ಮಂಗಳೂರು, ಜು. 15 ಎಸ್‌ಐಆರ್ ಕುರಿತು ಸಾರ್ವಜನಿಕರು ಯಾವುದೇ ರೀತಿಯ ಭಯ ಅಥವಾ ಗೊಂದಲಕ್ಕೆ ಒಳಗಾಗುವ ಅಗತ್ಯವಿಲ್ಲ. ಇದು ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕುವ ಪ್ರಕ್ರಿಯೆಯಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಸ್ಪಷ್ಟಪಡಿಸಿದರು.
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‌ನ ನೇತ್ರಾವತಿ ಸಭಾಂಗಣದಲ್ಲಿ ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸ್ವೀಪ್ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ವಿಶೇಷ ಮತದಾರರ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸುಮಾರು 24 ವರ್ಷಗಳ ಬಳಿಕ ಎಸ್‌ಐಆರ್ ಪ್ರಕ್ರಿಯೆ ನಡೆಯುತ್ತಿದೆ ಎಂದು ತಿಳಿಸಿದರು.
18 ವರ್ಷ ಪೂರ್ಣಗೊಂಡ ಪ್ರತಿಯೊಬ್ಬ ಅರ್ಹ ನಾಗರಿಕನಿಗೂ ಮತದಾನದ ಸಂವಿಧಾನಬದ್ಧ ಹಕ್ಕು ದೊರೆಯಬೇಕು. ಈ ಉದ್ದೇಶದಿಂದಲೇ ಎಸ್‌ಐಆರ್ ಮೂಲಕ ಅರ್ಹ ಮತದಾರರನ್ನು ಗುರುತಿಸಿ ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಳಿಸುವ ಹಾಗೂ ಮಾಹಿತಿಯನ್ನು ನವೀಕರಿಸುವ ಕಾರ್ಯ ನಡೆಯುತ್ತಿದೆ ಎಂದು ಹೇಳಿದರು.
ಮತದಾರರ ಪಟ್ಟಿಯಲ್ಲಿ ಹೆಸರು ಇದ್ದಾಗ ಮಾತ್ರ ಮತದಾನದ ಹಕ್ಕು ಚಲಾಯಿಸಲು ಸಾಧ್ಯ. ಪ್ರತಿಯೊಬ್ಬ ಮತದಾರರೂ ತಪ್ಪದೇ ಮತ ಚಲಾಯಿಸಬೇಕು. ಕೆಲವೊಮ್ಮೆ ಒಂದೇ ಒಂದು ಮತವೂ ಅಭ್ಯರ್ಥಿಯ ಗೆಲುವು-ಸೋಲನ್ನು ನಿರ್ಧರಿಸುವಷ್ಟು ಮಹತ್ವದ್ದಾಗಿರುತ್ತದೆ. ಆದ್ದರಿಂದ ಯುವಜನತೆ ಮತದಾನದ ಮಹತ್ವವನ್ನು ಅರಿತು ಚುನಾವಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿನಾಯಕ್ ಕರ್ಬಾರಿ, ಎಸ್‌ಐಆರ್ ಪ್ರಕ್ರಿಯೆಯ ಭಾಗವಾಗಿ ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್‌ಒ) ಈಗಾಗಲೇ ಮನೆಮನೆಗೆ ತೆರಳಿ ಗಣತಿ ನಮೂನೆಗಳನ್ನು ವಿತರಿಸಿರುವುದಾಗಿ ತಿಳಿಸಿದರು.
ಸಾರ್ವಜನಿಕರು ನಮೂನೆಗಳನ್ನು ಸರಿಯಾಗಿ ಭರ್ತಿ ಮಾಡಿ ಆದಷ್ಟು ಬೇಗ ತಮ್ಮ ವ್ಯಾಪ್ತಿಯ ಬಿಎಲ್‌ಒಗಳಿಗೆ ಸಲ್ಲಿಸಬೇಕು. ವಿದ್ಯಾರ್ಥಿಗಳು ತಮ್ಮ ಕುಟುಂಬ ಸದಸ್ಯರು ಮಾತ್ರವಲ್ಲದೆ ನೆರೆಹೊರೆಯವರಿಗೂ ಈ ಕುರಿತು ಜಾಗೃತಿ ಮೂಡಿಸಿ ನಮೂನೆಗಳನ್ನು ಭರ್ತಿ ಮಾಡಲು ಪ್ರೋತ್ಸಾಹಿಸಬೇಕು ಎಂದು ಅವರು ಮನವಿ ಮಾಡಿದರು.
