ಬೆಂಗಳೂರು, ಮೇ 27: ರಾಜ್ಯ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದ್ದು, ಕರ್ನಾಟಕ ಕಾಂಗ್ರೆಸ್ ನಾಯಕತ್ವ ಬದಲಾವಣೆಗೆ ಕೊನೆಗೂ ಸ್ಪಷ್ಟ ರೂಪ ಸಿಕ್ಕಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಳೆ (ಗುರುವಾರ) ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ಅಧಿಕೃತವಾಗಿ ರಾಜೀನಾಮೆ ಸಲ್ಲಿಸಲಿದ್ದಾರೆ ಎಂಬ ಮಾಹಿತಿ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ನಾಳೆ ಬೆಳಗ್ಗೆ 10.30ಕ್ಕೆ ರಾಜಭವನಕ್ಕೆ ಭೇಟಿ ನೀಡಿ ರಾಜ್ಯಪಾಲರನ್ನು ಭೇಟಿಯಾಗಲು ಮುಖ್ಯಮಂತ್ರಿ ಕಚೇರಿಯಿಂದ ಅಧಿಕೃತವಾಗಿ ಸಮಯ ಕೋರಲಾಗಿದೆ ಎಂದು ತಿಳಿದುಬಂದಿದೆ.
ಇದಕ್ಕೂ ಮುನ್ನ ದೆಹಲಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ನಡೆಸಿದ ಸುದೀರ್ಘ ಮ್ಯಾರಥಾನ್ ಸಭೆ ರಾಜ್ಯ ರಾಜಕೀಯದ ದಿಕ್ಕನ್ನೇ ಬದಲಿಸಿದಂತಾಗಿದೆ. ಸುಮಾರು ಏಳು ಗಂಟೆಗಳ ಕಾಲ ನಡೆದ ಸಭೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರೊಂದಿಗೆ ಸಿದ್ದರಾಮಯ್ಯ ಅವರು ಒನ್-ಟು-ಒನ್ ಚರ್ಚೆ ನಡೆಸಿದ್ದು, ಅಧಿಕಾರ ಹಂಚಿಕೆ ಸೂತ್ರದ ಅನುಸಾರ ಮುಖ್ಯಮಂತ್ರಿ ಸ್ಥಾನ ತ್ಯಜಿಸಲು ಸಮ್ಮತಿ ಸೂಚಿಸಿದ್ದಾರೆ ಎನ್ನಲಾಗಿದೆ. ಈ ಬೆಳವಣಿಗೆ ಕಾಂಗ್ರೆಸ್ ಒಳವಲಯದಲ್ಲಿ ಭಾರೀ ಚಟುವಟಿಕೆಗೆ ಕಾರಣವಾಗಿದ್ದು, ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಬಹುತೇಕ ಖಚಿತವಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ದೆಹಲಿ ಸಭೆಯ ಬಳಿಕ ಬೆಂಗಳೂರಿಗೆ ಮರಳಿದ ತಕ್ಷಣವೇ ಸಿದ್ದರಾಮಯ್ಯ ಅವರು ರಾಜಕೀಯ ಚಟುವಟಿಕೆಗಳನ್ನು ವೇಗಗೊಳಿಸಿದ್ದಾರೆ. ನಾಳೆ ಬೆಳಗ್ಗೆ ತಮ್ಮ ಅಧಿಕೃತ ನಿವಾಸದಲ್ಲಿ ಎಲ್ಲಾ ಸಚಿವರಿಗೆ ವಿಶೇಷ ಉಪಾಹಾರ ಕೂಟವನ್ನು ಆಯೋಜಿಸಿದ್ದು, ವೈಯಕ್ತಿಕವಾಗಿ ಆಹ್ವಾನ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಉಪಾಹಾರ ಸಭೆಯಲ್ಲಿ ಮುಂದಿನ ರಾಜಕೀಯ ಬೆಳವಣಿಗೆಗಳು, ನಾಯಕತ್ವ ಬದಲಾವಣೆ ಮತ್ತು ಸರ್ಕಾರದ ಮುಂದಿನ ನಡೆ ಕುರಿತು ಮಹತ್ವದ ಚರ್ಚೆಗಳು ನಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಇನ್ನೊಂದೆಡೆ, ದೆಹಲಿಯಿಂದ ಗುರುವಾರ ಮುಂಜಾನೆ ಬೆಂಗಳೂರಿಗೆ ಆಗಮಿಸಲಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೂಡ ಉಪಾಹಾರ ಕೂಟದಲ್ಲಿ ಭಾಗವಹಿಸಲಿದ್ದಾರೆ. ಮುಖ್ಯಮಂತ್ರಿ ಸ್ಥಾನ ಬದಲಾವಣೆಯ ವಿಚಾರದಲ್ಲಿ ಡಿ.