}

“ಜನರಿಗೆ ಹೇಳೋದಾಯ್ತು, ಆದರೆ ಇವರೇನು ಮಾಡಿದ್ದಾರೆ?” — ಉಡುಪಿಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತೀವ್ರ ವಾಗ್ದಾಳಿ. ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ, ಹಿಜಾಬ್ ವಿವಾದ ಹಾಗೂ ಅಂಗನವಾಡಿ ಹಣ ಕಲೆಕ್ಷನ್ ಆರೋಪಗಳ ಬಗ್ಗೆ ಸಚಿವೆಯ ಸ್ಪಷ್ಟನೆ.

suddilive.com
By -
0

 

udupi-lakshmi-hebbalkar-slams-centre-over-fuel-price-hike-hijab-row


ಉಡುಪಿ, ಮೇ 16: ಕೇಂದ್ರ ಸರ್ಕಾರದ ನೀತಿಗಳು, ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ, ಹಿಜಾಬ್ ವಿವಾದ ಸೇರಿದಂತೆ ಹಲವು ರಾಜಕೀಯ ಹಾಗೂ ಸಾಮಾಜಿಕ ವಿಚಾರಗಳ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ. 


ಉಡುಪಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಕ್ರಮಗಳ ವಿರುದ್ಧ ವ್ಯಂಗ್ಯವಾಡುತ್ತಾ ಹಲವು ಪ್ರಶ್ನೆಗಳನ್ನೂ ಎತ್ತಿದರು. “ಜನರಿಗೆ ಹೇಳೋದಾಯ್ತು, ಆದರೆ ಅವರೇನು ಮಾಡಿದ್ದಾರೆ ಅನ್ನೋದನ್ನು ಮೊದಲು ಹೇಳಲಿ,” ಎಂದು ಸವಾಲು ಹಾಕಿದ ಸಚಿವೆ, ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಪರೋಕ್ಷ ಟೀಕೆ ನಡೆಸಿದರು. “ಮೋದಿಯವರು ಗಂಟೆ ಬಾರಿಸಿ ಅಂದ್ರೆ ನಾವು ಗಂಟೆ ಬಾರಿಸುತ್ತೇವೆ. ಚಪ್ಪಾಳೆ ತಟ್ಟಿರಿ ಅಂದ್ರೆ ತಟ್ಟುತ್ತೇವೆ. ಪೆಟ್ರೋಲ್, ಡೀಸೆಲ್ ಕಡಿಮೆ ಬಳಸಿ ಅಂದ್ರೆ ಅದನ್ನೂ ಪಾಲಿಸುತ್ತೇವೆ. ಬಂಗಾರ ಖರೀದಿಸಬೇಡಿ ಅಂದ್ರೆ ಅದನ್ನೂ ಬಿಡುತ್ತೇವೆ. ದೇಶಕ್ಕಾಗಿ ಜನ ಎಲ್ಲ ರೀತಿಯ ಸಹಕಾರ ಕೊಡುತ್ತಿದ್ದಾರೆ. ಆದರೆ ಇಂತಹ ಪರಿಸ್ಥಿತಿ ಬರೋದಕ್ಕೆ ಕಾರಣ ಯಾರು ಎನ್ನುವುದನ್ನೂ ಹೇಳಬೇಕು,” ಎಂದು ಪ್ರಶ್ನಿಸಿದರು.


