ತಿರುವನಂತಪುರಂ: ಸಾಮಾನ್ಯವಾಗಿ ಪ್ರತಿಯೊಂದು ರಾಜ್ಯದಲ್ಲೂ ಸ್ಥಳೀಯ ಭಾಷೆಯೇ ಆಡಳಿತ, ಶಿಕ್ಷಣ ಹಾಗೂ ಸಾರ್ವಜನಿಕ ವ್ಯವಹಾರಗಳ ಪ್ರಮುಖ ಮಾಧ್ಯಮವಾಗಿರುತ್ತದೆ. ನೆರೆಯ ಕೇರಳ ರಾಜ್ಯದಲ್ಲೂ ಮಲಯಾಳಂ ಭಾಷೆಯೇ ಪ್ರಭುತ್ವ ಹೊಂದಿದೆ. ಆದರೆ ಈ ಬಾರಿ ಕೇರಳ ವಿಧಾನಸಭೆಯಲ್ಲಿ ಕನ್ನಡದ ಘೋಷಣೆ ಮೊಳಗಿದ್ದು, ಗಡಿಭಾಗದ ಕನ್ನಡಿಗರಲ್ಲಿ ಹೆಮ್ಮೆಯ ಭಾವ ಮೂಡಿಸಿದೆ. ಕಾಸರಗೋಡು ಜಿಲ್ಲೆಯ ಮಂಜೇಶ್ವರ ಕ್ಷೇತ್ರದ ಯುಡಿಎಫ್ ಶಾಸಕ ಎ.ಕೆ.ಎಂ. ಅಶ್ರಫ್ ಅವರು ಕನ್ನಡ ಭಾಷೆಯಲ್ಲೇ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಕೇರಳದಲ್ಲಿ ಹೊಸ ಸರ್ಕಾರ ರಚನೆಯಾದ ಹಿನ್ನೆಲೆಯಲ್ಲಿ ಇಂದು ನೂತನ ಶಾಸಕರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ನಡೆಯಿತು. ಈ ವೇಳೆ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (IUML) ಪಕ್ಷದ ಶಾಸಕ ಎ.ಕೆ.ಎಂ. ಅಶ್ರಫ್ ಅವರು ವಿಧಾನಸಭೆಯ ಅಧಿವೇಶನದಲ್ಲಿ ಕನ್ನಡ ಭಾಷೆಯಲ್ಲೇ ಪ್ರಮಾಣ ವಚನ ಸ್ವೀಕರಿಸಿ ವಿಶೇಷ ಮೆಚ್ಚುಗೆಗೆ ಪಾತ್ರರಾದರು. ಮಲಯಾಳಂ ಭಾಷಿಕರಾಗಿದ್ದರೂ ಕನ್ನಡದ ಮೇಲಿನ ತಮ್ಮ ಪ್ರೀತಿ ಮತ್ತು ಗೌರವವನ್ನು ಅವರು ಈ ಮೂಲಕ ಮತ್ತೊಮ್ಮೆ ಪ್ರದರ್ಶಿಸಿದರು.
