}

ನಾರಾಯಣ ಗುರುಗಳನ್ನು ಯಾವುದೇ ಒಂದು ಸಮುದಾಯಕ್ಕೆ ಸೀಮಿತಗೊಳಿಸಲಾಗದು: ಶಾಸಕ ಉಮಾನಾಥ್ ಕೋಟ್ಯಾನ್

suddilive.com
By -
0

 

ಮಂಗಳೂರು: ಬ್ರಹ್ಮಶ್ರೀ ನಾರಾಯಣ ಗುರುಗಳನ್ನು ಯಾವುದೇ ಒಂದು ಸಮುದಾಯದ ಗುರುವಾಗಿ ಸೀಮಿತಗೊಳಿಸಲು ಸಾಧ್ಯವಿಲ್ಲ. ಅವರು ಇಡೀ ಲೋಕಕ್ಕೆ ಸೇರಿದ ಸಂತರು. ಜಾತಿ, ಮತ ಹಾಗೂ ಬೇಧಭಾವಗಳನ್ನು ಮೀರಿ ‘ಒಂದೇ ಜಾತಿ, ಒಂದೇ ಮತ, ಒಂದೇ ದೇವರು’ ಎಂಬ ಮಾನವೀಯ ಸಂದೇಶವನ್ನು ಸಾರಿದ ಮಹಾನ್ ಸಮಾಜ ಸುಧಾರಕರು ಎಂದು ಮೂಡಬಿದ್ರೆ ಶಾಸಕ ಉಮಾನಾಥ್ ಕೋಟ್ಯಾನ್ ಹೇಳಿದರು.


ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ನಗರದ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಆಯೋಜಿಸಿದ್ದ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.


ಸಮಾಜದ ಹಿಂದುಳಿದ ವರ್ಗದವರಿಗೆ ದೇವಾಲಯ ಪ್ರವೇಶ ಸೇರಿದಂತೆ ಸಾಮಾಜಿಕ ಸಮಾನತೆಯ ಹಕ್ಕುಗಳನ್ನು ದೊರಕಿಸಿಕೊಡಲು ನಾರಾಯಣ ಗುರುಗಳು ಶಾಂತಿಯುತ ಮಾರ್ಗದಲ್ಲಿ ಹೋರಾಟ ನಡೆಸಿದ್ದರು. ಅವರ ವಿಚಾರಧಾರೆ ಹಾಗೂ ವ್ಯಕ್ತಿತ್ವದಿಂದ ಮಹಾತ್ಮ ಗಾಂಧಿ, ರವೀಂದ್ರನಾಥ ಟಾಗೋರ್ ಸೇರಿದಂತೆ ಹಲವು ಮಹನೀಯರು ಪ್ರಭಾವಿತರಾಗಿದ್ದರು. ನಾರಾಯಣ ಗುರುಗಳ ಚಿಂತನೆಗಳು ಇಂದಿಗೂ ಸಮಾಜಕ್ಕೆ ದಾರಿದೀಪವಾಗಿವೆ ಎಂದರು.


ನಾರಾಯಣ ಗುರು ಜಯಂತಿಯನ್ನು ಕೇವಲ ಒಂದು ಸಮುದಾಯದ ಕಾರ್ಯಕ್ರಮವಾಗಿ ಸೀಮಿತಗೊಳಿಸದೆ, ಎಲ್ಲ ಸಮುದಾಯದವರು ಒಗ್ಗಟ್ಟಿನಿಂದ ಭಾಗವಹಿಸುವಂತಾಗಬೇಕು ಎಂದು ಕೋಟ್ಯಾನ್ ಹೇಳಿದರು.


ಉಡುಪಿ ರಾಜ್ಯಶಾಸ್ತ್ರ ಉಪನ್ಯಾಸಕ ದಯಾನಂದ ಕರ್ಕೇರ ಉಗ್ಗೆಲ್‌ಬೆಟ್ಟು ಉಪನ್ಯಾಸ ನೀಡಿ, ಬ್ರಹ್ಮಶ್ರೀ ನಾರಾಯಣ ಗುರುಗಳು ಸಂಯಮದ ಮಾರ್ಗದಲ್ಲಿ ಸಮಾಜವನ್ನು ಕಟ್ಟಿದ ಶ್ರೇಷ್ಠ ಸಂತರು ಎಂದು ಬಣ್ಣಿಸಿದರು.


