ಬೆಂಗಳೂರು/ದಾವಣಗೆರೆ: ಕಾಂಗ್ರೆಸ್‌ನ ಹಿರಿಯ ಮುಖಂಡ ಹಾಗೂ ರಾಜ್ಯ ಸಚಿವ ಬಿ.ಜೆಡ್. ಜಮೀರ್ ಅಹಮದ್ ಖಾನ್ ವಿರುದ್ಧ ಗಂಭೀರ ಸ್ವರೂಪದ ಪಕ್ಷ ವಿರೋಧಿ ಚಟುವಟಿಕೆಯ ಆರೋಪ ಕೇಳಿಬಂದಿದ್ದು, ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್‌ನ ಅಧಿಕೃತ ಅಭ್ಯರ್ಥಿಯ ವಿರುದ್ಧವೇ ಆಂತರಿಕವಾಗಿ ಕೆಲಸ ಮಾಡಿದ್ದಾರೆ ಎನ್ನುವ ಆರೋಪಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಆಡಿಯೋ ಕ್ಲಿಪ್‌ನಿಂದ ಮತ್ತಷ್ಟು ಬಲ ಪಡೆದಿವೆ. ವರದಿ ಸುದ್ದಿ ಲೈವ್ ಡಾಟ್ ಕಾಮ್
'ಕಾಕ್ರೋಚ್ ಪಾರ್ಟಿ' ಹೆಸರಿನ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಈ ಆಡಿಯೋ ಸಂಭಾಷಣೆ ಹಂಚಿಕೊಳ್ಳಲಾಗಿದ್ದು, ಅದರಲ್ಲಿ ಕೇಳಿಬರುವ ಧ್ವನಿ ಸಚಿವ ಜಮೀರ್ ಅಹಮದ್ ಖಾನ್ ಅವರದ್ದೇ ಎಂದು ಹೇಳಲಾಗುತ್ತಿದೆ. ದಾವಣಗೆರೆಯ ಸ್ಥಳೀಯ ಕಾಂಗ್ರೆಸ್ ಮುಖಂಡ ಹಾಗೂ ಕೆಎಂಡಿಸಿ ನಿರ್ದೇಶಕ ಮೊಹಮ್ಮದ್ ಸಿರಾಜ್ ಅವರೊಂದಿಗೆ ಜಮೀರ್ ನಡೆಸಿದ್ದಾರೆ ಎನ್ನಲಾದ ಈ ಮಾತುಕತೆ ಇದೀಗ ರಾಜ್ಯ ರಾಜಕೀಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ವೈರಲ್ ಆಗಿರುವ ಆಡಿಯೋದಲ್ಲಿ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಗೆ ಮತದಾನವಾಗದಂತೆ ನೋಡಿಕೊಳ್ಳುವ ಕುರಿತು ಚರ್ಚೆ ನಡೆದಿರುವುದು ಕೇಳಿಬರುತ್ತಿದೆ ಎನ್ನಲಾಗುತ್ತಿದೆ. ಕ್ಷೇತ್ರದಲ್ಲಿ ಮುಸ್ಲಿಂ ಮತದಾರರ ಸಂಖ್ಯೆ ಸೀಮಿತವಾಗಿದ್ದು, ಅವರನ್ನು ಮತದಾನಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಕರೆತಂದರೆ ಅವರು ಕಾಂಗ್ರೆಸ್ ಅಭ್ಯರ್ಥಿಗೇ ಮತ ಹಾಕುವ ಸಾಧ್ಯತೆ ಇದೆ ಎಂದು ಜಮೀರ್ ಹೇಳಿರುವುದು ಆಡಿಯೋದಲ್ಲಿ ಕೇಳಿಬರುತ್ತದೆ ಎಂದು ಆರೋಪಿಸಲಾಗಿದೆ. ಅಲ್ಲದೆ, ಮತದಾರರನ್ನು ಮತಗಟ್ಟೆಗೆ ಕರೆತರುವ ಪ್ರಯತ್ನ ಮಾಡಬೇಡಿ ಮತ್ತು ಅವರು ಪಕ್ಷೇತರ ಅಭ್ಯರ್ಥಿ ಅಥವಾ ಎಸ್‌ಡಿಪಿಐ ಅಭ್ಯರ್ಥಿಗೆ ಮತ ಹಾಕಿದರೂ ಪರವಾಗಿಲ್ಲ ಎಂಬ ರೀತಿಯ ಮಾತುಗಳೂ ಆಡಿಯೋದಲ್ಲಿ ದಾಖಲಾಗಿವೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.