ಕೆ. ಶಿವಕುಮಾರ್ ಹೆಸರು ಪ್ರಮುಖವಾಗಿ ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಅವರ ಭಾಗವಹಿಸುವಿಕೆ ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ. ಕಾಂಗ್ರೆಸ್ ಹೈಕಮಾಂಡ್ ಸೂಚನೆಯಂತೆ ಮುಂದಿನ ರಾಜಕೀಯ ನಿರ್ಧಾರಗಳು ಕೈಗೊಳ್ಳಲಾಗುವ ಸಾಧ್ಯತೆ ಇದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಸಿಎಂ ರಾಜೀನಾಮೆ ವಿಚಾರ ಬಹಿರಂಗವಾಗುತ್ತಿದ್ದಂತೆ ಸಿದ್ದರಾಮಯ್ಯ ಅವರ ಸರ್ಕಾರಿ ನಿವಾಸ ರಾಜಕೀಯ ನಾಯಕರ ಭೇಟಿ ಕೇಂದ್ರವಾಗಿ ಮಾರ್ಪಟ್ಟಿದೆ. ಆಪ್ತ ಸಚಿವರು ಹಾಗೂ ಹಲವು ಶಾಸಕರು ಸಿಎಂ ನಿವಾಸಕ್ಕೆ ದೌಡಾಯಿಸಿ ಸುದೀರ್ಘ ಚರ್ಚೆ ನಡೆಸುತ್ತಿದ್ದಾರೆ. ಸಚಿವರಾದ ಜಮೀರ್ ಅಹ್ಮದ್ ಖಾನ್, ಎಂ.ಸಿ. ಸುಧಾಕರ್, ಡಾ. ಹೆಚ್.ಸಿ. ಮಹದೇವಪ್ಪ ಹಾಗೂ ಶಾಸಕ ಕೆ.ಎಂ. ಶಿವಲಿಂಗೇಗೌಡ ಸೇರಿದಂತೆ ಅನೇಕ ನಾಯಕರು ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮುಂದಿನ ರಾಜಕೀಯ ಕಾರ್ಯತಂತ್ರಗಳ ಕುರಿತು ಸಮಾಲೋಚನೆ ನಡೆಸಿದ್ದಾರೆ.
ಗುರುವಾರ ಬೆಳಗ್ಗೆ ನಡೆಯಲಿರುವ ಉಪಾಹಾರ ಕೂಟ ಮುಗಿದ ತಕ್ಷಣವೇ ಸಿದ್ದರಾಮಯ್ಯ ಅವರು ರಾಜಭವನಕ್ಕೆ ತೆರಳಿ ರಾಜ್ಯಪಾಲರಿಗೆ ತಮ್ಮ ರಾಜೀನಾಮೆ ಪತ್ರ ಸಲ್ಲಿಸಲಿದ್ದಾರೆ ಎನ್ನಲಾಗಿದೆ. ಇದರೊಂದಿಗೆ ಕರ್ನಾಟಕ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆಯ ಪ್ರಕ್ರಿಯೆ ಅಧಿಕೃತ ಹಂತ ತಲುಪಲಿದ್ದು, ಮುಂದಿನ ಮುಖ್ಯಮಂತ್ರಿ ಯಾರು ಎಂಬ ಕುತೂಹಲ ರಾಜ್ಯ ರಾಜಕೀಯದಲ್ಲಿ ತೀವ್ರಗೊಂಡಿದೆ.
About the Author
Prajwal is the Founder and Editor of Suddilive.com. He covers Karnataka news, politics, education, employment, sports, technology, and current affairs. He is committed to providing accurate, timely, and reliable information through responsible digital journalism.
📢 SUDDI LIVE WhatsApp Community
ತಾಜಾ ಸುದ್ದಿಗಳು, ಬ್ರೇಕಿಂಗ್ ನ್ಯೂಸ್, ರಾಜಕೀಯ, ಕ್ರೀಡೆ, ಮನರಂಜನೆ ಹಾಗೂ ಸ್ಥಳೀಯ ಸುದ್ದಿಗಳಿಗಾಗಿ SUDDI LIVE WhatsApp Community ಸೇರಿ.
📲 Join WhatsApp Community📢 SUDDI LIVE Facebook Page
ತಾಜಾ ಸುದ್ದಿಗಳು, ಬ್ರೇಕಿಂಗ್ ನ್ಯೂಸ್, ರಾಜಕೀಯ, ಕ್ರೀಡೆ, ಮನರಂಜನೆ ಹಾಗೂ ಸ್ಥಳೀಯ ಸುದ್ದಿಗಳಿಗಾಗಿ SUDDI LIVE Facebook ಪೇಜ್ ಅನ್ನು Follow ಮಾಡಿ.
👍 Follow SUDDI LIVEನಿಮ್ಮ ಬೆಂಬಲವೇ ನಮ್ಮ ಶಕ್ತಿ ❤️

