}

ಪ್ರಮಾಣ ವಚನ ಪತ್ರದಲ್ಲಿ ಇದ್ದದನ್ನು ಮಾತ್ರ ಓದಲು ರಾಜ್ಯಪಾಲರ ಸೂಚನೆ: ಸಚಿವರ ಅಸಮಾಧಾನ

suddilive.com
By -
0

 


ಬೆಂಗಳೂರು: ನೂತನ ಸರ್ಕಾರದ ಸಚಿವ ಸಂಪುಟದ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಕೆಲ ಸಚಿವರು ಮನೆ ದೇವರು, ಇಷ್ಟದೇವರು, ಮಹನೀಯರು ಹಾಗೂ ಸಂವಿಧಾನದ ಹೆಸರನ್ನು ಉಲ್ಲೇಖಿಸಿ ಪ್ರಮಾಣವಚನ ಸ್ವೀಕರಿಸಿದ ಘಟನೆ ಕೆಲಕಾಲ ಗೊಂದಲಕ್ಕೆ ಕಾರಣವಾಯಿತು. ಕಾರ್ಯಕ್ರಮದ ವೇಳೆ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ಪ್ರಮಾಣವಚನ ಪತ್ರದಲ್ಲಿ ನಮೂದಿಸಿರುವ ಪದಗಳನ್ನಷ್ಟೇ ಓದಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ ಪ್ರಸಂಗವೂ ನಡೆಯಿತು.


ಮೊದಲಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಮ್ಮ ಅಜ್ಜಯ್ಯನ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಈ ವೇಳೆ ರಾಜ್ಯಪಾಲರು ಪ್ರಮಾಣವಚನ ಪತ್ರದಲ್ಲಿರುವ ಪದಗಳನ್ನಷ್ಟೇ ಓದಬೇಕೆಂದು ಸಿಬ್ಬಂದಿಗೆ ತಿಳಿಸಿದರು. ಆದರೆ ಈ ಸೂಚನೆ ನಂತರ ಪ್ರಮಾಣವಚನ ಸ್ವೀಕರಿಸಿದ ಸಚಿವರಿಗೆ ತಲುಪಿರಲಿಲ್ಲ. ಇದರ ಪರಿಣಾಮವಾಗಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಡಾ. ಬಿ.ಆರ್. ಅಂಬೇಡ್ಕರ್ ಅವರ ಹೆಸರನ್ನು ಉಲ್ಲೇಖಿಸಿ ಪ್ರಮಾಣವಚನ ಸ್ವೀಕರಿಸಿದರು.


ಪ್ರಮಾಣವಚನದ ಬಳಿಕ ಸಹಿ ಮಾಡುವ ಸಂದರ್ಭದಲ್ಲಿ ಅಧಿಕಾರಿಗಳು ಪರಮೇಶ್ವರ್ ಅವರಿಗೆ, ಪತ್ರದಲ್ಲಿರುವುದನ್ನಷ್ಟೇ ಓದಬೇಕಾಗಿತ್ತು ಎಂದು ತಿಳಿಸಿದರು. ಇದರಿಂದ ಅಸಮಾಧಾನಗೊಂಡ ಪರಮೇಶ್ವರ್, ಈ ವಿಷಯವನ್ನು ಮೊದಲೇ ಹೇಳಬೇಕಿತ್ತು, ಈಗ ಹೇಳುವುದರಿಂದ ಏನು ಪ್ರಯೋಜನ ಎಂದು ಪ್ರಶ್ನಿಸಿದರೆಂದು ತಿಳಿದುಬಂದಿದೆ. ಪಕ್ಕದಲ್ಲಿದ್ದ ಸಚಿವ ಕೃಷ್ಣ ಬೈರೇಗೌಡ ಕೂಡ ಈ ವಿಚಾರಕ್ಕೆ ಸ್ಪಂದಿಸಿದರು. ನಂತರ ಹೂಗುಚ್ಛ ಸ್ವೀಕರಿಸಲು ತೆರಳಿದ ವೇಳೆ ರಾಜ್ಯಪಾಲರು ಕೂಡ ನೀವು ಪ್ರಮಾಣವಚನದ ವೇಳೆ ತಪ್ಪಾಗಿ ಹೇಳಿದ್ದೀರಿ ಎಂದು ಪರಮೇಶ್ವರ್ ಅವರ ಗಮನಕ್ಕೆ ತಂದರು.


