ಮಂಗಳೂರು: ನಗರದ ಕೊಡಿಯಾಲಬೈಲಿನ ಜಿಲ್ಲಾ ಕಾರಾಗೃಹದಲ್ಲಿ ಅಕ್ರಮವಾಗಿ ಮಾದಕ ವಸ್ತುಗಳು ಹಾಗೂ ಮೊಬೈಲ್ ಫೋನ್‌ಗಳನ್ನು ಒಳಗೆ ಎಸೆಯುವ ಘಟನೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜೈಲಿನ ಭದ್ರತೆಯನ್ನು ಮತ್ತಷ್ಟು ಬಲಪಡಿಸುವ ಕ್ರಮವಾಗಿ ಹೊರ ಆವರಣ ಗೋಡೆಯ ಮೇಲ್ಭಾಗದಲ್ಲಿ ಎತ್ತರದ ತಂತಿ ಬೇಲಿ ಅಳವಡಿಸುವ ಕಾಮಗಾರಿ ಆರಂಭಿಸಲಾಗಿದೆ. ಈ ಯೋಜನೆಗೆ ಕಾರಾಗೃಹ ಇಲಾಖೆಯ ನಿಧಿಯಿಂದ ಸುಮಾರು ₹50 ಲಕ್ಷ ವೆಚ್ಚ ಮಾಡಲಾಗುತ್ತಿದೆ.
ಜೈಲಿನ ಹೊರಭಾಗದ ರಸ್ತೆಯಲ್ಲಿ ನಿಂತು ಪ್ಲಾಸ್ಟಿಕ್ ಪೊಟ್ಟಣಗಳಲ್ಲಿ ಮಾದಕ ವಸ್ತುಗಳು ಹಾಗೂ ಮೊಬೈಲ್‌ಗಳನ್ನು ಕಲ್ಲು ಕಟ್ಟಿ ಆವರಣದೊಳಗೆ ಎಸೆಯುವ ಪ್ರಕರಣಗಳು ಹಲವು ಬಾರಿ ವರದಿಯಾಗಿದ್ದು, ಇದರಿಂದ ಜೈಲು ಅಧಿಕಾರಿಗಳು ಹಾಗೂ ಪೊಲೀಸರಿಗೆ ಭದ್ರತಾ ಸವಾಲು ಎದುರಾಗಿತ್ತು. ಈ ಹಿನ್ನೆಲೆಯಲ್ಲಿ ಲೋಕೋಪಯೋಗಿ ಇಲಾಖೆಯ ಮೂಲಕ ಹೊಸ ತಂತಿ ಬೇಲಿ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಕಳೆದ ಆರು ತಿಂಗಳಿನಿಂದ ಟೆಂಡರ್ ಸೇರಿದಂತೆ ಅಗತ್ಯ ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕ ಇದೀಗ ಕಾಮಗಾರಿ ಆರಂಭವಾಗಿದೆ.
ಪ್ರಸ್ತುತ ಜೈಲಿನ ಸುತ್ತಮುತ್ತ ಸುಮಾರು 15 ಅಡಿ ಎತ್ತರದ ಕಲ್ಲಿನ ಆವರಣ ಗೋಡೆ ಇದ್ದು, ಅದರ ಮೇಲ್ಭಾಗದಲ್ಲಿ ಎರಡು ಅಡಿ ತಂತಿ ಬೇಲಿ ಅಳವಡಿಸಲಾಗಿದೆ. ಜೊತೆಗೆ ಜೈಲಿನ ವಿವಿಧ ಭಾಗಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳ ಮೂಲಕ ನಿಗಾ ವಹಿಸಲಾಗುತ್ತಿದೆ. ಆದಾಗ್ಯೂ ಹೊರಗಿನಿಂದ ಅಕ್ರಮ ವಸ್ತುಗಳನ್ನು ಎಸೆಯುವ ಪ್ರಯತ್ನಗಳು ಮುಂದುವರಿದಿರುವ ಕಾರಣ ಹೊಸ ಭದ್ರತಾ ವ್ಯವಸ್ಥೆ ಅಗತ್ಯವಾಗಿದೆ.
ಹೊಸದಾಗಿ ನಿರ್ಮಾಣವಾಗುತ್ತಿರುವ ತಂತಿ ಬೇಲಿ ಆವರಣ ಗೋಡೆಯ ಮೇಲ್ಭಾಗದಿಂದ ಸುಮಾರು 12 ಅಡಿ ಎತ್ತರಕ್ಕೆ ನಿರ್ಮಾಣವಾಗಲಿದೆ. ಇದರ ಜಾಲರಿಗಳು ಸಣ್ಣ ಗಾತ್ರದಲ್ಲಿರುವುದರಿಂದ ಕಲ್ಲು ಅಥವಾ ಯಾವುದೇ ಪೊಟ್ಟಣಗಳನ್ನು ಒಳಗೆ ಎಸೆಯುವುದು ಬಹುತೇಕ ಅಸಾಧ್ಯವಾಗಲಿದೆ ಎಂದು ಜೈಲು ಅಧೀಕ್ಷಕ ಶರಣ ಬಸಪ್ಪ ತಿಳಿಸಿದ್ದಾರೆ.
