬ್ರೇಕಿಂಗ್ ನ್ಯೂಸ್, ರಾಜಕೀಯ, ಕ್ರೀಡೆ, ಮನರಂಜನೆ ಹಾಗೂ ಸ್ಥಳೀಯ ಸುದ್ದಿಗಳಿಗಾಗಿ SUDDI LIVE WhatsApp Community ಸೇರಿ.
📲 Join WhatsApp Community📢 SUDDI LIVE Facebook Page
ತಾಜಾ ಸುದ್ದಿಗಳು, ಬ್ರೇಕಿಂಗ್ ನ್ಯೂಸ್, ರಾಜಕೀಯ, ಕ್ರೀಡೆ, ಮನರಂಜನೆ ಹಾಗೂ ಸ್ಥಳೀಯ ಸುದ್ದಿಗಳಿಗಾಗಿ SUDDI LIVE Facebook ಪೇಜ್ ಅನ್ನು Follow ಮಾಡಿ.
👍 Follow SUDDI LIVEನಿಮ್ಮ ಬೆಂಬಲವೇ ನಮ್ಮ ಶಕ್ತಿ ❤️