 ಮುಂದುವರಿದು ಮಾತನಾಡಿದ ಅವರು, “ಈಗ ಮತ್ತೆ ಬಂಗಾರ ಖರೀದಿ ಮಾಡಬೇಡಿ ಅಂತ ಹೇಳಲಾಗುತ್ತಿದೆ. ಆದರೆ ದೇಶದ ಆರ್ಥಿಕ ಪರಿಸ್ಥಿತಿ, ಬೆಲೆ ಏರಿಕೆ, ಜನರ ಮೇಲಿನ ಹೊರೆ ಇವೆಲ್ಲದರ ಬಗ್ಗೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಬೇಕು. ಅಮೆರಿಕ ಯಾವ ರೀತಿಯಲ್ಲಿ ಭಾರತದ ಪ್ರಧಾನ ಮಂತ್ರಿಯನ್ನು ಕಂಟ್ರೋಲ್ ಮಾಡುತ್ತಿದೆ ಅನ್ನೋದನ್ನೂ ಮಾಧ್ಯಮಗಳಲ್ಲಿ ನೋಡುತ್ತಿದ್ದೇವೆ. ಭಾರತದ ಬಗ್ಗೆ ಟ್ರಂಪ್ ಹೇಳುತ್ತಿರುವ ಮಾತುಗಳನ್ನೂ ದೇಶ ಗಮನಿಸುತ್ತಿದೆ,” ಎಂದು ವ್ಯಂಗ್ಯವಾಡಿದರು. 


ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ವಿಚಾರವಾಗಿ ಮಾತನಾಡಿದ ಸಚಿವೆ, “ಚುನಾವಣೆ ಮುಗಿದ ತಕ್ಷಣವೇ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಸಲಾಗಿದೆ. ಇದು ಸಂಪೂರ್ಣ ರಾಜಕೀಯ ಪ್ರೇರಿತ ಕ್ರಮ. ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ಭಾರೀ ಏರಿಕೆಯಾಗಿಲ್ಲ. ಆದರೆ ಜನರ ಮೇಲೆ ನೇರ ಹೊರೆ ಹಾಕುವ ಕೆಲಸ ಮಾಡಲಾಗಿದೆ,” ಎಂದು ಆರೋಪಿಸಿದರು. “ಮನಮೋಹನ್ ಸಿಂಗ್ ಸರ್ಕಾರದ ಅವಧಿಯಲ್ಲಿ ಕಚ್ಚಾ ತೈಲದ ಬೆಲೆ ಎಷ್ಟೋ ಮಟ್ಟಿಗೆ ಏರಿಕೆಯಾಗಿತ್ತು. ಆದರೂ ಜನರ ಮೇಲೆ ಇಂತಹ ಭಾರ ಹಾಕುವ ಕೆಲಸ ಮಾಡಲಾಗಲಿಲ್ಲ. ಈಗ ದಿಢೀರ್ ಆಗಿ ಮೂರು ರೂಪಾಯಿ ಬೆಲೆ ಏರಿಸಿ ಜನಸಾಮಾನ್ಯರ ಬದುಕಿಗೆ ಮತ್ತಷ್ಟು ಹೊರೆ ಹಾಕಲಾಗಿದೆ,” ಎಂದು ಅವರು ಟೀಕಿಸಿದರು. 


ಹಿಜಾಬ್ ವಿವಾದ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವೆ, “ಶಿಕ್ಷಣದಲ್ಲಿ ರಾಜಕಾರಣ ಮಾಡಬಾರದು. ಮಕ್ಕಳು ತುಂಬಾ ಮುಗ್ಧರು. ಪಾಲಕರು ಕಲಿಯಲಿ ಎಂದು ಶಾಲೆಗೆ ಕಳಿಸುತ್ತಾರೆ. ವಿದ್ಯಾರ್ಥಿಗಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಒಳ್ಳೆಯ ವಾತಾವರಣ ನಿರ್ಮಾಣ ಮಾಡಬೇಕು,” ಎಂದು ಹೇಳಿದರು. “ಹಿಜಾಬ್ ಆಗಲಿ ಅಥವಾ ಇನ್ನಾವುದೇ ವಿಚಾರವಾಗಲಿ, ಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟ ಆಡಬಾರದು. ಈ ವಿಷಯದಲ್ಲಿ ಹೆಚ್ಚು ಚರ್ಚೆ ಮಾಡುವ ಅಗತ್ಯ ಇಲ್ಲ. ವಿದ್ಯಾರ್ಥಿಗಳ ಭವಿಷ್ಯವನ್ನು ತಲೆಯಲ್ಲಿಟ್ಟುಕೊಂಡೇ ರಾಜಕಾರಣ ಮಾಡಬೇಕು,” ಎಂದು ಅಭಿಪ್ರಾಯಪಟ್ಟರು.