ಜೈಲಿನ ಹೊರ ಆವರಣದ ಭದ್ರತೆಗಾಗಿ ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆ (ಕೆಎಸ್‌ಐಎಸ್‌ಎಫ್) ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಜೈಲಿಗೆ ಪ್ರವೇಶಿಸುವ ಪ್ರತಿಯೊಬ್ಬರನ್ನೂ ಕಟ್ಟುನಿಟ್ಟಾಗಿ ತಪಾಸಣೆ ನಡೆಸಿದ ಬಳಿಕವೇ ಒಳಗೆ ಪ್ರವೇಶಿಸಲು ಅವಕಾಶ ನೀಡಲಾಗುತ್ತಿದೆ. ಅಕ್ರಮವಾಗಿ ಮಾದಕ ವಸ್ತುಗಳು ಹಾಗೂ ಮೊಬೈಲ್‌ಗಳನ್ನು ಸಾಗಿಸಲು ಯತ್ನಿಸಿದ ಹಲವು ಪ್ರಕರಣಗಳನ್ನು ಕೆಎಸ್‌ಐಎಸ್‌ಎಫ್ ಸಿಬ್ಬಂದಿ ಪತ್ತೆಹಚ್ಚಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಸ್ತುತ ಜೈಲಿನಲ್ಲಿರುವ ಕೈದಿಗಳಲ್ಲಿ ಶೇಕಡಾ 50ರಿಂದ 60ರಷ್ಟು ಮಂದಿ ಮಾದಕ ವ್ಯಸನಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಬಂಧಿತರಾಗಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ವಿಚಾರಣಾಧೀನ ಕೈದಿಗಳು ಹಾಗೂ ಆರು ತಿಂಗಳೊಳಗಿನ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳನ್ನು ಇಲ್ಲಿ ಇರಿಸಲಾಗುತ್ತಿದೆ.
210 ಕೈದಿಗಳ ಸಾಮರ್ಥ್ಯ ಹೊಂದಿರುವ ಕೊಡಿಯಾಲಬೈಲು ಜಿಲ್ಲಾ ಕಾರಾಗೃಹದಲ್ಲಿ ಜುಲೈ 11ರ ಅಂಕಿ-ಅಂಶಗಳ ಪ್ರಕಾರ 369 ಮಂದಿ ಕೈದಿಗಳಿದ್ದಾರೆ. ಸ್ಥಳಾವಕಾಶದ ಕೊರತೆಯಿಂದಾಗಿ 100ಕ್ಕೂ ಹೆಚ್ಚು ಕೈದಿಗಳನ್ನು ಶಿವಮೊಗ್ಗ ಸೇರಿದಂತೆ ರಾಜ್ಯದ ವಿವಿಧ ಕಾರಾಗೃಹಗಳಿಗೆ ಈಗಾಗಲೇ ಸ್ಥಳಾಂತರಿಸಲಾಗಿದೆ.
ಜೈಲಿನೊಳಗೆ ಅಕ್ರಮ ವಸ್ತುಗಳು ಪ್ರವೇಶಿಸದಂತೆ ತಡೆಯುವ ಉದ್ದೇಶದಿಂದ ಕೈಗೊಂಡಿರುವ ಈ ಭದ್ರತಾ ಕಾಮಗಾರಿಯನ್ನು ಸುಮಾರು 10 ತಿಂಗಳೊಳಗೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ ಎಂದು ಜೈಲು ಅಧೀಕ್ಷಕ ಶರಣ ಬಸಪ್ಪ ತಿಳಿಸಿದ್ದಾರೆ.
About the Author
Prajwal is the Founder and Editor of Suddilive.com. He covers Karnataka news, politics, education, employment, sports, technology, and current affairs. He is committed to providing accurate, timely, and reliable information through responsible digital journalism.
📢 SUDDI LIVE WhatsApp Community
ತಾಜಾ ಸುದ್ದಿಗಳು, ಬ್ರೇಕಿಂಗ್ ನ್ಯೂಸ್, ರಾಜಕೀಯ, ಕ್ರೀಡೆ, ಮನರಂಜನೆ ಹಾಗೂ ಸ್ಥಳೀಯ ಸುದ್ದಿಗಳಿಗಾಗಿ SUDDI LIVE WhatsApp Community ಸೇರಿ.
📲 Join WhatsApp Community📢 SUDDI LIVE Facebook Page
ತಾಜಾ ಸುದ್ದಿಗಳು, ಬ್ರೇಕಿಂಗ್ ನ್ಯೂಸ್, ರಾಜಕೀಯ, ಕ್ರೀಡೆ, ಮನರಂಜನೆ ಹಾಗೂ ಸ್ಥಳೀಯ ಸುದ್ದಿಗಳಿಗಾಗಿ SUDDI LIVE Facebook ಪೇಜ್ ಅನ್ನು Follow ಮಾಡಿ.
👍 Follow SUDDI LIVEನಿಮ್ಮ ಬೆಂಬಲವೇ ನಮ್ಮ ಶಕ್ತಿ ❤️