“ಎಕೆಎಂ ಅಶ್ರಫ್ ಎನ್ನುವ ನಾನು ಕೇರಳ ವಿಧಾನಸಭೆಯ ಸದಸ್ಯನಾಗಿ ಚುನಾಯಿತನಾಗಿದ್ದೇನೆ. ಕಾನೂನು ಮೂಲಕ ಸ್ಥಾಪಿತವಾಗಿರುವ ಭಾರತದ ಸಂವಿಧಾನದ ವಿಷಯದಲ್ಲಿ ನಿಜವಾದ ಶ್ರದ್ಧೆ ಮತ್ತು ನಿಷ್ಠೆ ಇಟ್ಟುಕೊಂಡಿದ್ದು, ಭಾರತದ ಸಾರ್ವಭೌಮತ್ವ ಮತ್ತು ಅಖಂಡತೆಯನ್ನು ಕಾಪಾಡುತ್ತೇನೆ. ನನ್ನ ಕರ್ತವ್ಯವನ್ನು ಪ್ರಾಮಾಣಿಕವಾಗಿ ಹಾಗೂ ಶ್ರದ್ಧೆಯಿಂದ ನಿರ್ವಹಿಸುತ್ತೇನೆ ಎಂದು ಸೃಷ್ಟಿಕರ್ತನ ಹೆಸರಿನಲ್ಲಿ ಪ್ರಮಾಣ ಮಾಡುತ್ತೇನೆ” ಎಂದು ಅವರು ಸ್ಪಷ್ಟ ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ಅಶ್ರಫ್ ಅವರು ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆಯೇ ಸದನದಲ್ಲಿದ್ದ ಸದಸ್ಯರು ಮೇಜು ತಟ್ಟಿ ಅಭಿನಂದಿಸಿದರು. ಕೇರಳ ಮುಖ್ಯಮಂತ್ರಿ ಸೇರಿದಂತೆ ಹಲವು ಸಚಿವರು ಮತ್ತು ಶಾಸಕರು ಅವರ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಗಡಿಭಾಗದ ಜನರ ಭಾಷಾ ಭಾವನೆಗೆ ಗೌರವ ಸೂಚಿಸಿರುವ ಅವರ ಕ್ರಮಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.
ಎ.ಕೆ.ಎಂ. ಅಶ್ರಫ್ ಅವರಿಗೆ ಕನ್ನಡದೊಂದಿಗೆ ಹಳೆಯ ನಂಟಿದೆ. ಕಣ್ಣೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಭಾಷೆಯಲ್ಲೇ ಪದವಿ ಶಿಕ್ಷಣ ಪೂರ್ಣಗೊಳಿಸಿರುವ ಅವರು, ಸಾರ್ವಜನಿಕ ಕಾರ್ಯಕ್ರಮಗಳಲ್ಲೂ ಕನ್ನಡದಲ್ಲಿ ಮಾತನಾಡುವುದರಿಂದಲೇ ಜನರಿಗೆ ಹೆಚ್ಚು ಹತ್ತಿರವಾಗಿದ್ದರು. ಇತ್ತೀಚಿನ ಚುನಾವಣಾ ಪ್ರಚಾರದ ಅವಧಿಯಲ್ಲೂ ಮಂಜೇಶ್ವರ ಕ್ಷೇತ್ರದ ಜನರೊಂದಿಗೆ ಕನ್ನಡದಲ್ಲೇ ಸಂವಹನ ನಡೆಸಿ ಮನೆಮಾತಾಗಿದ್ದರು.
ಮಂಜೇಶ್ವರ ಕ್ಷೇತ್ರವು ಕರ್ನಾಟಕ-ಕೇರಳ ಗಡಿಭಾಗದಲ್ಲಿರುವುದರಿಂದ ಇಲ್ಲಿ ಕನ್ನಡ ಹಾಗೂ ತುಳು ಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದಾರೆ. ಈ ಭಾಗದಲ್ಲಿ ಕನ್ನಡ ಶಾಲೆಗಳ ಉಳಿವು, ಕನ್ನಡ ಭಾಷಾ ಹಕ್ಕುಗಳ ರಕ್ಷಣೆ ಹಾಗೂ ಆಡಳಿತದಲ್ಲಿ ಕನ್ನಡ ಬಳಕೆಗೆ ಸಂಬಂಧಿಸಿದಂತೆ ಹಲವು ಹೋರಾಟಗಳು ನಡೆದಿವೆ. ಗಡಿಭಾಗದ ಕನ್ನಡಿಗರ ಆ ಭಾವನೆ ಮತ್ತು ಅಸ್ತಿತ್ವವನ್ನು ವಿಧಾನಸಭೆಯೊಳಗೆ ಪ್ರತಿಧ್ವನಿಸುವ ಕೆಲಸವನ್ನು ಅಶ್ರಫ್ ಮಾಡಿದ್ದಾರೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.
