}

ಉಡುಪಿ: ಕಳುವಾದ ಮೊಬೈಲ್‌ಗಳ ಮಾರಾಟಕ್ಕೆ ಯತ್ನ?: ಉಡುಪಿ ಪೊಲೀಸರಿಗೆ ಏಳು ಮೊಬೈಲ್ ಹಸ್ತಾಂತರ

suddilive.com
By -
0

 


ಉಡುಪಿ, ಮೇ 27: ಉಡುಪಿ ಜಿಲ್ಲೆಯ ವಿವಿಧ ಮೊಬೈಲ್ ಅಂಗಡಿಗಳಿಗೆ ಅಪರಿಚಿತ ವ್ಯಕ್ತಿಗಳು ಮಾರಾಟಕ್ಕೆ ತಂದ ಸೂಕ್ತ ದಾಖಲೆಗಳಿಲ್ಲದ ಏಳು ಮೊಬೈಲ್ ಫೋನ್‌ಗಳನ್ನು ಉಡುಪಿ ಜಿಲ್ಲಾ ಮೊಬೈಲ್ ರಿಟೈಲರ್ ಅಸೋಸಿಯೇಷನ್ ಪದಾಧಿಕಾರಿಗಳು ಬುಧವಾರ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ಅವರಿಗೆ ಹಸ್ತಾಂತರಿಸಿದರು. ಅಂಗಡಿಗಳಿಗೆ ಬಂದ ಕೆಲ ವ್ಯಕ್ತಿಗಳು ಕಡಿಮೆ ದರಕ್ಕೆ ಮೊಬೈಲ್ ಮಾರಾಟ ಮಾಡಲು ಯತ್ನಿಸಿದ ವೇಳೆ ಅಂಗಡಿ ಮಾಲೀಕರಿಗೆ ಅನುಮಾನ ಮೂಡಿದ್ದು, ತಕ್ಷಣವೇ ಮೊಬೈಲ್‌ಗಳನ್ನು ಸಂಚಾರ್ ಸಾಥಿ ಆಪ್ ಮೂಲಕ ಪರಿಶೀಲನೆ ನಡೆಸಲಾಯಿತು.


ಪರಿಶೀಲನೆ ವೇಳೆ ಮೊಬೈಲ್‌ಗಳು ಬ್ಲಾಕ್ ಲಿಸ್ಟ್‌ನಲ್ಲಿ ದಾಖಲಾಗಿರುವುದು ಬೆಳಕಿಗೆ ಬಂದಿದೆ. ಬಳಿಕ ಮೊಬೈಲ್‌ಗಳಿಗೆ ಸಂಬಂಧಿಸಿದ ಖರೀದಿ ಬಿಲ್, ವಾರಂಟಿ ದಾಖಲೆ ಅಥವಾ ಮಾಲೀಕತ್ವವನ್ನು ದೃಢೀಕರಿಸುವ ಯಾವುದೇ ದಾಖಲೆಯನ್ನು ಕೇಳಿದಾಗ, ಮೊಬೈಲ್ ಮಾರಾಟಕ್ಕೆ ಬಂದವರು ಯಾವುದೇ ದಾಖಲೆಗಳನ್ನು ನೀಡಲು ವಿಫಲರಾದರು. ಇದರಿಂದ ಹೆಚ್ಚಿನ ಅನುಮಾನ ವ್ಯಕ್ತವಾಗಿದ್ದು, ಅಂಗಡಿ ಮಾಲೀಕರು ಎಚ್ಚರಿಕೆಯಿಂದ ವರ್ತಿಸಿ ಮೊಬೈಲ್‌ಗಳನ್ನು ಸ್ವೀಕರಿಸದೇ ಪೊಲೀಸರಿಗೆ ಮಾಹಿತಿ ನೀಡಲು ಮುಂದಾದರು.


ಈ ಸಂಬಂಧ ಒಟ್ಟು ಏಳು ಮೊಬೈಲ್ ಫೋನ್‌ಗಳನ್ನು ಉಡುಪಿ ಜಿಲ್ಲಾ ಮೊಬೈಲ್ ರಿಟೈಲರ್ ಅಸೋಸಿಯೇಷನ್ ಅಧ್ಯಕ್ಷ ವಿವೇಕ್ ಜಿ. ಸುವರ್ಣ ಅವರ ನೇತೃತ್ವದಲ್ಲಿ ಸದಸ್ಯರಾದ ರಂಜಿತ್ ಶೆಟ್ಟಿ, ಸಂದೇಶ್, ಸುಧರ್ಶನ್, ಗಣೇಶ್ ಹಾಗೂ ಅಭಿಷೇಕ್ ಅವರು ಜಿಲ್ಲಾ ಪೊಲೀಸ್ ಕಚೇರಿಗೆ ತೆರಳಿ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಅಧಿಕೃತವಾಗಿ ಹಸ್ತಾಂತರಿಸಿದರು. ಅಸೋಸಿಯೇಷನ್ ಸದಸ್ಯರ ಈ ಜಾಗೃತ ಕ್ರಮವನ್ನು ಪೊಲೀಸ್ ಇಲಾಖೆ ಮೆಚ್ಚುಗೆ ವ್ಯಕ್ತಪಡಿಸಿದೆ.


