ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಮತ್ತೊಮ್ಮೆ ಯುವ ಕಾಂಗ್ರೆಸ್ ಒಳಜಗಳ ಬಹಿರಂಗವಾಗಿದ್ದು, ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಯೂತ್ ಕಾಂಗ್ರೆಸ್ ಕಾರ್ಯಕರ್ತರ ನಡುವೆ ನಡೆದ ಗಲಾಟೆ ಕೈ-ಕೈ ಮಿಲಾಯಿಸುವ ಹಂತಕ್ಕೆ ತಲುಪಿದ ಘಟನೆ ಭಾರೀ ಚರ್ಚೆಗೆ ಗ್ರಾಸವಾಗಿದೆ. ರಾಷ್ಟ್ರೀಯ ಯುವ ಕಾಂಗ್ರೆಸ್ ನಿನ್ನೆ ಹಲವು ಪದಾಧಿಕಾರಿಗಳನ್ನು ವಜಾಗೊಳಿಸಿದ್ದ ಹಿನ್ನೆಲೆ, ಅದರ ಬೆನ್ನಲ್ಲೇ ಇಂದು ನಡೆದ ಪೂರ್ವಭಾವಿ ಸಭೆಯಲ್ಲಿ ಎರಡು ಬಣಗಳ ನಡುವೆ ತೀವ್ರ ವಾಗ್ವಾದ ಮತ್ತು ತಳ್ಳಾಟ-ಒದ್ದಾಟ ನಡೆದಿರುವುದು ಪಕ್ಷದೊಳಗಿನ ಅಸಮಾಧಾನವನ್ನು ಹೊರಗೆಳೆದಿದೆ.
NEET ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ವಿರುದ್ಧ ಹಮ್ಮಿಕೊಳ್ಳಲಿದ್ದ ಪ್ರತಿಭಟನೆ ಸಂಬಂಧ ಸಭೆ ಕರೆಯಲಾಗಿತ್ತು. ಈ ಸಭೆಯಲ್ಲಿ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್. ಮಂಜುನಾಥ್ ಗೌಡ ಬೆಂಬಲಿಗರು ಮತ್ತು ರಾಜ್ಯ ಉಪಾಧ್ಯಕ್ಷೆ ದೀಪಿಕಾ ರೆಡ್ಡಿ ಬೆಂಬಲಿಗರ ನಡುವೆ ಮೊದಲು ಮಾತಿನ ಚಕಮಕಿ ಆರಂಭಗೊಂಡಿತು. ಬಳಿಕ ಪರಿಸ್ಥಿತಿ ಉದ್ವಿಗ್ನಗೊಂಡು ಪರಸ್ಪರ ತಳ್ಳಾಟ, ವಾಗ್ವಾದ ಹಾಗೂ ಗದ್ದಲಕ್ಕೆ ಕಾರಣವಾಯಿತು ಎಂದು ತಿಳಿದುಬಂದಿದೆ. ಕೆಲ ಹೊತ್ತಿನವರೆಗೆ ಕೆಪಿಸಿಸಿ ಕಚೇರಿ ಆವರಣದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.
ಘಟನೆ ಬಳಿಕ ಯುವ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷೆ ದೀಪಿಕಾ ರೆಡ್ಡಿ ರಾಜ್ಯಾಧ್ಯಕ್ಷ ಎಚ್.ಎಸ್. ಮಂಜುನಾಥ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದು, ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ. ತಮ್ಮ ವಿರುದ್ಧ ಕೈಗೊಂಡಿರುವ ಕ್ರಮಗಳು ಶಿಸ್ತಿನ ಹೆಸರಿನಲ್ಲಿ ನಡೆಸುತ್ತಿರುವ ವೈಯಕ್ತಿಕ ಸೇಡು ರಾಜಕೀಯ ಎಂದು ಅವರು ಆರೋಪಿಸಿದ್ದಾರೆ. ಹುದ್ದೆ ತಡೆಹಿಡಿದಿರುವುದು ಕಾನೂನುಬಾಹಿರವಾಗಿದ್ದು, ತನ್ನ ರಾಜಕೀಯ ಬೆಳವಣಿಗೆಯನ್ನು ಕುಂಠಿತಗೊಳಿಸಲು ಸಂಚು ರೂಪಿಸಲಾಗಿದೆ ಎಂದು ದೂರಿದ್ದಾರೆ.
“ಇದು ಶಿಸ್ತಿನ ಕ್ರಮವಲ್ಲ, ವೈಯಕ್ತಿಕ ಪ್ರತೀಕಾರದ ರಾಜಕೀಯ” ಎಂದು ಕಿಡಿಕಾರಿರುವ ದೀಪಿಕಾ ರೆಡ್ಡಿ, ಮಹಿಳಾ ನಾಯಕಿಯರನ್ನು ಗುರಿಯಾಗಿಸಿ ಪಕ್ಷದೊಳಗೆ ಪಿತೂರಿ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ. “ಸ್ತ್ರೀ ದ್ವೇಷದ ಮನೋಭಾವದಿಂದ ಕೆಲವು ನಾಯಕರು ವರ್ತಿಸುತ್ತಿದ್ದು, ನಾನು ಮೌನವಾಗುವುದಿಲ್ಲ. ಕಾಂಗ್ರೆಸ್ ಪಕ್ಷ ಮತ್ತು ಹೈಕಮಾಂಡ್ ಮೇಲಿನ ನನ್ನ ನಿಷ್ಠೆ ಅಚಲವಾಗಿದೆ” ಎಂದು ಸ್ಪಷ್ಟಪಡಿಸಿದ್ದಾರೆ.
