}

ದೇವೇಗೌಡರ ಮನೆ ಬಗ್ಗೆ ಮಾತನಾಡಿದರೆ ನಾಲಿಗೆ ಕತ್ತರಿಸುತ್ತೇವೆ: ಸಚಿವ ಚಲುವರಾಯಸ್ವಾಮಿ ವಿರುದ್ಧ ಸುರೇಶ್ ಗೌಡ ಆಕ್ರೋಶ

suddilive.com
By -
0


ಮಂಡ್ಯ, ಜೂನ್ 01: ಸಚಿವ ಚಲುವರಾಯಸ್ವಾಮಿ ವಿರುದ್ಧ ಜೆಡಿಎಸ್ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಮಾಜಿ ಶಾಸಕ ಸುರೇಶ್ ಗೌಡ ಅವರು ಕಟುವಾಗಿ ವಾಗ್ದಾಳಿ ನಡೆಸಿದ್ದಾರೆ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಕುರಿತು ಅವಹೇಳನಕಾರಿ ಹೇಳಿಕೆಗಳನ್ನು ನೀಡಿದರೆ ನಾಲಿಗೆ ಕತ್ತರಿಸುತ್ತೇವ  ಎಂದು ಎಚ್ಚರಿಕೆ ನೀಡಿರುವ ಅವರು, ಚಲುವರಾಯಸ್ವಾಮಿ ಅಧಿಕಾರ, ಹಣ ಮತ್ತು ಮದದಿಂದ ತಪ್ಪು ದಾರಿಯಲ್ಲಿ ಸಾಗುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.


ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗುತ್ತಿರುವುದರಿಂದ ದೇವೇಗೌಡರ ಮನೆಯಲ್ಲಿ ಸೂತಕದ ಛಾಯೆ ಕಾಣಿಸುತ್ತಿದೆ ಎಂಬುದಾಗಿ ಸಚಿವ ಚಲುವರಾಯಸ್ವಾಮಿ ನೀಡಿದ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಈ ಹೇಳಿಕೆಯನ್ನು ಖಂಡಿಸಿರುವ ಜೆಡಿಎಸ್ ಮುಖಂಡರು, ಇದು ದೇವೇಗೌಡರ ಕುಟುಂಬದ ವಿರುದ್ಧದ ಅವಮಾನಕರ ಹೇಳಿಕೆ ಎಂದು ಆರೋಪಿಸುತ್ತಿದ್ದಾರೆ. ಇದೇ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಶಾಸಕ ಸುರೇಶ್ ಗೌಡ, ಸಚಿವರ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.


ರಾಜ್ಯದ ಜನರು ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ನೀಡಿದ್ದಾರೆ. ಹೀಗಾಗಿ ಸರ್ಕಾರ ಐದು ವರ್ಷಗಳ ಕಾಲ ಆಡಳಿತ ನಡೆಸಬೇಕು. ಆದರೆ ಅಭಿವೃದ್ಧಿ ಕುಂಠಿತಗೊಂಡಿರುವುದನ್ನು ರಾಜ್ಯದ ಜನತೆ ಗಮನಿಸುತ್ತಿದ್ದಾರೆ. ಸಿದ್ದರಾಮಯ್ಯ ರಾಜೀನಾಮೆ ನೀಡಿ ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗಿದ್ದರೆ ಅದನ್ನು ರಾಜಕೀಯ ಬೆಳವಣಿಗೆಯಾಗಿ ನೋಡಬೇಕು. ಆದರೆ ಕೆಲವರು ಯಾರನ್ನೋ ಮೆಚ್ಚಿಸಲು ನಮ್ಮ ನಾಯಕರ ಬಗ್ಗೆ ಕೀಳುಮಟ್ಟದಲ್ಲಿ ಮಾತನಾಡುತ್ತಿದ್ದಾರೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.


ದೇವೇಗೌಡರ ಮನೆಯಲ್ಲಿ ಸೂತಕದ ಛಾಯೆ ಬಂದಿದೆ ಎಂದು ಹೇಳುವ ಮೂಲಕ ಸಚಿವ ಚಲುವರಾಯಸ್ವಾಮಿ ಯಾವ ಸಂದೇಶ ನೀಡಲು ಬಯಸಿದ್ದಾರೆ ಎಂದು ಪ್ರಶ್ನಿಸಿದ ಸುರೇಶ್ ಗೌಡ, ಸೂತಕ ಎಂಬ ಪದವನ್ನು ಸಾಮಾನ್ಯವಾಗಿ ಸಾವಿನ ಸಂದರ್ಭದಲ್ಲಿ ಬಳಸಲಾಗುತ್ತದೆ. ಹಾಗಾದರೆ ಅವರು ಯಾರ ಸಾವನ್ನು ಬಯಸುತ್ತಿದ್ದಾರೆ ಎಂಬ ಅನುಮಾನ ಮೂಡುತ್ತಿದೆ ಎಂದು ತೀವ್ರವಾಗಿ ಪ್ರಶ್ನಿಸಿದರು.


