ಬೆಳ್ತಂಗಡಿ: ಕುಟುಂಬದ ಧಾರ್ಮಿಕ ಕಾರ್ಯಕ್ರಮದ ವೇಳೆ ನಡೆದ ಕ್ಷುಲ್ಲಕ ವಾಗ್ವಾದವು ಭೀಕರ ಅಂತ್ಯ ಕಂಡಿದ್ದು, ಯುವಕನೊಬ್ಬ ತನ್ನ ಚಿಕ್ಕಪ್ಪನನ್ನೇ ಬಿಯರ್ ಬಾಟಲಿಯಿಂದ ಇರಿದು ಕೊಲೆಗೈದ ಘಟನೆ ಬಂಟ್ವಾಳ ತಾಲೂಕಿನ ಪಿಲಾತಬೆಟ್ಟು ಗ್ರಾಮದ ಕಾಡಬೆಟ್ಟು ಎಂಬಲ್ಲಿ ಭಾನುವಾರ ರಾತ್ರಿ ನಡೆದಿದೆ.
ಮೃತರನ್ನು ಕಾಡಬೆಟ್ಟು ನಿವಾಸಿ ಮಧುಸೂದನ್ (38) ಎಂದು ಗುರುತಿಸಲಾಗಿದೆ. ಈ ಪ್ರಕರಣದಲ್ಲಿ ಮೃತರ ಅಣ್ಣ ಕೇಶವ ಪೂಜಾರಿ ಅವರ ಪುತ್ರ ರಾಹುಲ್ (23)ಪ್ರಮುಖ ಆರೋಪಿಯಾಗಿದ್ದು, ಘಟನೆ ನಡೆದ ಬಳಿಕ ಸ್ಥಳದಿಂದ ಪರಾರಿಯಾಗಿದ್ದಾನೆ.
ಮಾಹಿತಿಯ ಪ್ರಕಾರ, ಕೇಶವ ಪೂಜಾರಿ ಅವರ ಮನೆಯಲ್ಲಿ ಭಾನುವಾರ ರಾತ್ರಿ ದೈವಕ್ಕೆ ತಂಬಿಲ ಕಾರ್ಯಕ್ರಮ ನಡೆಯುತ್ತಿತ್ತು. ಈ ವೇಳೆ ರಾಹುಲ್ ಸೇರಿದಂತೆ ಕೆಲ ಯುವಕರು ಮನೆಯ ಹೊರಭಾಗದಲ್ಲಿ ಮದ್ಯ ಸೇವಿಸಿ ಗದ್ದಲ ನಡೆಸುತ್ತಿದ್ದರು ಎನ್ನಲಾಗಿದೆ. ಇದನ್ನು ಗಮನಿಸಿದ ಮಧುಸೂದನ್ ಅವರು ಅವರ ವರ್ತನೆಯನ್ನು ಆಕ್ಷೇಪಿಸಿ, ಗದ್ದಲ ಮಾಡದಂತೆ ಸೂಚಿಸಿದ್ದರು.
ಇದೇ ವಿಚಾರವಾಗಿ ಮಧುಸೂದನ್ ಮತ್ತು ರಾಹುಲ್ ನಡುವೆ ಮಾತಿನ ಚಕಮಕಿ ನಡೆದಿದ್ದು, ಕ್ಷಣಾರ್ಧದಲ್ಲೇ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಕೋಪೋದ್ರಿಕ್ತನಾದ ರಾಹುಲ್ ತನ್ನ ಕೈಯಲ್ಲಿದ್ದ ಬಿಯರ್ ಬಾಟಲಿಯನ್ನು ಒಡೆದು, ಮಧುಸೂದನ್ ಅವರ ಕುತ್ತಿಗೆ ಭಾಗಕ್ಕೆ ಇರಿದಿದ್ದಾನೆ ಎಂದು ತಿಳಿದುಬಂದಿದೆ.
ಗಂಭೀರವಾಗಿ ಗಾಯಗೊಂಡ ಮಧುಸೂದನ್ ಅವರು ರಕ್ತದ ಮಡುವಿನಲ್ಲಿ ಬಿದ್ದಿದ್ದು, ಸ್ಥಳದಲ್ಲಿದ್ದ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ತಕ್ಷಣವೇ ಅವರನ್ನು ಆಸ್ಪತ್ರೆಗೆ ಸಾಗಿಸಲು ಪ್ರಯತ್ನಿಸಿದ್ದಾರೆ. ಆದರೆ ಆಸ್ಪತ್ರೆಗೆ ತಲುಪುವಷ್ಟರಲ್ಲೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಮೃತ ಮಧುಸೂದನ್ ಅವರು ಅವಿವಾಹಿತರಾಗಿದ್ದು, ಇಲೆಕ್ಟ್ರಿಷಿಯನ್ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದರು. ಶಾಂತ ಸ್ವಭಾವದ ವ್ಯಕ್ತಿಯಾಗಿದ್ದ ಅವರು ಸ್ಥಳೀಯವಾಗಿ ಪರಿಚಿತರಾಗಿದ್ದರು ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಆರೋಪಿ ರಾಹುಲ್ ಸಮೀಪದ ಪೆಟ್ರೋಲ್ ಬಂಕ್‌ನಲ್ಲಿ ಉದ್ಯೋಗದಲ್ಲಿದ್ದ ಎನ್ನಲಾಗಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಪುಂಜಾಲಕಟ್ಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪರಾರಿಯಾಗಿರುವ ಆರೋಪಿಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ.
ಕುಟುಂಬದ ಧಾರ್ಮಿಕ ಕಾರ್ಯಕ್ರಮವೇ ರಕ್ತಸಿಕ್ತ ದುರಂತಕ್ಕೆ ಸಾಕ್ಷಿಯಾದ ಈ ಘಟನೆ ಇಡೀ ಪ್ರದೇಶದಲ್ಲಿ ಆಘಾತ ಮತ್ತು ದುಃಖದ ವಾತಾವರಣ ಸೃಷ್ಟಿಸಿದೆ.
About the Author
Prajwal is the Founder and Editor of Suddilive.com. He covers Karnataka news, politics, education, employment, sports, technology, and current affairs. He is committed to providing accurate, timely, and reliable information through responsible digital journalism.
📢 SUDDI LIVE WhatsApp Community
ತಾಜಾ ಸುದ್ದಿಗಳು, ಬ್ರೇಕಿಂಗ್ ನ್ಯೂಸ್, ರಾಜಕೀಯ, ಕ್ರೀಡೆ, ಮನರಂಜನೆ ಹಾಗೂ ಸ್ಥಳೀಯ ಸುದ್ದಿಗಳಿಗಾಗಿ SUDDI LIVE WhatsApp Community ಸೇರಿ.
📲 Join WhatsApp Community📢 SUDDI LIVE Facebook Page
ತಾಜಾ ಸುದ್ದಿಗಳು, ಬ್ರೇಕಿಂಗ್ ನ್ಯೂಸ್, ರಾಜಕೀಯ, ಕ್ರೀಡೆ, ಮನರಂಜನೆ ಹಾಗೂ ಸ್ಥಳೀಯ ಸುದ್ದಿಗಳಿಗಾಗಿ SUDDI LIVE Facebook ಪೇಜ್ ಅನ್ನು Follow ಮಾಡಿ.
👍 Follow SUDDI LIVEನಿಮ್ಮ ಬೆಂಬಲವೇ ನಮ್ಮ ಶಕ್ತಿ ❤️