ಹಸ್ತಾಂತರಿಸಲಾದ ಮೊಬೈಲ್‌ಗಳ ಮೂಲ ಮಾಲೀಕರನ್ನು ಕೇಂದ್ರ ಸರ್ಕಾರದ CEIR ಪೋರ್ಟಲ್ ಮೂಲಕ ಪತ್ತೆಹಚ್ಚಿ, ಕಾನೂನು ಪ್ರಕ್ರಿಯೆ ಅನುಸರಿಸಿ ಮೂಲ ವಾರಸುದಾರರಿಗೆ ಮರಳಿ ನೀಡಲಾಗುವುದು ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ತಿಳಿಸಿದ್ದಾರೆ. ಕಳೆದುಹೋದ ಅಥವಾ ಕಳುವಾದ ಮೊಬೈಲ್‌ಗಳನ್ನು ಪತ್ತೆಹಚ್ಚುವಲ್ಲಿ CEIR ಪೋರ್ಟಲ್ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದೂ ಅವರು ಮನವಿ ಮಾಡಿದ್ದಾರೆ.


ಇದೇ ವೇಳೆ ಸಾರ್ವಜನಿಕರು ಹಾಗೂ ಮೊಬೈಲ್ ಅಂಗಡಿ ಮಾಲೀಕರಿಗೆ ಎಚ್ಚರಿಕೆಯ ಸಂದೇಶ ನೀಡಿರುವ ಎಸ್‌ಪಿ ಹರಿರಾಂ ಶಂಕರ್, “ಅಪರಿಚಿತ ವ್ಯಕ್ತಿಗಳು ಮೊಬೈಲ್ ಮಾರಾಟಕ್ಕೆ ಬಂದಲ್ಲಿ ಮೊದಲು ಸಂಚಾರ್ ಸಾಥಿ ಆಪ್‌ನಲ್ಲಿ ಪರಿಶೀಲನೆ ನಡೆಸಬೇಕು. ಮೊಬೈಲ್ ಪರಿಶೀಲನೆಗಾಗಿ ಅಂಗಡಿ ಮಾಲೀಕರು ತಮ್ಮ ಸ್ವಂತ ಸಿಮ್ ಕಾರ್ಡ್ ಬಳಸದೇ, ಮೊಬೈಲ್ ನೀಡಿದ ಗ್ರಾಹಕರ ಸಿಮ್ ಕಾರ್ಡ್‌ನನ್ನೇ ಬಳಸಬೇಕು. ಸೂಕ್ತ ದಾಖಲೆಗಳಿಲ್ಲದ ಮೊಬೈಲ್‌ಗಳನ್ನು ಖರೀದಿಸುವುದು ಅಥವಾ ಸ್ವೀಕರಿಸುವುದನ್ನು ತಪ್ಪಿಸಬೇಕು. ಯಾವುದೇ ಅನುಮಾನಾಸ್ಪದ ಮಾಹಿತಿ ಕಂಡುಬಂದಲ್ಲಿ ತಕ್ಷಣ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು” ಎಂದು ಸಲಹೆ ನೀಡಿದ್ದಾರೆ.

About the Author

Prajwal is the Founder and Editor of Suddilive.com. He covers Karnataka news, politics, education, employment, sports, technology, and current affairs. He is committed to providing accurate, timely, and reliable information through responsible digital journalism.

📢 SUDDI LIVE WhatsApp Community

ತಾಜಾ ಸುದ್ದಿಗಳು, ಬ್ರೇಕಿಂಗ್ ನ್ಯೂಸ್, ರಾಜಕೀಯ, ಕ್ರೀಡೆ, ಮನರಂಜನೆ ಹಾಗೂ ಸ್ಥಳೀಯ ಸುದ್ದಿಗಳಿಗಾಗಿ SUDDI LIVE WhatsApp Community ಸೇರಿ.

📲 Join WhatsApp Community

📢 SUDDI LIVE Facebook Page

ತಾಜಾ ಸುದ್ದಿಗಳು, ಬ್ರೇಕಿಂಗ್ ನ್ಯೂಸ್, ರಾಜಕೀಯ, ಕ್ರೀಡೆ, ಮನರಂಜನೆ ಹಾಗೂ ಸ್ಥಳೀಯ ಸುದ್ದಿಗಳಿಗಾಗಿ SUDDI LIVE Facebook ಪೇಜ್ ಅನ್ನು Follow ಮಾಡಿ.

👍 Follow SUDDI LIVE

ನಿಮ್ಮ ಬೆಂಬಲವೇ ನಮ್ಮ ಶಕ್ತಿ ❤️

Tags:

Post a Comment

0 Comments

Post a Comment (0)
3/related/default