ಕಾರ್ಯಕ್ರಮ ನಿರ್ವಹಣೆಯ ಹೊಣೆ ಹೊತ್ತಿದ್ದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರ ಬಳಿಗೂ ಅಧಿಕಾರಿಗಳು ತೆರಳಿ, ಎಲ್ಲ ಸಚಿವರು ಪ್ರಮಾಣವಚನ ಪತ್ರದಲ್ಲಿರುವ ಪದಗಳನ್ನಷ್ಟೇ ಓದುವಂತೆ ಸೂಚನೆ ನೀಡುವಂತೆ ಮನವಿ ಮಾಡಿದರು. ಆದರೆ ಅದಾಗಲೇ ಹಲವು ಸಚಿವರು ತಮ್ಮದೇ ರೀತಿಯಲ್ಲಿ ಪ್ರಮಾಣವಚನ ಸ್ವೀಕರಿಸಿದ್ದರು.


ಸಚಿವ ಎಂ.ಬಿ. ಪಾಟೀಲ್ ಅವರು ವಿಶ್ವಗುರು ಬಸವಣ್ಣ, ಬಸವಾದಿ ಶರಣರು ಹಾಗೂ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಬಳಿಕ ಅವರಿಗೆ ಹೂಗುಚ್ಛ ನೀಡುವ ಸಂದರ್ಭದಲ್ಲಿಯೂ ರಾಜ್ಯಪಾಲರು ಈ ಕುರಿತು ಗಮನ ಸೆಳೆದರು. ಇದೇ ವೇಳೆ ಕೆಲ ಸಚಿವರು ‘ದೇವರ ಹೆಸರಿನಲ್ಲಿ’ ಎಂದು ಪ್ರಮಾಣವಚನ ಸ್ವೀಕರಿಸಿದರೆ, ಇನ್ನೂ ಕೆಲವರು ಯಾವುದೇ ವಿಶೇಷಣ ಬಳಸದೆ ಪ್ರಮಾಣವಚನ ಸ್ವೀಕರಿಸಿದರು. ಕೆಲವರು ಸಂವಿಧಾನದ ಹೆಸರನ್ನೂ ಉಲ್ಲೇಖಿಸಿದರು.


ಇದೇ ವೇಳೆ ಲೋಕಭವನದಲ್ಲಿ ನಡೆದ ಪ್ರಮಾಣವಚನ ಸಮಾರಂಭ ಸಂಪೂರ್ಣ ಕನ್ನಡದ ಸೊಗಡಿನಲ್ಲಿ ಮಿಂದೇಳಿತು. ವೇದಿಕೆ, ಅಲಂಕಾರ ಹಾಗೂ ಸಭಾಂಗಣದ ವಿನ್ಯಾಸ ಎಲ್ಲವೂ ಕೆಂಪು-ಹಳದಿ ಬಣ್ಣಗಳಿಂದ ಕಂಗೊಳಿಸುತ್ತಿದ್ದು, ಕನ್ನಡ ಅಸ್ಮಿತೆಯ ಪ್ರತೀಕವಾಗಿ ಗಮನ ಸೆಳೆಯಿತು. ಕಾರ್ಯಕ್ರಮದ ಎಲ್ಲೆಡೆಯೂ ಕನ್ನಡದ ಕಂಪು ಹರಡಿಕೊಂಡಿತ್ತು.


