ಮಂಗಳೂರು: ಸುಳ್ಯ ಮತ್ತು ಕಡಬ ತಾಲೂಕುಗಳಲ್ಲಿ ಕಾಡಾನೆಗಳ ಹಾವಳಿಯಿಂದ ರೈತರು ಹಾಗೂ ಸಾರ್ವಜನಿಕರು ಆತಂಕಕ್ಕೊಳಗಾಗಿದ್ದು, ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಶಾಸಕಿ ಭಾಗೀರಥಿ ಮುರುಳ್ಯ ಸರಕಾರವನ್ನು ಒತ್ತಾಯಿಸಿದ್ದಾರೆ.
ಆನೆಗಳ ದಾಳಿಯಿಂದ ಬೆಳೆ ಹಾಗೂ ಆಸ್ತಿ ಹಾನಿಯಾಗುತ್ತಿರುವ ಹಿನ್ನೆಲೆಯಲ್ಲಿ, ರೈತರ ಜಮೀನುಗಳಿಗೆ ಸೋಲಾರ್ ಬೇಲಿ ಅಳವಡಿಸಲು ಸರ್ಕಾರದಿಂದ ಶೇ.100ರಷ್ಟು ಅನುದಾನ ನೀಡಬೇಕು ಎಂದು ಅವರು ಆಗ್ರಹಿಸಿದರು.
ಶನಿವಾರ ಜಿ.ಪಂ. ನೇತ್ರಾವತಿ ಸಭಾಂಗಣದಲ್ಲಿ ಸಂಸದ ಕ್ಯಾ| ಬ್ರಿಜೇಶ್ ಚೌಟ ಅವರ ಅಧ್ಯಕ್ಷತೆಯಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ (ದಿಶಾ) ಸಮಿತಿ ಸಭೆಯಲ್ಲಿ ಅವರು ಈ ವಿಷಯ ಪ್ರಸ್ತಾಪಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ., ಗುಂಡ್ಯದಲ್ಲಿ ಆನೆ ಕ್ಯಾಂಪ್ ಸ್ಥಾಪಿಸುವ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಸಹಾಯಕ ಅರಣ್ಯಾಧಿಕಾರಿ ಮಾಹಿತಿ ನೀಡಿ, ಪುತ್ತೂರು ಮತ್ತು ಸುಳ್ಯ ಭಾಗದಲ್ಲಿ ಸುಮಾರು 80 ಆನೆಗಳನ್ನು ಗುರುತಿಸಲಾಗಿದೆ. ಅರಣ್ಯ ಇಲಾಖೆಯ ಸಿಬ್ಬಂದಿ ದಿನದ 24 ಗಂಟೆಯೂ ಕಾರ್ಯನಿರ್ವಹಿಸುತ್ತಿದ್ದು, ಆನೆಗಳನ್ನು ಕಾಡಿನತ್ತ ಓಡಿಸುವ ಕಾರ್ಯ ನಡೆಸುತ್ತಿದ್ದಾರೆ ಎಂದರು.
2026-27ನೇ ಸಾಲಿನಲ್ಲಿ ಆನೆ ದಾಳಿಯಿಂದ ಹಾನಿಗೊಳಗಾದ 19 ಮಂದಿಗೆ ₹3.33 ಲಕ್ಷ ಪರಿಹಾರ ನೀಡಲಾಗಿದೆ. ಇನ್ನೂ 381 ಮಂದಿಗೆ ₹73 ಲಕ್ಷ ಪರಿಹಾರ ನೀಡಬೇಕಿದ್ದು, ಇದಕ್ಕಾಗಿ ಅನುದಾನ ಬರಬೇಕಾಗಿದೆ ಎಂದು ಅವರು ಸಭೆಗೆ ಮಾಹಿತಿ ನೀಡಿದರು.
ಆನೆಗಳನ್ನು ಓಡಿಸುವುದು ಶಾಶ್ವತ ಪರಿಹಾರವಲ್ಲ
ಆನೆಗಳನ್ನು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಓಡಿಸುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಇದು ಶಾಶ್ವತ ಪರಿಹಾರವೂ ಅಲ್ಲ ಎಂದು ಸಂಸದ ಕ್ಯಾ| ಬ್ರಿಜೇಶ್ ಚೌಟ ಹೇಳಿದರು.
ಆನೆ ಹಾವಳಿ ನಿಯಂತ್ರಣಕ್ಕೆ ಇದುವರೆಗೆ ಕೈಗೊಂಡಿರುವ ಕ್ರಮಗಳು ಹಾಗೂ ಮುಂದಿನ ದಿನಗಳಲ್ಲಿ ಕೈಗೊಳ್ಳಲಿರುವ ಯೋಜನೆಗಳ ಕುರಿತು ಅಧಿಕಾರಿಗಳು ಕೂಡಲೇ ಸಮಗ್ರ ಮಾಹಿತಿ ನೀಡಬೇಕು. ಸಮಸ್ಯೆಗೆ ದೀರ್ಘಕಾಲಿಕ ಪರಿಹಾರ ಕಂಡುಕೊಳ್ಳಲು ಮೇಲಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಸೂಚಿಸಿದರು.
