ಮುನಿರಾಬಾದ್ ಸಮೀಪದ ತುಂಗಭದ್ರಾ ನದಿಯ ಸೇತುವೆಯ ಮೇಲೆ ಇಂದು (ಮೇ 15) ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಟ್ರ್ಯಾಕ್ಟರ್ ನಿಯಂತ್ರಣ ತಪ್ಪಿ ಸೇತುವೆಯ ರಕ್ಷಣಾ ಗೋಡೆಯಿಗೆ ಡಿಕ್ಕಿ ಹೊಡೆದು ನೇರವಾಗಿ ಕೆಳಗೆ ಬಿದ್ದಿದೆ. ಅತಿ ವೇಗದಲ್ಲಿ ಸಾಗುತ್ತಿದ್ದ ಟ್ರ್ಯಾಕ್ಟರ್ ಚಾಲಕನ ನಿಯಂತ್ರಣ ಕಳೆದುಕೊಂಡ ಪರಿಣಾಮ ಈ ದುರಂತ ಸಂಭವಿಸಿದೆ ಎಂದು ಪ್ರಾಥಮಿಕವಾಗಿ ತಿಳಿದುಬಂದಿದೆ.
ಈ ಭೀಕರ ಅಪಘಾತದಲ್ಲಿ ಎಂಟು ಮಂದಿ ಸ್ಥಳದಲ್ಲೇ ಸಾವನ್ನಪ್ಪಿರುವುದು ದೃಢಪಟ್ಟಿದ್ದು, ಮೃತರ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಪಘಾತದ ಸಮಯದಲ್ಲಿ ಟ್ರ್ಯಾಕ್ಟರ್‌ನಲ್ಲಿ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರು ಇದ್ದರು ಎಂದು ತಿಳಿದುಬಂದಿದ್ದು, ವಾಹನ ಸೇತುವೆಯಿಂದ ಕೆಳಗೆ ಉರುಳಿದ ರಭಸಕ್ಕೆ ಹಲವರು ಟ್ರ್ಯಾಕ್ಟರ್ ಅಡಿಯಲ್ಲಿ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಗಾಯಗೊಂಡವರನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಗಿದ್ದು, ಅವರಲ್ಲಿ ಕೆಲವರ ಆರೋಗ್ಯ ಸ್ಥಿತಿ ಅತ್ಯಂತ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಟ್ರ್ಯಾಕ್ಟರ್ ಅಡಿಯಲ್ಲಿ ಸಿಲುಕಿದ್ದವರನ್ನು ಹೊರತೆಗೆಯುವ ಕಾರ್ಯ ರಕ್ಷಣಾ ಸಿಬ್ಬಂದಿ ಮತ್ತು ಸ್ಥಳೀಯರ ಸಹಾಯದಿಂದ ತೀವ್ರವಾಗಿ ಮುಂದುವರಿದಿದ್ದು, ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಚುರುಕುಗೊಂಡಿದೆ. ಮೃತರ ಕುಟುಂಬಸ್ಥರ ಆಕ್ರಂದನ ಸ್ಥಳದಲ್ಲೇ ಹೃದಯವಿದ್ರಾವಕ ದೃಶ್ಯವನ್ನು ಸೃಷ್ಟಿಸಿದೆ.
ಸದ್ಯದ ಮಾಹಿತಿಯ ಪ್ರಕಾರ, ಈ ಘಟನೆಯಲ್ಲಿ ಮೃತಪಟ್ಟವರೆಲ್ಲರೂ ಒಂದೇ ಕುಟುಂಬಕ್ಕೆ ಸೇರಿದವರು ಎಂಬುದು ತಿಳಿದುಬಂದಿದ್ದು, ಒಟ್ಟು ಹತ್ತಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆರಂಭದಲ್ಲಿ ಅತಿ ವೇಗ ಹಾಗೂ ಚಾಲಕನ ಅಜಾಗರೂಕತೆಯೇ ಕಾರಣ ಎಂದು ಶಂಕಿಸಲಾಗಿದ್ದರೂ, ನಂತರದ ಮಾಹಿತಿ ಪ್ರಕಾರ ಟ್ರ್ಯಾಕ್ಟರ್‌ಗೆ ಹಿಂಬದಿಯಿಂದ ಟ್ಯಾಂಕರ್ ಡಿಕ್ಕಿ ಹೊಡೆದಿರುವ ಸಾಧ್ಯತೆಯೂ ಉಂಟಾಗಿದೆ ಎಂದು ತಿಳಿದುಬಂದಿದೆ.
ಪೊಲೀಸರ ತನಿಖೆಯಲ್ಲಿ ಮೃತರು ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಮರ್ಲಾಯನಹಳ್ಳಿ ಗ್ರಾಮದವರು ಎಂದು ಗುರುತಿಸಲಾಗಿದೆ. ಈ ಕುಟುಂಬವು ಹುಲಿಗೆಮ್ಮ ದೇವಸ್ಥಾನಕ್ಕೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಮೃತದೇಹಗಳನ್ನು ಹೊಸಪೇಟೆ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಪೊಲೀಸರು ಪ್ರಕರಣದ ಕುರಿತು ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.