ಕಾರ್ಯಕ್ರಮ ಆರಂಭಕ್ಕೂ ಮುನ್ನ ವಂದೇ ಮಾತರಂ, ನಾಡಗೀತೆ ಹಾಗೂ ರಾಷ್ಟ್ರಗೀತೆಗೆ ವ್ಯವಸ್ಥೆ ಮಾಡಲಾಗಿತ್ತು. ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ಸಭಾಂಗಣಕ್ಕೆ ಆಗಮಿಸಿದ ವೇಳೆ ಮೊದಲು ವಂದೇ ಮಾತರಂ ಬದಲು ನಾಡಗೀತೆ ಮೊಳಗಿತು. ತಕ್ಷಣವೇ ಅದನ್ನು ನಿಲ್ಲಿಸಿ ವಂದೇ ಮಾತರಂ ಪ್ರಸಾರ ಮಾಡಲಾಯಿತು. ನಂತರ ನಾಡಗೀತೆ ಮತ್ತು ಕೊನೆಯಲ್ಲಿ ಪೊಲೀಸ್ ಬ್ಯಾಂಡ್ ಮೂಲಕ ರಾಷ್ಟ್ರಗೀತೆ ಮೊಳಗಿಸಲಾಯಿತು. ಸಮಾರಂಭದ ಅಂತ್ಯದಲ್ಲಿಯೂ ಇದೇ ಕ್ರಮವನ್ನು ಅನುಸರಿಸಲಾಯಿತು.


ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಕೈಯಲ್ಲಿ ಸಂವಿಧಾನದ ಕೈಪಿಡಿ ಕಾಣಿಸಿಕೊಂಡಿದ್ದು ವಿಶೇಷವಾಗಿತ್ತು. ಸಾಮಾನ್ಯವಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿವಿಧ ಕಾರ್ಯಕ್ರಮಗಳಲ್ಲಿ ಸಂವಿಧಾನದ ಪ್ರತಿಯನ್ನು ಕೈಯಲ್ಲಿ ಹಿಡಿದುಕೊಳ್ಳುವುದು ಗಮನ ಸೆಳೆಯುತ್ತಿದ್ದು, ಅದೇ ಮಾದರಿಯಲ್ಲಿ ಡಿ.ಕೆ. ಶಿವಕುಮಾರ್ ಕೂಡ ಸಂವಿಧಾನದ ಕೈಪಿಡಿಯೊಂದಿಗೆ ವೇದಿಕೆಗೆ ಆಗಮಿಸಿದರು. ರೇಷ್ಮೆ ಪಂಚೆ, ಬಿಳಿ ಜುಬ್ಬಾ ಹಾಗೂ ಶಲ್ಯ ಧರಿಸಿದ್ದ ಅವರು ಕೈಯಲ್ಲಿ ಸಂವಿಧಾನದ ಪುಸ್ತಕ ಹಿಡಿದು ಪ್ರಮಾಣವಚನ ಸ್ವೀಕರಿಸಲು ಬಂದ ದೃಶ್ಯ ಎಲ್ಲರ ಗಮನ ಸೆಳೆಯಿತು.


ಮುಖ್ಯಮಂತ್ರಿಯವರ ತವರು ಕ್ಷೇತ್ರ ಕನಕಪುರ ತಾಲೂಕಿನ ದೊಡ್ಡ ಆಲಹಳ್ಳಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಸಮಾರಂಭದಲ್ಲಿ ವಿಶೇಷ ಆಹ್ವಾನ ನೀಡಲಾಗಿತ್ತು. ತಮ್ಮೂರಿನ ನಾಯಕ ಮುಖ್ಯಮಂತ್ರಿ ಸ್ಥಾನಕ್ಕೆ ಏರುತ್ತಿರುವ ಕ್ಷಣವನ್ನು ವಿದ್ಯಾರ್ಥಿಗಳು ಕಣ್ತುಂಬಿಕೊಂಡರು. ಅಲ್ಲದೆ ಗ್ರಾಮದಿಂದ ಕೂಲಿ ಕಾರ್ಮಿಕರು, ರೈತ ಮುಖಂಡರು, ಪೌರ ಕಾರ್ಮಿಕರು, ದಲಿತ ಸಂಘಟನೆಗಳ ಪ್ರತಿನಿಧಿಗಳು, ಹಿಂದುಳಿದ ವರ್ಗಗಳ ಮುಖಂಡರು, ಮಹಿಳಾ ಸಂಘಟನೆಗಳ ಸದಸ್ಯರು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರನ್ನು ಆಹ್ವಾನಿಸಲಾಗಿತ್ತು.