ಅಕ್ಟೋಬರ್ ಅಂತ್ಯದೊಳಗೆ ಪ್ಲಾಸ್ಟಿಕ್ ಪಾರ್ಕ್ ಸಿದ್ಧಪಡಿಸಿ
ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಇಲಾಖೆಯ ಮೂಲಕ ಮಂಗಳೂರಿನ ಗಂಜಿಮಠದಲ್ಲಿ ನಿರ್ಮಾಣವಾಗುತ್ತಿರುವ ಪ್ಲಾಸ್ಟಿಕ್ ಪಾರ್ಕ್‌ನ ಬಾಕಿ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಿ, ಅಕ್ಟೋಬರ್ ಅಂತ್ಯದೊಳಗೆ ಉದ್ಘಾಟನೆಗೆ ಸಿದ್ಧಪಡಿಸುವಂತೆ ಸಂಸದರು ಅಧಿಕಾರಿಗಳಿಗೆ ಸೂಚಿಸಿದರು.
ಪ್ರಧಾನಮಂತ್ರಿ ಜನಜಾತಿ ಆದಿವಾಸಿ ನ್ಯಾಯ ಮಹಾ ಅಭಿಯಾನ (ಪಿಎಂ ಜನಮನ್) ಯೋಜನೆಯಡಿ ಜಿಲ್ಲೆಯ ಪ್ರತಿಯೊಂದು ಕೊರಗ ಕುಟುಂಬಕ್ಕೂ ಮನೆ ನಿರ್ಮಿಸಿಕೊಡಬೇಕು. ಯೋಜನೆಯ ಅನುಷ್ಠಾನವನ್ನು ಪರಿಣಾಮಕಾರಿಯಾಗಿ ಕೈಗೊಳ್ಳಲು ಎನ್‌ಜಿಒಗಳನ್ನು ಒಳಗೊಂಡುಕೊಂಡು ಯೋಜನೆ ರೂಪಿಸುವುದು ಸೂಕ್ತ ಎಂದು ಅವರು ಸಲಹೆ ನೀಡಿದರು.
ಹೆದ್ದಾರಿ, ದಾರಿದೀಪ ನಿರ್ವಹಣೆಗೆ ಸೂಚನೆ
ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಣ್ಣೂರು–ಸುರತ್ಕಲ್ ನಡುವಿನ ದಾರಿದೀಪಗಳ ನಿರ್ವಹಣೆಯನ್ನು ಸಮರ್ಪಕವಾಗಿ ಕೈಗೊಳ್ಳಬೇಕು. ಸರ್ವಿಸ್ ರಸ್ತೆ ಕಾಮಗಾರಿಗೂ ವೇಗ ನೀಡಬೇಕು ಎಂದು ಬ್ರಿಜೇಶ್ ಚೌಟ ಸೂಚಿಸಿದರು.
ಪಾಂಡೇಶ್ವರ ರೈಲ್ವೆ ಲೆವೆಲ್ ಕ್ರಾಸಿಂಗ್ ಸಮಸ್ಯೆ, ಮಲ್ಟಿಲೆವೆಲ್ ಕಾರ್ ಪಾರ್ಕಿಂಗ್ ಯೋಜನೆ, ದಾರಿದೀಪಗಳ ನಿರ್ವಹಣೆ ಹಾಗೂ ರಿವರ್‌ಫ್ರಂಟ್ ಯೋಜನೆ ಕುರಿತು ಪ್ರತ್ಯೇಕ ಸಭೆ ನಡೆಸಬೇಕು ಎಂದು ಶಾಸಕ ವೇದವ್ಯಾಸ ಕಾಮತ್ ಒತ್ತಾಯಿಸಿದರು.
ಸಭೆಯಲ್ಲಿ ಶಾಸಕರಾದ ರಾಜೇಶ್ ನಾಯ್ಕ, ಉಮಾನಾಥ್ ಕೋಟ್ಯಾನ್, ಜಿಲ್ಲಾ ಪಂಚಾಯತ್ ಸಿಇಒ ನರ್ವಡೆ, ಎಸ್‌ಪಿ ಡಾ. ಅರುಣ್ ಕುಮಾರ್, ಡಿಸಿಪಿ ಮಿಥುನ್ ಹಾಗೂ ಮನಪಾ ಆಯುಕ್ತ ರಾಹುಲ್ ರತ್ನಂ ಪಾಂಡೆ ಉಪಸ್ಥಿತರಿದ್ದರು.