ವರದಿ ಸುದ್ದಿ ಲೈವ್ ಡಾಟ್ ಕಾಮ್
ಈ ಆಡಿಯೋದಲ್ಲಿ ಚುನಾವಣಾ ದಿನದ ಕಾರ್ಯಚಟುವಟಿಕೆಗಳ ಬಗ್ಗೆಯೂ ಜಮೀರ್ ಅಹಮದ್ ಅಸಮಾಧಾನ ವ್ಯಕ್ತಪಡಿಸಿರುವುದು ಕೇಳಿಬರುತ್ತದೆ. ಚುನಾವಣೆಯ ದಿನ ಮಧ್ಯಾಹ್ನ 1 ಗಂಟೆಯವರೆಗೂ ಸಂಪರ್ಕಕ್ಕೆ ಸಿಗದೇ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಕ್ಕೆ ಸ್ಥಳೀಯ ಮುಖಂಡ ಮೊಹಮ್ಮದ್ ಸಿರಾಜ್ ಅವರನ್ನು ಜಮೀರ್ ತರಾಟೆಗೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. “ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡರೆ ನಾನು ಏನು ಮಾಡಬೇಕು?” ಎಂದು ಪ್ರಶ್ನಿಸುವ ಧ್ವನಿ ಆಡಿಯೋದಲ್ಲಿ ಕೇಳಿಬರುತ್ತಿದೆ.
ಇದಕ್ಕೆ ಪ್ರತಿಕ್ರಿಯಿಸಿರುವ ಸಿರಾಜ್, ತಾವು ಬೆಳಗ್ಗೆ 7 ಗಂಟೆಯಿಂದಲೇ ವಾರ್ಡ್‌ನಲ್ಲಿ ಚುನಾವಣಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾಗಿ ತಿಳಿಸಿದ್ದಾರೆ. ತಮ್ಮ ಮೊಬೈಲ್ ಕಾರ್ಯನಿರ್ವಹಿಸದ ಕಾರಣ ಮಗನ ಮೊಬೈಲ್ ಬಳಸುತ್ತಿದ್ದೇನೆ ಹಾಗೂ ಹಫೀಜ್ ಸಾಬ್ ಕೂಡ ತಮ್ಮ ಜೊತೆಗಿದ್ದರು ಎಂದು ಸ್ಪಷ್ಟನೆ ನೀಡಲು ಪ್ರಯತ್ನಿಸಿರುವುದು ಆಡಿಯೋದಲ್ಲಿ ದಾಖಲಾಗಿರುವುದಾಗಿ ಹೇಳಲಾಗುತ್ತಿದೆ. ಸುದ್ದಿ ಲೈವ್ ಡಾಟ್ ಕಾಮ್
ಆದರೆ ಈ ಸಮರ್ಥನೆಯಿಂದ ತೃಪ್ತರಾಗದ ಜಮೀರ್, ಚುನಾವಣೆಯ ಮಹತ್ವವನ್ನು ಒತ್ತಿಹೇಳುತ್ತಾ ಸ್ಥಳೀಯ ನಾಯಕರ ವಿರುದ್ಧ ಅಸಮಾಧಾನ ಹೊರಹಾಕಿರುವುದು ಕೇಳಿಬರುತ್ತದೆ. “ನೀನು ಬೆಳಗ್ಗಿನಿಂದಲೇ ಅಲರ್ಟ್ ಆಗಿ ಕೆಲಸ ಮಾಡಬೇಕಿತ್ತು. ಇದು ನನ್ನ ಮರ್ಯಾದೆಯ ಪ್ರಶ್ನೆ. ಈ ಚುನಾವಣೆ ಕಾರಣದಿಂದ ನನಗೆ ರಾತ್ರಿಯೂ ಸರಿಯಾಗಿ ನಿದ್ದೆ ಬಂದಿಲ್ಲ” ಎಂದು ಜಮೀರ್ ಹೇಳಿರುವುದು ವೈರಲ್ ಆಡಿಯೋದಲ್ಲಿ ದಾಖಲಾಗಿರುವುದಾಗಿ ಸಾಮಾಜಿಕ ಜಾಲತಾಣ ಬಳಕೆದಾರರು ಹಂಚಿಕೊಳ್ಳುತ್ತಿದ್ದಾರೆ.
