}

ಹಿಜಾಬ್ ನಿಷೇಧ ಹಿಂಪಡೆದ ಸರ್ಕಾರದ ನಿರ್ಧಾರ ಸ್ವಾಗತಿಸಿದ ಆಲಿಯಾ ಅಸ್ಸಾದಿ “ನಮ್ಮನ್ನು ಅಪರಾಧಿಗಳಂತೆ ತೋರಿಸಿದರು” – ಹಿಜಾಬ್ ವಿವಾದದ ನೆನಪು ಹಂಚಿಕೊಂಡ ಆಲಿಯಾ

suddilive.com
By -
0

hijab-ban-karnataka-alia-assadi-reaction

 ಬೆಂಗಳೂರು: ರಾಜ್ಯದಲ್ಲಿ ಹಿಜಾಬ್ ನಿಷೇಧ ಸಂಬಂಧದ ನಿಯಮವನ್ನು ಹಿಂಪಡೆಯುವ ಸರ್ಕಾರದ ನಿರ್ಧಾರವನ್ನು ಕಾನೂನು ವಿದ್ಯಾರ್ಥಿನಿ ಆಲಿಯಾ ಅಸ್ಸಾದಿ ಸ್ವಾಗತಿಸಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಹಿಜಾಬ್ ನಿಷೇಧದ ನಿರ್ಧಾರ ಹೇಗೆ ವಿದ್ಯಾರ್ಥಿನಿಯರ ಭವಿಷ್ಯಕ್ಕೆ ಹೊಡೆತ ನೀಡಿತ್ತು ಎಂಬುದನ್ನು ವಿವರಿಸಿದ್ದಾರೆ.


“ನಮ್ಮ ಶೈಕ್ಷಣಿಕ ವರ್ಷದ ಅತ್ಯಂತ ಮಹತ್ವದ ಹಂತವಾದ ದ್ವಿತೀಯ ಪಿಯುಸಿ ಪರೀಕ್ಷೆಗಳು ಆರಂಭವಾಗಲು ಕೇವಲ ಎರಡು ತಿಂಗಳು ಬಾಕಿ ಇರುವಾಗಲೇ ಉಡುಪಿಯ ನಮ್ಮ ಸರ್ಕಾರಿ ಕಾಲೇಜಿನಲ್ಲಿ ಹಿಜಾಬ್ ವಿವಾದ ಆರಂಭವಾಯಿತು. ಅಂದಿನ ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿದ್ದ ರಘುಪತಿ ಭಟ್ ಹಾಗೂ ಪ್ರಸ್ತುತ ಅಧ್ಯಕ್ಷರಾಗಿರುವ ಯಶ್ಪಾಲ್ ಸುವರ್ಣ ಅವರ ಕುಮ್ಮಕ್ಕಿನಿಂದ ರಾಜ್ಯ ಸರ್ಕಾರ ಹಿಜಾಬ್ ನಿಷೇಧದ ನಿರ್ಧಾರಕ್ಕೆ ಮುಂದಾಯಿತು” ಎಂದು ಆಲಿಯಾ ಅಸ್ಸಾದಿ ಆರೋಪಿಸಿದ್ದಾರೆ.


ಅವರು ಮುಂದುವರೆದು, “ಆ ಸಮಯದಲ್ಲಿ ನಾವು ವಿದ್ಯಾರ್ಥಿನಿಯರು ಸರ್ಕಾರದ ಮುಂದೆ ಅನೇಕ ಬಾರಿ ಮನವಿ ಮಾಡಿದ್ದೇವೆ. ಪರೀಕ್ಷೆಗಳಿಗೆ ಅವಕಾಶ ನೀಡಿ ಎಂದು ಬೇಡಿಕೊಂಡಿದ್ದೇವೆ. ಆದರೆ ಸರ್ಕಾರ ನಮ್ಮ ಮಾತು ಕೇಳುವ ಬದಲು ನಮ್ಮನ್ನು ಬೀದಿಗೆ ತಳ್ಳಿತು. ನಮ್ಮನ್ನೇ ಅಪರಾಧಿಗಳಂತೆ ತೋರಿಸುವ ಪ್ರಯತ್ನ ನಡೆಯಿತು” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.