 ರಾಜ್ಯ ರಾಜಕಾರಣದಲ್ಲಿ ಮುಖ್ಯಮಂತ್ರಿ ಬದಲಾವಣೆ ಹಾಗೂ ಸಚಿವ ಸಂಪುಟ ವಿಸ್ತರಣೆ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, “ಅದು ಸಂಪೂರ್ಣವಾಗಿ ಪಕ್ಷದ ಹೈಕಮಾಂಡ್ ತೀರ್ಮಾನ. ನಾವು ಪಕ್ಷದ ಶಿಸ್ತಿನ ಸಿಪಾಯಿಗಳು. ಆ ವಿಚಾರದಲ್ಲಿ ನಾವು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ,” ಎಂದು ಸ್ಪಷ್ಟಪಡಿಸಿದರು. ಬಾಗಲಕೋಟೆಯಲ್ಲಿ ಅಂಗನವಾಡಿ ಕೇಂದ್ರಗಳಿಂದ ಹಣ ಸಂಗ್ರಹ ಮಾಡಲಾಗಿದೆ ಎಂಬ ಆರೋಪಗಳ ಕುರಿತಂತೆ ಪ್ರತಿಕ್ರಿಯಿಸಿದ ಸಚಿವೆ, “ಯಾವುದೇ ಅಂಗನವಾಡಿಯಿಂದ ಹಣ ಸಂಗ್ರಹ ಮಾಡಿಲ್ಲ. ಯಾರೇ ಆಗಲಿ ಈ ರೀತಿಯ ಹಣ ಕಲೆಕ್ಷನ್ ಮಾಡಿದ್ದರೆ ಅವರ ವಿರುದ್ಧ ಯಾವುದೇ ಮುಲಾಜಿಲ್ಲದೆ ಕ್ರಮ ಕೈಗೊಳ್ಳುತ್ತೇನೆ. ಈ ಬಗ್ಗೆ ಸಂಪೂರ್ಣ ತನಿಖೆ ನಡೆಸಲಾಗುತ್ತದೆ,” ಎಂದು ಎಚ್ಚರಿಕೆ ನೀಡಿದರು.

About the Author

Prajwal is the Founder and Editor of Suddilive.com. He covers Karnataka news, politics, education, employment, sports, technology, and current affairs. He is committed to providing accurate, timely, and reliable information through responsible digital journalism.

📢 SUDDI LIVE WhatsApp Community

ತಾಜಾ ಸುದ್ದಿಗಳು, ಬ್ರೇಕಿಂಗ್ ನ್ಯೂಸ್, ರಾಜಕೀಯ, ಕ್ರೀಡೆ, ಮನರಂಜನೆ ಹಾಗೂ ಸ್ಥಳೀಯ ಸುದ್ದಿಗಳಿಗಾಗಿ SUDDI LIVE WhatsApp Community ಸೇರಿ.

📲 Join WhatsApp Community

📢 SUDDI LIVE Facebook Page

ತಾಜಾ ಸುದ್ದಿಗಳು, ಬ್ರೇಕಿಂಗ್ ನ್ಯೂಸ್, ರಾಜಕೀಯ, ಕ್ರೀಡೆ, ಮನರಂಜನೆ ಹಾಗೂ ಸ್ಥಳೀಯ ಸುದ್ದಿಗಳಿಗಾಗಿ SUDDI LIVE Facebook ಪೇಜ್ ಅನ್ನು Follow ಮಾಡಿ.

👍 Follow SUDDI LIVE

ನಿಮ್ಮ ಬೆಂಬಲವೇ ನಮ್ಮ ಶಕ್ತಿ ❤️

Tags:

Post a Comment

0 Comments

Post a Comment (0)
3/related/default