ಸಂಪೂರ್ಣ ಮಾಹಿತಿ ನೀಡಿದರೆ ಮೊಬೈಲ್ ಅಪ್ಲಿಕೇಶನ್ ಮೂಲಕ ಎರಡುರಿಂದ ಐದು ನಿಮಿಷಗಳಲ್ಲಿ ವಿವರಗಳನ್ನು ಅಪ್‌ಲೋಡ್ ಮಾಡಬಹುದು. ಮಾಹಿತಿ ಅಪೂರ್ಣವಾಗಿದ್ದರೆ ಅಥವಾ ತಪ್ಪಿದ್ದರೆ ಪರಿಶೀಲನೆಗೆ 30 ನಿಮಿಷದಿಂದ ಒಂದು ಗಂಟೆಯವರೆಗೆ ಸಮಯ ಬೇಕಾಗಬಹುದು. ಅಪ್‌ಲೋಡ್ ಮಾಡಿದ ಮಾಹಿತಿಯನ್ನು ಅಂತಿಮಗೊಳಿಸುವ ಮೊದಲು ಬಿಎಲ್‌ಒ ಮೇಲ್ವಿಚಾರಕರು ಕೂಡ ಪರಿಶೀಲನೆ ನಡೆಸುತ್ತಾರೆ ಎಂದು ವಿವರಿಸಿದರು.
ಹೀಗಾಗಿ ಎಸ್‌ಐಆರ್ ಪ್ರಕ್ರಿಯೆ ಸುಗಮವಾಗಿ ಪೂರ್ಣಗೊಳ್ಳಲು ಸಾರ್ವಜನಿಕರು ವಿಳಂಬ ಮಾಡದೆ ಭರ್ತಿ ಮಾಡಿದ ನಮೂನೆಗಳನ್ನು ಸಲ್ಲಿಸಬೇಕು ಎಂದು ಅವರು ಮನವಿ ಮಾಡಿದರು.
ವಿದೇಶದಲ್ಲಿ ನೆಲೆಸಿರುವ ಮತದಾರರೂ ಎಸ್‌ಐಆರ್ ಪ್ರಕ್ರಿಯೆಯನ್ನು ಆನ್‌ಲೈನ್ ಮೂಲಕ ಪೂರ್ಣಗೊಳಿಸಬಹುದಾಗಿದೆ. ಈಗಾಗಲೇ ದಕ್ಷಿಣ ಕನ್ನಡ ಜಿಲ್ಲೆಯ ಸುಮಾರು 1,700 ಮಂದಿ ಆನ್‌ಲೈನ್ ಮೂಲಕ ತಮ್ಮ ವಿವರಗಳನ್ನು ಸಲ್ಲಿಸಿದ್ದಾರೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಪ್ರೊಬೇಷನರಿ ಐಎಎಸ್ ಅಧಿಕಾರಿ ಅರ್ಚಿತ್ ಡೋಂಗ್ರೆ ಉಪಸ್ಥಿತರಿದ್ದರು. ಜಿಲ್ಲಾ ಯೋಜನಾ ಸಮನ್ವಯ ಅಧಿಕಾರಿ ಡಾ. ಸುಮಂಗಲಾ ಎಸ್. ನಾಯಕ್ ಸ್ವಾಗತಿಸಿದರು. ಗಾಯತ್ರಿ ಕಾರ್ಯಕ್ರಮ ನಿರೂಪಿಸಿದರು.
About the Author
Prajwal is the Founder and Editor of Suddilive.com. He covers Karnataka news, politics, education, employment, sports, technology, and current affairs. He is committed to providing accurate, timely, and reliable information through responsible digital journalism.
📢 SUDDI LIVE WhatsApp Community
ತಾಜಾ ಸುದ್ದಿಗಳು, ಬ್ರೇಕಿಂಗ್ ನ್ಯೂಸ್, ರಾಜಕೀಯ, ಕ್ರೀಡೆ, ಮನರಂಜನೆ ಹಾಗೂ ಸ್ಥಳೀಯ ಸುದ್ದಿಗಳಿಗಾಗಿ SUDDI LIVE WhatsApp Community ಸೇರಿ.
📲 Join WhatsApp Community📢 SUDDI LIVE Facebook Page
ತಾಜಾ ಸುದ್ದಿಗಳು, ಬ್ರೇಕಿಂಗ್ ನ್ಯೂಸ್, ರಾಜಕೀಯ, ಕ್ರೀಡೆ, ಮನರಂಜನೆ ಹಾಗೂ ಸ್ಥಳೀಯ ಸುದ್ದಿಗಳಿಗಾಗಿ SUDDI LIVE Facebook ಪೇಜ್ ಅನ್ನು Follow ಮಾಡಿ.
👍 Follow SUDDI LIVEನಿಮ್ಮ ಬೆಂಬಲವೇ ನಮ್ಮ ಶಕ್ತಿ ❤️