ಈ ಆಡಿಯೋ ನಿಜವೇ ಅಥವಾ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಮೂಲಕ ಸೃಷ್ಟಿಸಲಾಗಿದೆಯೇ ಎಂಬ ಬಗ್ಗೆ ಇನ್ನೂ ಯಾವುದೇ ಅಧಿಕೃತ ದೃಢೀಕರಣ ಹೊರಬಂದಿಲ್ಲ. ಸಚಿವ ಜಮೀರ್ ಅಹಮದ್ ಖಾನ್ ಅವರಿಂದಲೂ ಈ ಕುರಿತು ಸ್ಪಷ್ಟ ಪ್ರತಿಕ್ರಿಯೆ ಲಭ್ಯವಾಗಿಲ್ಲ. ಆದಾಗ್ಯೂ, ಆಡಿಯೋ ವೈರಲ್ ಆದ ಬೆನ್ನಲ್ಲೇ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆ ಆರಂಭವಾಗಿದ್ದು, ಕಾಂಗ್ರೆಸ್ ಪಕ್ಷದ ಒಳರಾಜಕೀಯದ ಬಗ್ಗೆ ಹಲವು ಪ್ರಶ್ನೆಗಳು ಉದ್ಭವಿಸಿವೆ.
ವರದಿ ಸುದ್ದಿ ಲೈವ್ ಡಾಟ್ ಕಾಮ್
ಒಬ್ಬ ಸಚಿವರೇ ತಮ್ಮ ಪಕ್ಷದ ಅಧಿಕೃತ ಅಭ್ಯರ್ಥಿಗೆ ವಿರುದ್ಧವಾಗಿ ಕೆಲಸ ಮಾಡಿದ್ದಾರೆ ಎಂಬ ಆರೋಪಗಳು ಸತ್ಯವಾಗಿದ್ದರೆ ಅದು ಕಾಂಗ್ರೆಸ್‌ಗೆ ದೊಡ್ಡ ಮಟ್ಟದ ಮುಜುಗರ ಉಂಟುಮಾಡುವ ಸಾಧ್ಯತೆಯಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಈ ಪ್ರಕರಣದ ಕುರಿತು ಕೆಪಿಸಿಸಿ ಹಾಗೂ ಕಾಂಗ್ರೆಸ್ ಹೈಕಮಾಂಡ್ ಯಾವ ರೀತಿಯ ಕ್ರಮ ಕೈಗೊಳ್ಳಲಿದೆ ಎಂಬುದರತ್ತ ರಾಜಕೀಯ ವಲಯದ ಚಿತ್ತ ನೆಟ್ಟಿದೆ.
ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ಆಡಿಯೋ ರಾಜ್ಯ ರಾಜಕೀಯದಲ್ಲಿ ಹೊಸ ವಿವಾದಕ್ಕೆ ಕಾರಣವಾಗಿದ್ದು, ಮುಂದಿನ ದಿನಗಳಲ್ಲಿ ಇದರ ಕುರಿತು ಇನ್ನಷ್ಟು ಬೆಳವಣಿಗೆಗಳು ನಡೆಯುವ ಸಾಧ್ಯತೆ ಇದೆ. ಆಡಿಯೋದ ಸತ್ಯಾಸತ್ಯತೆ ಹಾಗೂ ಅದರ ಹಿಂದಿನ ವಾಸ್ತವಾಂಶಗಳ ಬಗ್ಗೆ ಸ್ಪಷ್ಟತೆ ಸಿಗುವವರೆಗೆ ರಾಜಕೀಯ ವಲಯದಲ್ಲಿ ಕುತೂಹಲ ಮುಂದುವರಿಯುವ ಸಾಧ್ಯತೆಯಿದೆ.
ಸೂಚನೆ: ಜಮೀರ್ ಅಹಮದ್ ಖಾನ್ ಅವರದ್ದು ಎನ್ನಲಾದ ವೈರಲ್ ಆಡಿಯೋವನ್ನು ಸುದ್ದಿ ಲೈವ್ ಡಾಟ್ ಕಾಮ್ ಅಧಿಕೃತ ಆಗುವವರೆಗೆ ದೃಢೀಕರಿಸುವುದಿಲ್ಲ.
ವರದಿ ಸುದ್ದಿ ಲೈವ್ ಡಾಟ್ ಕಾಮ್
📢 SUDDI LIVE Facebook Page
ತಾಜಾ ಸುದ್ದಿಗಳು, ಬ್ರೇಕಿಂಗ್ ನ್ಯೂಸ್, ರಾಜಕೀಯ, ಕ್ರೀಡೆ, ಮನರಂಜನೆ ಹಾಗೂ ಸ್ಥಳೀಯ ಸುದ್ದಿಗಳಿಗಾಗಿ SUDDI LIVE Facebook ಪೇಜ್ ಅನ್ನು Follow ಮಾಡಿ.
👍 Follow SUDDI LIVEನಿಮ್ಮ ಬೆಂಬಲವೇ ನಮ್ಮ ಶಕ್ತಿ ❤️