ಅಂದಿನ ಬಿಜೆಪಿ ಸರ್ಕಾರ ರಾಜ್ಯಾದ್ಯಂತ ವಿದ್ಯಾರ್ಥಿಗಳಿಗೆ ಕೇಸರಿ ಶಾಲು ಧರಿಸಲು ಪ್ರಚೋದನೆ ನೀಡಿತ್ತು ಎಂದು ಆರೋಪಿಸಿದ ಅವರು, “ನಮ್ಮ ಕಾಲೇಜಿನಲ್ಲಿ ಆರಂಭವಾದ ನಿಯಮವನ್ನು ನಂತರ ಇಡೀ ರಾಜ್ಯಕ್ಕೆ ವಿಸ್ತರಿಸಲಾಯಿತು. ಇದರಿಂದ ಶಿಕ್ಷಣ ಸಂಸ್ಥೆಗಳಲ್ಲಿ ಧಾರ್ಮಿಕ ಧ್ರುವೀಕರಣ ಉಂಟಾಯಿತು. ಕೊನೆಗೆ ನಾವು ನ್ಯಾಯಕ್ಕಾಗಿ ನ್ಯಾಯಾಲಯದ ಮೆಟ್ಟಿಲೇರಬೇಕಾಯಿತು. ಆ ಹೋರಾಟ ಕೇವಲ ಕಾಲೇಜಿನ ವಿಚಾರವಾಗಿರದೆ, ಸುಧೀರ್ಘ ಕಾನೂನು ಹೋರಾಟವಾಗಿ ಮಾರ್ಪಟ್ಟಿತು” ಎಂದು ಹೇಳಿದ್ದಾರೆ.


ಪ್ರಸ್ತುತ ಕಾಂಗ್ರೆಸ್ ಸರ್ಕಾರದ ನಿರ್ಧಾರ ಕುರಿತು ಮಾತನಾಡಿದ ಅವರು, “ನಾವು ಪದೇ ಪದೇ ಹಿಜಾಬ್ ನಿಷೇಧವನ್ನು ಹಿಂಪಡೆಯುವಂತೆ ಸರ್ಕಾರವನ್ನು ಒತ್ತಾಯಿಸುತ್ತಿದ್ದೆವು. ಎರಡು ವರ್ಷಗಳ ನಂತರ ಈಗ ಸರ್ಕಾರ ಅವಕಾಶ ಕಲ್ಪಿಸಿರುವುದು ಸ್ವಾಗತಾರ್ಹ. ಜೊತೆಗೆ ಎಲ್ಲಾ ಧರ್ಮಗಳ ವಸ್ತ್ರ ಸಂಹಿತೆಗೆ ಅವಕಾಶ ನೀಡಿರುವುದು ಸಹ ಉತ್ತಮ ಬೆಳವಣಿಗೆ” ಎಂದು ತಿಳಿಸಿದ್ದಾರೆ.


“ಪಿಯುಸಿ ಮಟ್ಟದಲ್ಲಿ ಮಾತ್ರ ಹಿಜಾಬ್ ನಿಷೇಧದ ಸಮಸ್ಯೆ ಉಂಟಾಯಿತು. ಇತರೆ ಶಿಕ್ಷಣ ಹಂತಗಳಲ್ಲಿ ಈ ರೀತಿಯ ನಿರ್ಬಂಧ ಇರಲಿಲ್ಲ ಎಂಬುದು ವಾಸ್ತವ. ಆದ್ದರಿಂದ ಸರ್ಕಾರದ ಈ ನಿರ್ಧಾರ ಅನೇಕ ವಿದ್ಯಾರ್ಥಿನಿಯರಿಗೆ ನ್ಯಾಯ ದೊರಕಿಸಿದಂತಾಗಿದೆ” ಎಂದು ಅವರು ಹೇಳಿದ್ದಾರೆ.