ನಾರಾಯಣ ಗುರುಗಳು ಪ್ರತಿಪಾದಿಸಿದ ಸಮಾನತೆ, ಶಿಕ್ಷಣ ಹಾಗೂ ಮಾನವೀಯತೆಯ ತತ್ವಗಳನ್ನು ಕೇವಲ ಭಾಷಣಗಳಿಗೆ ಸೀಮಿತಗೊಳಿಸದೆ, ಸಮಾಜದ ಪ್ರತಿಯೊಂದು ಹಂತದಲ್ಲೂ ಅಳವಡಿಸಿಕೊಳ್ಳುವ ಅಗತ್ಯವಿದೆ. ಅವರ ಆದರ್ಶಗಳನ್ನು ಜೀವನದಲ್ಲಿ ಅನುಷ್ಠಾನಗೊಳಿಸುವ ಸಂಕಲ್ಪ ಮಾಡಬೇಕು. ಗುರುಗಳ ಮಾನವತಾವಾದಿ ಚಿಂತನೆಗಳು ಹಾಗೂ ತತ್ವಗಳನ್ನು ಸಮಾಜ ಸುಧಾರಣೆಯ ವಿವಿಧ ಆಯಾಮಗಳಲ್ಲಿ ಅಳವಡಿಸಿಕೊಂಡರೆ ಸಮಾನತೆ ಮತ್ತು ಸೌಹಾರ್ದತೆಯಿಂದ ಕೂಡಿದ ಸಮಾಜ ನಿರ್ಮಿಸಲು ಸಾಧ್ಯ ಎಂದು ಅವರು ಹೇಳಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಡಿ. ವೇದವ್ಯಾಸ ಕಾಮತ್ ವಹಿಸಿದ್ದರು.


ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ. ಗಫೂರ್, ಕರ್ನಾಟಕ ಪರಿಸರ ಪ್ರವಾಸೋದ್ಯಮ ಮಂಡಳಿ ಅಧ್ಯಕ್ಷೆ ಶಾಲೆಟ್ ಲವೀನಾ ಪಿಂಟೋ, ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್, ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಅಧ್ಯಕ್ಷ ಜಯರಾಜ್ ಹೆಚ್. ಸೋಮಸುಂದರಂ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅನಿಲ್ ಕುಮಾರ್ ಭೂಮರೆಡ್ಡಿ, ಮಂಗಳೂರು ತಹಶೀಲ್ದಾರ್ ರಮೇಶ್ ಬಾಬು, ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಜಯರಾಮ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.


ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್ ಜಿ. ಸ್ವಾಗತಿಸಿದರು.

About the Author

suddilive Suddilive.com covers Karnataka news, politics, education, employment, sports, technology, and current affairs. He is committed to providing accurate, timely, and reliable information through responsible digital journalism.

📢 SUDDI LIVE WhatsApp Community

ತಾಜಾ ಸುದ್ದಿಗಳು, ಬ್ರೇಕಿಂಗ್ ನ್ಯೂಸ್, ರಾಜಕೀಯ, ಕ್ರೀಡೆ, ಮನರಂಜನೆ ಹಾಗೂ ಸ್ಥಳೀಯ ಸುದ್ದಿಗಳಿಗಾಗಿ SUDDI LIVE WhatsApp Community ಸೇರಿ.

📲 Join WhatsApp Community

📢 SUDDI LIVE Facebook Page

ತಾಜಾ ಸುದ್ದಿಗಳು, ಬ್ರೇಕಿಂಗ್ ನ್ಯೂಸ್, ರಾಜಕೀಯ, ಕ್ರೀಡೆ, ಮನರಂಜನೆ ಹಾಗೂ ಸ್ಥಳೀಯ ಸುದ್ದಿಗಳಿಗಾಗಿ SUDDI LIVE Facebook ಪೇಜ್ ಅನ್ನು Follow ಮಾಡಿ.

👍 Follow SUDDI LIVE

ನಿಮ್ಮ ಬೆಂಬಲವೇ ನಮ್ಮ ಶಕ್ತಿ ❤️

Tags:

Post a Comment

0 Comments

Post a Comment (0)
3/related/default