ಸಿನಿಮಾ ರಂಗದ ಗಣ್ಯರು, ಕ್ರೀಡಾಪಟುಗಳು, ನ್ಯಾಯಾಂಗ ಇಲಾಖೆಯ ಅಧಿಕಾರಿಗಳು, ಸಾಹಿತಿಗಳು, ಕಲಾವಿದರು, ಕೈಗಾರಿಕೋದ್ಯಮಿಗಳು, ಹೋಟೆಲ್ ಉದ್ಯಮಿಗಳು, ಯುವ ನಾಯಕರು ಹಾಗೂ ಕನ್ನಡಪರ ಸಂಘಟನೆಗಳ ಪ್ರತಿನಿಧಿಗಳು ಸಮಾರಂಭದಲ್ಲಿ ಭಾಗವಹಿಸಿ ನೂತನ ಸರ್ಕಾರಕ್ಕೆ ಶುಭ ಹಾರೈಸಿದರು.


ಪ್ರಮಾಣವಚನ ಸಮಾರಂಭದ ಬಳಿಕ ಲೋಕಭವನ ಆವರಣದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಮುಖ್ಯಮಂತ್ರಿ ಅಭಿಮಾನಿಗಳು ಭಕ್ತರಿಗೆ ಹಾಗೂ ಸಾರ್ವಜನಿಕರಿಗೆ ತಿರುಪತಿ ಲಡ್ಡು ವಿತರಿಸಿದರು. ಲಡ್ಡು ಪಡೆಯಲು ಜನರು ಸರತಿ ಸಾಲಿನಲ್ಲಿ ನಿಂತ ದೃಶ್ಯಗಳು ಕಂಡುಬಂದವು. ಸರ್ಕಾರದ ಹೊಸ ಅಧ್ಯಾಯ ಆರಂಭವಾದ ಸಂಭ್ರಮವನ್ನು ಅಭಿಮಾನಿಗಳು ಸಿಹಿ ಹಂಚುವ ಮೂಲಕ ಆಚರಿಸಿದರು.

📢 SUDDI LIVE WhatsApp Community

ತಾಜಾ ಸುದ್ದಿಗಳು, ಬ್ರೇಕಿಂಗ್ ನ್ಯೂಸ್, ರಾಜಕೀಯ, ಕ್ರೀಡೆ, ಮನರಂಜನೆ ಹಾಗೂ ಸ್ಥಳೀಯ ಸುದ್ದಿಗಳಿಗಾಗಿ SUDDI LIVE WhatsApp Community ಸೇರಿ.

📲 Join WhatsApp Community

📢 SUDDI LIVE Facebook Page

ತಾಜಾ ಸುದ್ದಿಗಳು, ಬ್ರೇಕಿಂಗ್ ನ್ಯೂಸ್, ರಾಜಕೀಯ, ಕ್ರೀಡೆ, ಮನರಂಜನೆ ಹಾಗೂ ಸ್ಥಳೀಯ ಸುದ್ದಿಗಳಿಗಾಗಿ SUDDI LIVE Facebook ಪೇಜ್ ಅನ್ನು Follow ಮಾಡಿ.

👍 Follow SUDDI LIVE

ನಿಮ್ಮ ಬೆಂಬಲವೇ ನಮ್ಮ ಶಕ್ತಿ ❤️

Tags:

Post a Comment

0 Comments

Post a Comment (0)
3/related/default