}

ಮಲ್ಪೆ ಸಮುದ್ರದಲ್ಲಿ ಆಳಸಮುದ್ರ ಬೋಟು ಮುಳುಗಡೆ | 6 ಮೀನುಗಾರರ ರಕ್ಷಣೆ | 65 ಲಕ್ಷ ನಷ್ಟ

suddilive.com
By -
0

 

malpe-deep-sea-boat-sunk-near-kodibengre-fishermen-rescued

ಉಡುಪಿ: ಮಲ್ಪೆ ಮೀನುಗಾರಿಕೆ ಬಂದರಿನಿಂದ ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದ ಬೋಟೊಂದು ಕೋಡಿಬೆಂಗ್ರೆ ಸಮೀಪದ ಸಮುದ್ರದಲ್ಲಿ ಮುಳುಗಡೆಯಾದ ಘಟನೆ ಮಂಗಳವಾರ ರಾತ್ರಿ ಸಂಭವಿಸಿದೆ. ಬೋಟಿನಲ್ಲಿದ್ದ ಆರು ಮಂದಿ ಮೀನುಗಾರರನ್ನು ಮತ್ತೊಂದು ಬೋಟಿನ ಸಹಾಯದಿಂದ ಸುರಕ್ಷಿತವಾಗಿ ರಕ್ಷಿಸಲಾಗಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಆದರೆ ಬೋಟಿನಲ್ಲಿದ್ದ ಮೀನು, ಬಲೆ, ಡೀಸೆಲ್ ಸೇರಿದಂತೆ ಲಕ್ಷಾಂತರ ರೂಪಾಯಿ ಮೌಲ್ಯದ ಆಸ್ತಿಪಾಸ್ತಿ ಸಮುದ್ರಪಾಲಾಗಿದೆ.


ಮುಳುಗಡೆಯಾದ ಬೋಟು ಕಿದಿಯೂರು ಪಡುಕರೆಯ ಸಂದೀಪ್ ಕುಮಾರ್ ಅವರಿಗೆ ಸೇರಿದ ‘ಸಾಯಿದತ್ತ’ ಹೆಸರಿನ ಆಳಸಮುದ್ರ ಬೋಟಾಗಿದ್ದು, ಮೇ 17ರಂದು ರಾತ್ರಿ ಸುಮಾರು 10.30ರ ವೇಳೆಗೆ ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿತ್ತು. ಬೋಟಿನಲ್ಲಿ ಉತ್ತರ ಕನ್ನಡ ಜಿಲ್ಲೆಯ ರಾಘವೇಂದ್ರ ತಾಂಡೇಲರಾಗಿ ಕಾರ್ಯನಿರ್ವಹಿಸುತ್ತಿದ್ದು, ಕಾರ್ಮಿಕರಾಗಿ ರೋಹಿದಾಸ್ ಮೊಗೇರ, ಶಾಮ ಸುಂದರ್ ಮಲೀಕ್, ಉಜ್ವಲ್ ಮಲೀಕ್, ಸತ್ಯಜಿತ್ ಮಲೀಕ್ ಹಾಗೂ ತ್ರಿಲೇಶ್ ಭಾಸ್ಕರ್ ಇದ್ದರು.


ಮೇ 19ರಂದು ಸಂಜೆ ಸುಮಾರು 4.30ರ ವೇಳೆಗೆ ಕೋಡಿಬೆಂಗ್ರೆ ಸಮುದ್ರ ಪ್ರದೇಶದ ಸುಮಾರು 38 ಮೀಟರ್ ಆಳದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಬೋಟಿನ ಹಿಂಭಾಗದ ಅಡಿಭಾಗಕ್ಕೆ ಯಾವುದೋ ಭಾರವಾದ ವಸ್ತು ತಾಗಿದಂತ ಶಬ್ದ ಕೇಳಿಬಂದಿದೆ. ಇದರಿಂದ ಅನುಮಾನಗೊಂಡ ತಾಂಡೇಲ ರಾಘವೇಂದ್ರ ಅವರು ತಕ್ಷಣ ಬೋಟಿನ ಒಳಭಾಗಕ್ಕೆ ಇಳಿದು ಪರಿಶೀಲಿಸಿದಾಗ ಬೋಟಿನೊಳಗೆ ವೇಗವಾಗಿ ನೀರು ನುಗ್ಗುತ್ತಿರುವುದು ಗೋಚರಿಸಿದೆ.


