ಬೆಂಗಳೂರು: ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹಾಗೂ ಅವರ ಕುಟುಂಬದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿದೆ ಎನ್ನಲಾದ ಅಪಪ್ರಚಾರ ಮತ್ತು ಮಾನಹಾನಿಕರ ವಿಷಯ ಪ್ರಸಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಮಹತ್ವದ ಮಧ್ಯಂತರ ಆದೇಶ ನೀಡಿದೆ. ಸಿವಿಲ್ ನ್ಯಾಯಾಲಯಗಳು ಈಗಾಗಲೇ ಹೊರಡಿಸಿರುವ ಪ್ರತಿಬಂಧಕ ಆದೇಶಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ರಾಜ್ಯ ಸರ್ಕಾರ ಹಾಗೂ ಪೊಲೀಸ್ ಇಲಾಖೆಗೆ ಹೈಕೋರ್ಟ್ ಸೂಚನೆ ನೀಡಿದ್ದು, ಈ ಬೆಳವಣಿಗೆ ಶ್ರೀಕ್ಷೇತ್ರ ಧರ್ಮಸ್ಥಳ ಪರ ಮಹತ್ವದ ಕಾನೂನು ಜಯವೆಂದು ಪರಿಗಣಿಸಲಾಗಿದೆ.
ಈ ಸಂಬಂಧ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಪದಾಧಿಕಾರಿಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರ ರಜಾಕಾಲೀನ ಏಕಸದಸ್ಯ ಪೀಠ ಗುರುವಾರ ನಡೆಸಿತು. ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ರಾಜಶೇಖರ್ ವಾದ ಮಂಡಿಸಿ, ನ್ಯಾಯಾಲಯದಿಂದ ಪ್ರತಿಬಂಧಕ ಆದೇಶಗಳಿದ್ದರೂ ಕೆಲ ವ್ಯಕ್ತಿಗಳು ಮತ್ತು ಡಿಜಿಟಲ್ ಮಾಧ್ಯಮಗಳು ನಕಲಿ ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಂ ಖಾತೆಗಳ ಮೂಲಕ ಮಾನಹಾನಿಕರ ವಿಡಿಯೋಗಳು, ತಿರುಚಿದ ಮಾಹಿತಿ ಮತ್ತು ಸುಳ್ಳು ಆರೋಪಗಳನ್ನು ಹರಡುತ್ತಿದ್ದಾರೆ ಎಂದು ದೂರಿದರು.
ಪೊಲೀಸರಿಗೆ ದೂರು ಸಲ್ಲಿಸಿದರೂ ಸಮರ್ಪಕ ಕ್ರಮ ಕೈಗೊಳ್ಳಲಾಗಿಲ್ಲ ಎಂಬ ಅಂಶವನ್ನು ಅವರು ನ್ಯಾಯಪೀಠದ ಗಮನಕ್ಕೆ ತಂದರು. ಇದಕ್ಕೆ ಸಂಬಂಧಿಸಿದಂತೆ ಹಲವು ಡಿಜಿಟಲ್ ಪುರಾವೆಗಳು, ಸಾಮಾಜಿಕ ಜಾಲತಾಣ ಪೋಸ್ಟ್‌ಗಳು ಮತ್ತು ವಿಡಿಯೋ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಯಿತು. ಈ ಎಲ್ಲ ವಿಚಾರಗಳನ್ನು ಪರಿಗಣಿಸಿದ ನ್ಯಾಯಪೀಠವು, ನ್ಯಾಯಾಲಯದ ಆದೇಶ ಉಲ್ಲಂಘನೆ ನಡೆದಿರುವ ಕುರಿತು ಗಂಭೀರವಾಗಿ ಗಮನ ಹರಿಸಿದೆ ಎನ್ನಲಾಗಿದೆ.
ವಾದಗಳನ್ನು ಆಲಿಸಿದ ಹೈಕೋರ್ಟ್, ಆದಿತ್ಯಕಿರಣ್ ಕ್ರಿಯೇಷನ್ಸ್, ವಾರ್ತಾ ಭಾರತಿ ಸೇರಿದಂತೆ ಒಟ್ಟು 17 ಯೂಟ್ಯೂಬ್ ಚಾನೆಲ್‌ಗಳು ಮತ್ತು ಡಿಜಿಟಲ್ ಮಾಧ್ಯಮಗಳ ವಿರುದ್ಧ ಕಾನೂನುಬದ್ಧ ಕ್ರಮ ಜರುಗಿಸಲು ಪೊಲೀಸರಿಗೆ ನಿರ್ದೇಶನ ನೀಡಿದೆ. ಅಲ್ಲದೆ, ಶ್ರೀಕ್ಷೇತ್ರ ಧರ್ಮಸ್ಥಳ ಹಾಗೂ ಧರ್ಮಾಧಿಕಾರಿಗಳ ವಿರುದ್ಧ ದುರುದ್ದೇಶಪೂರಿತ ಚರ್ಚೆ, ಮಾನಹಾನಿಕರ ವರದಿ ಮತ್ತು ಸುಳ್ಳು ಮಾಹಿತಿ ಪ್ರಸಾರವಾಗದಂತೆ ತಡೆಯಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ.