ವಿಮಾನ ನಿಲ್ದಾಣದ ಸಮೀಪ ಹೊಸ ರೈಲು ನಿಲ್ದಾಣ
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ಹೊಸ ರೈಲು ನಿಲ್ದಾಣ ಸ್ಥಾಪಿಸುವ ಕುರಿತು ಕೇಂದ್ರ ರೈಲ್ವೆ ಸಚಿವರೊಂದಿಗೆ ಪ್ರಸ್ತಾಪಿಸಲಾಗಿದ್ದು, ಅವರು ಸಮ್ಮತಿ ಸೂಚಿಸಿದ್ದಾರೆ ಎಂದು ಸಂಸದರು ತಿಳಿಸಿದರು.
ವಿಮಾನ ನಿಲ್ದಾಣದ ಸುತ್ತಮುತ್ತ ಸೂಕ್ತ ಸ್ಥಳಾವಕಾಶ ಲಭ್ಯವಿದ್ದರೆ ‘ಹೊಸ ಮಂಗಳೂರು ನಾರ್ತ್ ರೈಲು ನಿಲ್ದಾಣ’ ಸ್ಥಾಪಿಸಲು ಕ್ರಮ ಕೈಗೊಳ್ಳಬೇಕು. ಸ್ಥಳಾವಕಾಶದ ಸಮಸ್ಯೆಯಿದ್ದರೆ ಜೋಕಟ್ಟೆ ರೈಲು ನಿಲ್ದಾಣವನ್ನು ಮೇಲ್ದರ್ಜೆಗೇರಿಸಲು ಕೂಡಲೇ ಪ್ರಸ್ತಾವನೆ ಸಲ್ಲಿಸಬೇಕು ಎಂದು ಅವರು ಸೂಚಿಸಿದರು.
ಅಮೃತ್ ಭಾರತ್ ಯೋಜನೆಯಡಿ ಮಂಗಳೂರು ಜಂಕ್ಷನ್ ಮತ್ತು ಸುಬ್ರಹ್ಮಣ್ಯ ರೈಲು ನಿಲ್ದಾಣಗಳ ಅಭಿವೃದ್ಧಿ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸುವಂತೆಯೂ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಬೆಳೆ ಹಾನಿಗೆ ಹೆಚ್ಚಿನ ಪರಿಹಾರಕ್ಕೆ ಒತ್ತು
ಪ್ರಸಕ್ತ ಮುಂಗಾರು ಮಳೆಯಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 18.92 ಎಕರೆ ಅಡಿಕೆ ಬೆಳೆ ಹಾನಿಯಾಗಿದ್ದು, 137 ರೈತರಿಗೆ ಸುಮಾರು ₹5.6 ಲಕ್ಷ ಪರಿಹಾರ ನೀಡುವ ಕುರಿತು ವರದಿ ಸಿದ್ಧಪಡಿಸಲಾಗಿದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿ ಸಭೆಗೆ ಮಾಹಿತಿ ನೀಡಿದರು.
ಬೆಳೆ ಹಾನಿಯಿಂದ ಸಂಕಷ್ಟಕ್ಕೊಳಗಾದ ರೈತರಿಗೆ ಸಾಧ್ಯವಾದಷ್ಟು ಹೆಚ್ಚಿನ ಪರಿಹಾರ ದೊರೆಯುವಂತೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಅಧಿಕಾರಿಗಳಿಗೆ ಸೂಚಿಸಿದರು.
About the Author
suddilive Suddilive.com covers Karnataka news, politics, education, employment, sports, technology, and current affairs. He is committed to providing accurate, timely, and reliable information through responsible digital journalism.
📢 SUDDI LIVE WhatsApp Community
ತಾಜಾ ಸುದ್ದಿಗಳು, ಬ್ರೇಕಿಂಗ್ ನ್ಯೂಸ್, ರಾಜಕೀಯ, ಕ್ರೀಡೆ, ಮನರಂಜನೆ ಹಾಗೂ ಸ್ಥಳೀಯ ಸುದ್ದಿಗಳಿಗಾಗಿ SUDDI LIVE WhatsApp Community ಸೇರಿ.
📲 Join WhatsApp Community📢 SUDDI LIVE Facebook Page
ತಾಜಾ ಸುದ್ದಿಗಳು, ಬ್ರೇಕಿಂಗ್ ನ್ಯೂಸ್, ರಾಜಕೀಯ, ಕ್ರೀಡೆ, ಮನರಂಜನೆ ಹಾಗೂ ಸ್ಥಳೀಯ ಸುದ್ದಿಗಳಿಗಾಗಿ SUDDI LIVE Facebook ಪೇಜ್ ಅನ್ನು Follow ಮಾಡಿ.
👍 Follow SUDDI LIVEನಿಮ್ಮ ಬೆಂಬಲವೇ ನಮ್ಮ ಶಕ್ತಿ ❤️