ತಕ್ಷಣವೇ ಸಮೀಪದಲ್ಲಿದ್ದ ‘ಶ್ರೀ ಅಮ್ಮ ಭವಾನಿ’ ಬೋಟಿನ ಸಹಾಯ ಕೋರಲಾಗಿದ್ದು, ಅದರ ಸಿಬ್ಬಂದಿ ನೆರವಿಗೆ ಧಾವಿಸಿದ್ದಾರೆ. ಎರಡು ಬೋಟಿನ ಸಿಬ್ಬಂದಿ ಸೇರಿ ಬೋಟಿನೊಳಗೆ ನುಗ್ಗುತ್ತಿದ್ದ ನೀರನ್ನು ಹೊರಹಾಕಲು ಸಾಕಷ್ಟು ಪ್ರಯತ್ನಪಟ್ಟರೂ ಪರಿಸ್ಥಿತಿ ನಿಯಂತ್ರಣಕ್ಕೆ ಬರಲಿಲ್ಲ. ಅಪಾಯ ಹೆಚ್ಚುತ್ತಿರುವುದನ್ನು ಗಮನಿಸಿ ‘ಸಾಯಿದತ್ತ’ ಬೋಟಿನಲ್ಲಿದ್ದ ಎಲ್ಲಾ ಆರು ಮಂದಿ ಮೀನುಗಾರರನ್ನು ಸುರಕ್ಷಿತವಾಗಿ ‘ಶ್ರೀ ಅಮ್ಮ ಭವಾನಿ’ ಬೋಟಿಗೆ ಸ್ಥಳಾಂತರಿಸಲಾಯಿತು.


ನಂತರ ಮುಳುಗಡೆಯಾಗುತ್ತಿದ್ದ ಬೋಟನ್ನು ಕಬ್ಬಿಣದ ಕಂಬದ ಸಹಾಯದಿಂದ ಮಲ್ಪೆ ಬಂದರಿಗೆ ಎಳೆದುಕೊಂಡು ಬರುವ ಕಾರ್ಯ ಆರಂಭಿಸಲಾಯಿತು. ಆದರೆ ರಾತ್ರಿ ಸುಮಾರು 11 ಗಂಟೆಯ ವೇಳೆಗೆ ಎಳೆಯುವ ಕಾರ್ಯ ನಡೆಯುತ್ತಿದ್ದಾಗ ‘ಅಮ್ಮ ಭವಾನಿ’ ಬೋಟಿನ ಹಿಂಭಾಗದ ಕಂಬ ತುಂಡಾಗಿ ಹೋಗಿದ್ದು, ನಿಯಂತ್ರಣ ಕಳೆದುಕೊಂಡ ‘ಸಾಯಿದತ್ತ’ ಬೋಟು ಸಂಪೂರ್ಣವಾಗಿ ಸಮುದ್ರದಲ್ಲಿ ಮುಳುಗಡೆಯಾಗಿದೆ.


ಘಟನೆಯಿಂದ ಬೋಟಿನಲ್ಲಿದ್ದ ಮೀನು ಸಂಪತ್ತು, ಮೀನುಗಾರಿಕಾ ಬಲೆಗಳು, ಡೀಸೆಲ್ ಹಾಗೂ ಇತರೆ ಉಪಕರಣಗಳು ಸಮುದ್ರಪಾಲಾಗಿದ್ದು, ಸುಮಾರು 65 ಲಕ್ಷ ರೂ. ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ಘಟನೆ ಕುರಿತು ಮಲ್ಪೆ ಬಂದರು ಮತ್ತು ಸಂಬಂಧಪಟ್ಟ ಇಲಾಖೆಗಳು ಮಾಹಿತಿ ಸಂಗ್ರಹಿಸುತ್ತಿದ್ದು, ಸಮುದ್ರದಲ್ಲಿ ಬೋಟು ಮುಳುಗಲು ನಿಖರ ಕಾರಣವೇನು ಎಂಬುದರ ಕುರಿತು ಪರಿಶೀಲನೆ ಮುಂದುವರಿದಿದೆ.

About the Author

Prajwal is the Founder and Editor of Suddilive.com. He covers Karnataka news, politics, education, employment, sports, technology, and current affairs. He is committed to providing accurate, timely, and reliable information through responsible digital journalism.

📢 SUDDI LIVE WhatsApp Community

ತಾಜಾ ಸುದ್ದಿಗಳು, ಬ್ರೇಕಿಂಗ್ ನ್ಯೂಸ್, ರಾಜಕೀಯ, ಕ್ರೀಡೆ, ಮನರಂಜನೆ ಹಾಗೂ ಸ್ಥಳೀಯ ಸುದ್ದಿಗಳಿಗಾಗಿ SUDDI LIVE WhatsApp Community ಸೇರಿ.

📲 Join WhatsApp Community

📢 SUDDI LIVE Facebook Page

ತಾಜಾ ಸುದ್ದಿಗಳು, ಬ್ರೇಕಿಂಗ್ ನ್ಯೂಸ್, ರಾಜಕೀಯ, ಕ್ರೀಡೆ, ಮನರಂಜನೆ ಹಾಗೂ ಸ್ಥಳೀಯ ಸುದ್ದಿಗಳಿಗಾಗಿ SUDDI LIVE Facebook ಪೇಜ್ ಅನ್ನು Follow ಮಾಡಿ.

👍 Follow SUDDI LIVE

ನಿಮ್ಮ ಬೆಂಬಲವೇ ನಮ್ಮ ಶಕ್ತಿ ❤️

Tags:

Post a Comment

0 Comments

Post a Comment (0)
3/related/default