ಈ ಬಾರಿಯ ಮಂಜೇಶ್ವರ ವಿಧಾನಸಭಾ ಚುನಾವಣೆ ರಾಜ್ಯದ ಗಡಿಗಳನ್ನು ಮೀರಿ ದೇಶದಾದ್ಯಂತ ಕುತೂಹಲ ಕೆರಳಿಸಿತ್ತು. ನೆರೆಯ ಕರ್ನಾಟಕದ ಮಂಗಳೂರು ಭಾಗದಿಂದಲೂ ಹಲವು ರಾಜಕೀಯ ನಾಯಕರು ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿದ್ದರು. ಬಿಜೆಪಿ ಹಾಗೂ ಕಾಂಗ್ರೆಸ್ ಮೈತ್ರಿ ಪಕ್ಷಗಳ ನಡುವೆ ತೀವ್ರ ಪೈಪೋಟಿ ನಡೆದಿದ್ದ ಈ ಕ್ಷೇತ್ರದಲ್ಲಿ ಧಾರ್ಮಿಕ ಹಾಗೂ ಭಾವನಾತ್ಮಕ ವಿಚಾರಗಳೂ ಚುನಾವಣೆಯ ಪ್ರಮುಖ ಚರ್ಚೆಯಾಗಿದ್ದವು.
ಆದರೆ ಕೊನೆಗೆ ಸ್ಥಳೀಯ ಜನರ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾದ ಎ.ಕೆ.ಎಂ. ಅಶ್ರಫ್ ಅವರು ಭಾರಿ ಮತಗಳ ಅಂತರದಿಂದ ಗೆಲುವು ಸಾಧಿಸಿ ವಿಧಾನಸಭೆ ಪ್ರವೇಶಿಸಿದರು. ಈಗ ಕನ್ನಡ ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಗಡಿಭಾಗದ ಜನರ ಭಾಷಾ ಅಸ್ಮಿತೆಗೆ ಗೌರವ ಸೂಚಿಸಿರುವ ಅವರ ನಡೆ ಸಾಮಾಜಿಕ ಜಾಲತಾಣಗಳಲ್ಲೂ ಭಾರೀ ವೈರಲ್ ಆಗಿದ್ದು, ಕನ್ನಡಿಗರಿಂದ ವ್ಯಾಪಕ ಶ್ಲಾಘನೆ ವ್ಯಕ್ತವಾಗುತ್ತಿದೆ.
ವರದಿ: www.suddilive.com
About the Author
Prajwal is the Founder and Editor of Suddilive.com. He covers Karnataka news, politics, education, employment, sports, technology, and current affairs. He is committed to providing accurate, timely, and reliable information through responsible digital journalism.
📢 SUDDI LIVE WhatsApp Community
ತಾಜಾ ಸುದ್ದಿಗಳು, ಬ್ರೇಕಿಂಗ್ ನ್ಯೂಸ್, ರಾಜಕೀಯ, ಕ್ರೀಡೆ, ಮನರಂಜನೆ ಹಾಗೂ ಸ್ಥಳೀಯ ಸುದ್ದಿಗಳಿಗಾಗಿ SUDDI LIVE WhatsApp Community ಸೇರಿ.
📲 Join WhatsApp Community📢 SUDDI LIVE Facebook Page
ತಾಜಾ ಸುದ್ದಿಗಳು, ಬ್ರೇಕಿಂಗ್ ನ್ಯೂಸ್, ರಾಜಕೀಯ, ಕ್ರೀಡೆ, ಮನರಂಜನೆ ಹಾಗೂ ಸ್ಥಳೀಯ ಸುದ್ದಿಗಳಿಗಾಗಿ SUDDI LIVE Facebook ಪೇಜ್ ಅನ್ನು Follow ಮಾಡಿ.
👍 Follow SUDDI LIVEನಿಮ್ಮ ಬೆಂಬಲವೇ ನಮ್ಮ ಶಕ್ತಿ ❤️

