ಉಡುಪಿ: ವಂದೇ ಮಾತರಂ ಹಾಡಿನ ಇತಿಹಾಸವನ್ನು ನೆನಪಿಸಿಕೊಂಡಾಗ ದೇಶಭಕ್ತಿಯ ರೋಮಾಂಚನ ಮೂಡುತ್ತದೆ. ರಾಷ್ಟ್ರಗೀತೆಯಷ್ಟೇ ಗೌರವ ಮತ್ತು ಮಹತ್ವ ವಂದೇ ಮಾತರಂಗೆ ದೊರೆತಿರುವುದು ಸಂತಸದ ಸಂಗತಿಯಾಗಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ನಗರದ ಎಂಜಿಎಂ ಕಾಲೇಜಿನ ಮುದ್ದಣ್ಣ ಮಂಟಪದಲ್ಲಿ ಬುಧವಾರ ರಂಗಭೂಮಿ ಉಡುಪಿ, ಎಂಜಿಎಂ ಕಾಲೇಜು ಹಾಗೂ ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಸಹಯೋಗದಲ್ಲಿ ಆಯೋಜಿಸಿದ್ದ ವಂದೇ ಮಾತರಂ 150ರ ಸಂಭ್ರಮಾಚರಣೆ ಹಾಗೂ ಮಹಾಕವಿ ಕಾಳಿದಾಸ ಜಯಂತಿ ಅಂಗವಾಗಿ ನಡೆದ ಯುವ ರಂಗೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.
"ಒಂದು ಕಾಲದಲ್ಲಿ ಕೆಲವು ಕಾರ್ಯಕ್ರಮಗಳಲ್ಲಿ ವಂದೇ ಮಾತರಂ ಹಾಡಬಾರದು ಎಂಬ ವಿವಾದಗಳು ಕೇಳಿಬಂದಿದ್ದವು. ಆದರೆ ಇಂದು ದೇಶದಾದ್ಯಂತ ಅದೇ ಹಾಡಿನ ಮೂಲಕ ಜನರು ಒಂದಾಗುತ್ತಿದ್ದಾರೆ. ಸುಮಾರು 4 ಸಾವಿರ ಕಲಾವಿದರು, 20 ಲಕ್ಷಕ್ಕೂ ಅಧಿಕ ಜನರ ಭಾಗವಹಿಸುವಿಕೆಯಲ್ಲಿ ಈ ಕಾರ್ಯಕ್ರಮ ದೇಶದ ವಿವಿಧ ಭಾಗಗಳಲ್ಲಿ ಏಕಕಾಲದಲ್ಲಿ ನಡೆಯುತ್ತಿರುವುದು ಹೆಮ್ಮೆಯ ವಿಚಾರ. ಇಂತಹ ಮಹತ್ವದ ಕಾರ್ಯಕ್ರಮವನ್ನು ಉಡುಪಿಗೆ ತಂದಿರುವ ರಂಗಭೂಮಿ ಉಡುಪಿ ಅಭಿನಂದನೆಗೆ ಅರ್ಹವಾಗಿದೆ," ಎಂದು ಅವರು ಹೇಳಿದರು.
ಮಣಿಪಾಲ ಮಾಹೆಯ ಸಹಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್ ಮಾತನಾಡಿ, ಯುವಜನರಲ್ಲಿ ಭಾರತೀಯ ಸಂಸ್ಕೃತಿ, ಸಾಹಿತ್ಯ ಮತ್ತು ಕಲೆಯ ಬಗ್ಗೆ ಅರಿವು ಮೂಡಿಸುವ ಕಾರ್ಯದಲ್ಲಿ ರಂಗಭೂಮಿ ಉಡುಪಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಪ್ರಯತ್ನ ಶ್ಲಾಘನೀಯವಾಗಿದೆ. ಇಂತಹ ಕಾರ್ಯಕ್ರಮಗಳು ಇಂದಿನ ಸಮಾಜಕ್ಕೆ ಅತ್ಯಂತ ಅಗತ್ಯವೆಂದರು.
ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ. ಗಫೂರ್ ಮಾತನಾಡಿ, ಭಾರತದ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ವಂದೇ ಮಾತರಂ ದೇಶವನ್ನು ಒಗ್ಗೂಡಿಸುವ ಶಕ್ತಿಯಾಗಿ ಕಾರ್ಯನಿರ್ವಹಿಸಿತ್ತು ಎಂದು ಹೇಳಿದರು.
ವಂದೇ ಮಾತರಂ ಅಭಿಯಾನದ ಕುರಿತು ಪ್ರೊ. ಪವನ್ ಕಿರಣ್ ಕೆರೆ ಮಾಹಿತಿ ನೀಡಿ, ದೇಶಪ್ರೇಮ ಮತ್ತು ಭಾರತೀಯ ಸಂಸ್ಕೃತಿಯ ಮೌಲ್ಯಗಳನ್ನು ರಂಗಭೂಮಿಯ ಮೂಲಕ ಜನರಿಗೆ ತಲುಪಿಸುವ ಉದ್ದೇಶದಿಂದ ದೇಶದಾದ್ಯಂತ 150 ರಂಗಪ್ರಯೋಗಗಳನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.