ಮುಂದಿನ ವಿಚಾರಣೆಯ ವೇಳೆಗೆ ಈ ಸಂಬಂಧ ಕೈಗೊಂಡ ಕ್ರಮಗಳ ಕುರಿತು ‘ಅನುಪಾಲನಾ ವರದಿ’ ಸಲ್ಲಿಸುವಂತೆ ಕೂಡ ಹೈಕೋರ್ಟ್ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. ನ್ಯಾಯಾಲಯದ ಈ ನಿರ್ದೇಶನದಿಂದ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ಅಸತ್ಯ ಮಾಹಿತಿ ಹರಡುವಿಕೆ ಮತ್ತು ಮಾನಹಾನಿಕರ ಪ್ರಚಾರದ ವಿರುದ್ಧ ಕಾನೂನು ಕ್ರಮಕ್ಕೆ ಮತ್ತಷ್ಟು ಬಲ ಸಿಕ್ಕಂತಾಗಿದೆ.
ಈ ಪ್ರಕರಣದಲ್ಲಿ ಉಲ್ಲೇಖಗೊಂಡಿರುವ ಡಿಜಿಟಲ್ ಮಾಧ್ಯಮಗಳು ಮತ್ತು ಚಾನೆಲ್‌ಗಳ ಪಟ್ಟಿಯಲ್ಲಿ ಅಶ್ವವೇಗ ಸ್ಪೆಷಲ್, ಅವನಿಯಾನ, ಡಿಟಾಕ್ಸ್, ಫಸ್ಟ್ ವಾಯ್ಸ್ ಕನ್ನಡ ನ್ಯೂಸ್, ಗಿರೀಶ್ ಮಟ್ಟಣ್ಣವರ್, ಜನತಾ ಏಜೆಂಟ್, ಲೇಖನಿ ನ್ಯೂಸ್ ಕನ್ನಡ, ಮಿಸ್ಟರ್ ಅಣ್ಣಬಾಂಡ್, ಪ್ರಜಾಧ್ವನಿ ಟಿವಿ, ಆರ್‌ವಿಕೆ ಸ್ಟುಡಿಯೋಸ್, ಸ್ಪೀಡ್ ನ್ಯೂಸ್ ಕನ್ನಡ, ಯುನೈಟೆಡ್ ಮೀಡಿಯಾ, ವಾರ್ತಾ ಭಾರತಿ, ರೈಟ್ ನ್ಯೂಸ್, ಜ್ವಾಲಾಮುಖಿ ನ್ಯೂಸ್ ಹಾಗೂ ಸೌಜನ್ಯಾ ನ್ಯೂಸ್ ಸೇರಿವೆ.
About the Author
Prajwal is the Founder and Editor of Suddilive.com. He covers Karnataka news, politics, education, employment, sports, technology, and current affairs. He is committed to providing accurate, timely, and reliable information through responsible digital journalism.
📢 SUDDI LIVE WhatsApp Community
ತಾಜಾ ಸುದ್ದಿಗಳು, ಬ್ರೇಕಿಂಗ್ ನ್ಯೂಸ್, ರಾಜಕೀಯ, ಕ್ರೀಡೆ, ಮನರಂಜನೆ ಹಾಗೂ ಸ್ಥಳೀಯ ಸುದ್ದಿಗಳಿಗಾಗಿ SUDDI LIVE WhatsApp Community ಸೇರಿ.
📲 Join WhatsApp Community📢 SUDDI LIVE Facebook Page
ತಾಜಾ ಸುದ್ದಿಗಳು, ಬ್ರೇಕಿಂಗ್ ನ್ಯೂಸ್, ರಾಜಕೀಯ, ಕ್ರೀಡೆ, ಮನರಂಜನೆ ಹಾಗೂ ಸ್ಥಳೀಯ ಸುದ್ದಿಗಳಿಗಾಗಿ SUDDI LIVE Facebook ಪೇಜ್ ಅನ್ನು Follow ಮಾಡಿ.
👍 Follow SUDDI LIVEನಿಮ್ಮ ಬೆಂಬಲವೇ ನಮ್ಮ ಶಕ್ತಿ ❤️