ಇದೊಂದು ಕರ್ನಾಟಕದ ವಿದ್ಯಾರ್ಥಿಗಳ ಪಾಲಿಗೆ ಸಂತೋಷದ ದಿನ ಎಂದು ಹೇಳಿದ ಆಲಿಯಾ ಅಸ್ಸಾದಿ, “ಅಂದು ಪರೀಕ್ಷೆಯಿಂದ ವಂಚಿತರಾಗಿದ್ದ ವಿದ್ಯಾರ್ಥಿನಿಯರಿಗೆ ಮರುಪರೀಕ್ಷೆ ನಡೆಸಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಜೊತೆಗೆ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇರುವ ಹಿಜಾಬ್ ಪ್ರಕರಣದಲ್ಲಿ ಸರ್ಕಾರವೇ ಸಕಾರಾತ್ಮಕ ನಿಲುವು ತೆಗೆದುಕೊಂಡು ಪ್ರಕರಣವನ್ನು ಶೀಘ್ರ ಮುಕ್ತಾಯಗೊಳಿಸಬೇಕು” ಎಂದು ಸಲಹೆ ನೀಡಿದ್ದಾರೆ.


ಕೊನೆಯಲ್ಲಿ ರಾಜ್ಯ ಶಿಕ್ಷಣ ಇಲಾಖೆಗೆ ಧನ್ಯವಾದ ತಿಳಿಸಿದ ಅವರು, “ಇದು ಕೇವಲ ಹಿಜಾಬ್ ಕುರಿತ ವಿಚಾರವಲ್ಲ. ವಿದ್ಯಾರ್ಥಿಗಳ ಶಿಕ್ಷಣ ಹಕ್ಕು, ಸಂವಿಧಾನಾತ್ಮಕ ಸ್ವಾತಂತ್ರ್ಯ ಹಾಗೂ ಸಮಾನ ಅವಕಾಶಗಳ ಹೋರಾಟವಾಗಿದೆ” ಎಂದು ಹೇಳಿದ್ದಾರೆ.

About the Author

Prajwal is the Founder and Editor of Suddilive.com. He covers Karnataka news, politics, education, employment, sports, technology, and current affairs. He is committed to providing accurate, timely, and reliable information through responsible digital journalism.

📢 SUDDI LIVE WhatsApp Community

ತಾಜಾ ಸುದ್ದಿಗಳು, ಬ್ರೇಕಿಂಗ್ ನ್ಯೂಸ್, ರಾಜಕೀಯ, ಕ್ರೀಡೆ, ಮನರಂಜನೆ ಹಾಗೂ ಸ್ಥಳೀಯ ಸುದ್ದಿಗಳಿಗಾಗಿ SUDDI LIVE WhatsApp Community ಸೇರಿ.

📲 Join WhatsApp Community

📢 SUDDI LIVE Facebook Page

ತಾಜಾ ಸುದ್ದಿಗಳು, ಬ್ರೇಕಿಂಗ್ ನ್ಯೂಸ್, ರಾಜಕೀಯ, ಕ್ರೀಡೆ, ಮನರಂಜನೆ ಹಾಗೂ ಸ್ಥಳೀಯ ಸುದ್ದಿಗಳಿಗಾಗಿ SUDDI LIVE Facebook ಪೇಜ್ ಅನ್ನು Follow ಮಾಡಿ.

👍 Follow SUDDI LIVE

ನಿಮ್ಮ ಬೆಂಬಲವೇ ನಮ್ಮ ಶಕ್ತಿ ❤️

Post a Comment

0 Comments

Post a Comment (0)
3/related/default