"ಭಾರತೀಯ ಸಾಹಿತ್ಯ ಮತ್ತು ರಂಗಭೂಮಿಗೆ ಅಪಾರ ಕೊಡುಗೆ ನೀಡಿದ ಮಹಾಕವಿ ಕಾಳಿದಾಸರ ಜಯಂತಿಯನ್ನು ಈ ಮಹೋತ್ಸವದೊಂದಿಗೆ ಸಂಯೋಜಿಸಲಾಗಿದೆ. 39ಕ್ಕೂ ಹೆಚ್ಚು ಭಾಷೆ ಹಾಗೂ ಉಪಭಾಷೆಗಳಲ್ಲಿ ರಂಗಪ್ರಯೋಗಗಳು ನಡೆಯಲಿದ್ದು, ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡು 'ಒಂದು ದೇಶ – ಒಂದು ಆಚರಣೆ' ಎಂಬ ಭಾವೈಕ್ಯವನ್ನು ಸಾರುವ ಪ್ರಯತ್ನ ಇದಾಗಿದೆ. ದೇಶದಾದ್ಯಂತ 150ಕ್ಕೂ ಹೆಚ್ಚು ಸಂಸ್ಥೆಗಳು ಹಾಗೂ 4 ಸಾವಿರಕ್ಕೂ ಅಧಿಕ ರಂಗಕರ್ಮಿಗಳು ಈ ಮಹೋತ್ಸವದಲ್ಲಿ ಭಾಗಿಯಾಗಿದ್ದಾರೆ," ಎಂದರು.
ಈ ಸಂದರ್ಭದಲ್ಲಿ ಮಹಾಕವಿ ಕಾಳಿದಾಸರ ಕುರಿತು ಶಾರದಾ ರೆಸಿಡೆನ್ಸಿಯಲ್ ಸ್ಕೂಲ್‌ನ ನಿರ್ದೇಶಕ, ಶಿಕ್ಷಣತಜ್ಞ ಹಾಗೂ ಚಿಂತಕ ಪ್ರಭಾಕರ್ ಜಿ.ಪಿ. ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಶಾಸಕರಾದ ಯಶಪಾಲ್ ಸುವರ್ಣ, ಕಿರಣ್ ಕುಮಾರ್ ಕೊಡ್ಗಿ, ಗುರುರಾಜ ಗಂಟಿಹೊಳೆ, ಅಂಬಲಪಾಡಿ ದೇವಸ್ಥಾನದ ಧರ್ಮದರ್ಶಿ ಡಾ. ಎನ್.ಬಿ. ವಿಜಯ ಬಲ್ಲಾಳ, ರಂಗಭೂಮಿ ಉಡುಪಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಪ್ರದೀಪ್ ಚಂದ್ರ ಕುತ್ಪಾಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ತುಳುಕೂಟ ಉಡುಪಿ ಅಧ್ಯಕ್ಷ ಬಿ. ಜಯಕರ ಶೆಟ್ಟಿ ಇಂದ್ರಾಳಿ, ಮಾಹೆಯ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಕಾರ್ಯದರ್ಶಿ ನಾರಾಯಣ ಸಭಾಹಿತ್, ಎಂಜಿಎಂ ಕಾಲೇಜಿನ ಪ್ರಾಂಶುಪಾಲೆ ಡಾ. ಗಾಯತ್ರಿ ಗಿರಿಧರ್ ಪೈ ಸೇರಿದಂತೆ ಹಲವು ಗಣ್ಯರು, ವಿವಿಧ ರಂಗತಂಡಗಳ ಪ್ರತಿನಿಧಿಗಳು ಮತ್ತು ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು.
ಲೇಖಕಿ ಪೂರ್ಣಿಮಾ ಸುರೇಶ್ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಎಂಜಿಎಂ ಕಾಲೇಜಿನ ವಿದ್ಯಾರ್ಥಿಗಳು ಯುವ ರಂಗೋತ್ಸವದ ಅಂಗವಾಗಿ 'ಸ್ವಾತಂತ್ರ್ಯ ಶರದಿ' ನಾಟಕವನ್ನು ಯಶಸ್ವಿಯಾಗಿ ಪ್ರದರ್ಶಿಸಿದರು.
About the Author
Prajwal is the Founder and Editor of Suddilive.com. He covers Karnataka news, politics, education, employment, sports, technology, and current affairs. He is committed to providing accurate, timely, and reliable information through responsible digital journalism.
📢 SUDDI LIVE WhatsApp Community
ತಾಜಾ ಸುದ್ದಿಗಳು, ಬ್ರೇಕಿಂಗ್ ನ್ಯೂಸ್, ರಾಜಕೀಯ, ಕ್ರೀಡೆ, ಮನರಂಜನೆ ಹಾಗೂ ಸ್ಥಳೀಯ ಸುದ್ದಿಗಳಿಗಾಗಿ SUDDI LIVE WhatsApp Community ಸೇರಿ.
📲 Join WhatsApp Community📢 SUDDI LIVE Facebook Page
ತಾಜಾ ಸುದ್ದಿಗಳು, ಬ್ರೇಕಿಂಗ್ ನ್ಯೂಸ್, ರಾಜಕೀಯ, ಕ್ರೀಡೆ, ಮನರಂಜನೆ ಹಾಗೂ ಸ್ಥಳೀಯ ಸುದ್ದಿಗಳಿಗಾಗಿ SUDDI LIVE Facebook ಪೇಜ್ ಅನ್ನು Follow ಮಾಡಿ.
👍 Follow SUDDI LIVEನಿಮ್ಮ ಬೆಂಬಲವೇ ನಮ್ಮ ಶಕ್ತಿ ❤️