ಯುವ ಕಾಂಗ್ರೆಸ್ ಚುನಾವಣೆಯಲ್ಲಿ ತಾವು 2.95 ಲಕ್ಷಕ್ಕೂ ಅಧಿಕ ಮತಗಳನ್ನು ಪಡೆದಿದ್ದಾಗಿ ಹೇಳಿಕೊಂಡಿರುವ ದೀಪಿಕಾ ರೆಡ್ಡಿ, ದೇಶದಲ್ಲೇ ಅತಿ ಹೆಚ್ಚು ಮತ ಪಡೆದ ಮಹಿಳಾ ಅಭ್ಯರ್ಥಿಗಳಲ್ಲಿ ತಾವು ಒಬ್ಬರು ಎಂದು ತಿಳಿಸಿದ್ದಾರೆ. ಪುರುಷ ಪ್ರಾಬಲ್ಯದ ರಾಜಕೀಯದಲ್ಲಿ ಹೋರಾಟ ನಡೆಸಿ ಜನಬೆಂಬಲ ಗಳಿಸಿದ್ದೇನೆ. ಚುನಾವಣೆಯ ಬಳಿಕವೂ ಪಕ್ಷ ಸಂಘಟನೆಗಾಗಿ ನಿಸ್ವಾರ್ಥವಾಗಿ ಕೆಲಸ ಮಾಡಿದ್ದೇನೆ ಎಂದು ಹೇಳಿದ್ದಾರೆ.
ಇದೇ ವೇಳೆ ಎಚ್.ಎಸ್. ಮಂಜುನಾಥ್ ಅಭದ್ರತೆ ಮತ್ತು ಅಸೂಯೆಯಿಂದ ನಡೆದುಕೊಳ್ಳುತ್ತಿದ್ದಾರೆ ಎಂದು ನೇರ ಆರೋಪ ಮಾಡಿದ ಅವರು, ಯುವ ಕಾಂಗ್ರೆಸ್‌ನಲ್ಲಿ ಮಹಿಳೆಯರಿಗೆ ಅಸುರಕ್ಷಿತ ವಾತಾವರಣ ನಿರ್ಮಾಣವಾಗಿದೆ ಎಂದು ಕಿಡಿಕಾರಿದರು. ಮಹಿಳಾ ನಾಯಕರನ್ನು ವ್ಯವಸ್ಥಿತವಾಗಿ ಗುರಿಯಾಗಿಸಲಾಗುತ್ತಿದ್ದು, ಸಾರ್ವಜನಿಕ ಬೆಂಬಲ ಹೊಂದಿರುವ ಮಹಿಳೆಯರನ್ನು ಬೆದರಿಸಲು ಅಧಿಕಾರ ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂದು ದೂರಿದ್ದಾರೆ.
ಚುನಾವಣೆಯ ಬಳಿಕ ತನ್ನ ವಿರುದ್ಧ ರಾಜಕೀಯ ಪಿತೂರಿ ಮತ್ತು ಮಾನಸಿಕ ಕಿರುಕುಳ ಹೆಚ್ಚಾಗಿದೆ ಎಂದು ಹೇಳಿರುವ ದೀಪಿಕಾ ರೆಡ್ಡಿ, “ಈ ರೀತಿಯ ಕ್ರಮಗಳು ನನ್ನನ್ನು ಬೆದರಿಸಲಾರವು. ಜನಾದೇಶವನ್ನು ಯಾವುದೇ ಆದೇಶ ಅಳಿಸಲಾರದು. ಈ ವಿಚಾರವನ್ನು ರಾಷ್ಟ್ರೀಯ ನಾಯಕರ ಮುಂದಿಡುತ್ತೇನೆ” ಎಂದು ಎಚ್ಚರಿಕೆ ನೀಡಿದ್ದಾರೆ.
ಯುವ ಕಾಂಗ್ರೆಸ್ ಒಳಜಗಳ ಇದೀಗ ರಾಜ್ಯ ಕಾಂಗ್ರೆಸ್ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದ್ದು, ಪಕ್ಷದೊಳಗಿನ ಭಿನ್ನಮತಗಳು ಬಹಿರಂಗವಾಗುತ್ತಿರುವುದು ನಾಯಕರಿಗೆ ತಲೆನೋವಾಗಿ ಪರಿಣಮಿಸಿದೆ.
About the Author
Prajwal is the Founder and Editor of Suddilive.com. He covers Karnataka news, politics, education, employment, sports, technology, and current affairs. He is committed to providing accurate, timely, and reliable information through responsible digital journalism.
📢 SUDDI LIVE WhatsApp Community
ತಾಜಾ ಸುದ್ದಿಗಳು, ಬ್ರೇಕಿಂಗ್ ನ್ಯೂಸ್, ರಾಜಕೀಯ, ಕ್ರೀಡೆ, ಮನರಂಜನೆ ಹಾಗೂ ಸ್ಥಳೀಯ ಸುದ್ದಿಗಳಿಗಾಗಿ SUDDI LIVE WhatsApp Community ಸೇರಿ.
📲 Join WhatsApp Community📢 SUDDI LIVE Facebook Page
ತಾಜಾ ಸುದ್ದಿಗಳು, ಬ್ರೇಕಿಂಗ್ ನ್ಯೂಸ್, ರಾಜಕೀಯ, ಕ್ರೀಡೆ, ಮನರಂಜನೆ ಹಾಗೂ ಸ್ಥಳೀಯ ಸುದ್ದಿಗಳಿಗಾಗಿ SUDDI LIVE Facebook ಪೇಜ್ ಅನ್ನು Follow ಮಾಡಿ.
👍 Follow SUDDI LIVEನಿಮ್ಮ ಬೆಂಬಲವೇ ನಮ್ಮ ಶಕ್ತಿ ❤️