ದೇವೇಗೌಡರ ಇತಿಹಾಸ ಮತ್ತು ರಾಜಕೀಯ ಕೊಡುಗೆಗಳ ಬಗ್ಗೆ ಚಲುವರಾಯಸ್ವಾಮಿಗೆ ಎಷ್ಟು ತಿಳಿದಿದೆ ಎಂದು ಪ್ರಶ್ನಿಸಿದ ಅವರು, ಕನ್ನಡನಾಡಿನಿಂದ ದೇಶದ ಪ್ರಧಾನಿಯಾಗಿ ಆಯ್ಕೆಯಾದ ಏಕೈಕ ಕನ್ನಡಿಗ ದೇವೇಗೌಡರು ಎಂಬುದನ್ನು ನೆನಪಿಸಿಕೊಳ್ಳಬೇಕು ಎಂದರು. ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಸೇರಿದಂತೆ ಅನೇಕ ನಾಯಕರ ರಾಜಕೀಯ ಬೆಳವಣಿಗೆಯಲ್ಲಿ ದೇವೇಗೌಡರ ಪಾತ್ರ ಮಹತ್ವದ್ದಾಗಿದೆ ಎಂದು ಹೇಳಿದರು.


ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆದರೆ ದೇವೇಗೌಡರಿಗೆ ಹೊಟ್ಟೆ ಉರಿಯುತ್ತದೆ ಎಂಬ ರೀತಿಯ ಹೇಳಿಕೆಗಳು ಸಂಪೂರ್ಣವಾಗಿ ರಾಜಕೀಯ ಪ್ರಚೋದನೆಯ ಭಾಗವಾಗಿದೆ. ಬಿಜೆಪಿ ಹಾಗೂ ಎನ್‌ಡಿಎ ಜೊತೆ ಜೆಡಿಎಸ್ ಮೈತ್ರಿಯಲ್ಲಿದೆ. ಕಾಂಗ್ರೆಸ್ ಪಕ್ಷದಿಂದ ಯಾರೇ ಮುಖ್ಯಮಂತ್ರಿ ಆದರೂ ರಾಜಕೀಯವಾಗಿ ವಿರೋಧ ವ್ಯಕ್ತಪಡಿಸುವುದು ವಿರೋಧ ಪಕ್ಷದ ಕರ್ತವ್ಯ. ಆದರೆ ವೈಯಕ್ತಿಕ ಟೀಕೆಗಳು ಹಾಗೂ ಕುಟುಂಬಗಳನ್ನು ಗುರಿಯಾಗಿಸಿಕೊಂಡು ಮಾತನಾಡುವುದು ಸರಿಯಲ್ಲ ಎಂದು ಸುರೇಶ್ ಗೌಡ ಅಭಿಪ್ರಾಯಪಟ್ಟರು.


ಅಧಿಕಾರ ಶಾಶ್ವತವಲ್ಲ. ಚುನಾವಣೆ ಬಂದಾಗ ಜನರೇ ಸರಿಯಾದ ಪಾಠ ಕಲಿಸುತ್ತಾರೆ. ದೇವೇಗೌಡರ ಬಗ್ಗೆ ಮಾತನಾಡುವುದರಿಂದ ದೊಡ್ಡ ನಾಯಕನಾಗಬಹುದು ಎಂಬ ಭ್ರಮೆಯಲ್ಲಿ ಕೆಲವರು ಇದ್ದಾರೆ. ನಿಮ್ಮ ಬಳಿ ಅಧಿಕಾರ ಇರಬಹುದು, ಆದರೆ ನಮ್ಮ ಬಳಿ ಜನರ ಶಕ್ತಿ ಇದೆ. ಜನರ ತೀರ್ಪು ಯಾವಾಗಲೂ ಅಂತಿಮವಾಗಿರುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.


ಇದೇ ವೇಳೆ ಚಲುವರಾಯಸ್ವಾಮಿ ವಿರುದ್ಧ ಮತ್ತಷ್ಟು ಕಿಡಿಕಾರಿದ ಸುರೇಶ್ ಗೌಡ, ಯಾರ ಮನೆಯಲ್ಲಿ ಏನಾಗುತ್ತದೆ ಎಂಬ ಮುನ್ಸೂಚನೆ ಅವರಿಗೆ ಹೇಗೆ ಗೊತ್ತಾಗುತ್ತದೆ ಎಂದು ಪ್ರಶ್ನಿಸಿದರು. ಮಾಟ-ಮಂತ್ರ ಮಾಡಿಸುವುದರಲ್ಲಿ ಅವರು ಎತ್ತಿದ ಕೈ ಎಂಬ ರೀತಿಯಲ್ಲಿ ತೀವ್ರ ಆರೋಪಗಳನ್ನು ಕೂಡ ಮಾಡಿದರು. ಅವರ ಹೇಳಿಕೆಗಳು ಇದೀಗ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿವೆ.


ಆದರೆ ದೇವೇಗೌಡರ ಮನೆಗೆ ಅಥವಾ ತಮಗೆ ಯಾರಾದರೂ ಮಾಟ-ಮಂತ್ರ ಮಾಡಿಸಿದ್ದಾರೆ ಎಂಬುದನ್ನು ತಾವು ನಂಬುವುದಿಲ್ಲ ಎಂದು ಸ್ಪಷ್ಟಪಡಿಸಿದ ಸುರೇಶ್ ಗೌಡ, ತಮ್ಮ ಜೀವನದಲ್ಲಿ ಹೊಂದಾಣಿಕೆ ರಾಜಕಾರಣ ಮಾಡಿಲ್ಲ ಎಂದರು. ಕಾಂಗ್ರೆಸ್ ಸರ್ಕಾರ ರಾಜ್ಯವನ್ನು ಲೂಟಿ ಮಾಡುತ್ತಿದೆ ಎಂಬ ಆರೋಪವನ್ನೂ ಇದೇ ವೇಳೆ ಪುನರುಚ್ಚರಿಸಿದರು.


ನಾವು ನಮ್ಮ ರಾಜಕೀಯ ವಿರೋಧಿಗಳ ವಿರುದ್ಧ ಹೋರಾಟ ಮಾಡಬಹುದು. ಆದರೆ ಯಾರಿಗೂ ಕೆಟ್ಟದ್ದು ಆಗಲಿ ಎಂದು ಬಯಸುವುದಿಲ್ಲ. ನಮ್ಮ ಶತ್ರುಗಳಿಗೂ ಅನಿಷ್ಟವಾಗಲಿ ಎಂದು ಆಶಿಸುವ ಸಂಸ್ಕೃತಿ ನಮ್ಮದಲ್ಲ ಎಂದು ಹೇಳಿದ ಅವರು, ರಾಜಕೀಯ ಭಿನ್ನಾಭಿಪ್ರಾಯಗಳ ಹೆಸರಿನಲ್ಲಿ ವೈಯಕ್ತಿಕ ಮಟ್ಟಕ್ಕೆ ಇಳಿದು ಮಾತನಾಡಬಾರದು ಎಂದು ಸಲಹೆ ನೀಡಿದರು.


ಸಚಿವ ಚಲುವರಾಯಸ್ವಾಮಿ ಅವರ ಹೇಳಿಕೆ ಹಾಗೂ ಅದಕ್ಕೆ ಜೆಡಿಎಸ್ ನಾಯಕರಿಂದ ವ್ಯಕ್ತವಾಗಿರುವ ತೀವ್ರ ಪ್ರತಿಕ್ರಿಯೆ ರಾಜ್ಯ ರಾಜಕೀಯದಲ್ಲಿ ಹೊಸ ವಿವಾದಕ್ಕೆ ಕಾರಣವಾಗಿದ್ದು, ಮುಂದಿನ ದಿನಗಳಲ್ಲಿ ಈ ವಿಚಾರ ಮತ್ತಷ್ಟು ರಾಜಕೀಯ ಚರ್ಚೆಗೆ ಗ್ರಾಸವಾಗುವ ಸಾಧ್ಯತೆ ಇದೆ.

📢 SUDDI LIVE Facebook Page

ತಾಜಾ ಸುದ್ದಿಗಳು, ಬ್ರೇಕಿಂಗ್ ನ್ಯೂಸ್, ರಾಜಕೀಯ, ಕ್ರೀಡೆ, ಮನರಂಜನೆ ಹಾಗೂ ಸ್ಥಳೀಯ ಸುದ್ದಿಗಳಿಗಾಗಿ SUDDI LIVE Facebook ಪೇಜ್ ಅನ್ನು Follow ಮಾಡಿ.

👍 Follow SUDDI LIVE

ನಿಮ್ಮ ಬೆಂಬಲವೇ ನಮ್ಮ ಶಕ್ತಿ ❤️

Tags:

Post a Comment

0 Comments

Post a Comment (0)
3/related/default