ಬೆಂಗಳೂರು, ಮೇ 22: ಆಫ್ರಿಕಾ ಖಂಡದ ಕೆಲವು ರಾಷ್ಟ್ರಗಳಲ್ಲಿ ಎಬೋಲಾ ವೈರಸ್ (Ebola Virus) ಸೋಂಕಿನ ಭೀತಿ ಹೆಚ್ಚುತ್ತಿರುವ ಹಿನ್ನೆಲೆ ಕರ್ನಾಟಕ ಆರೋಗ್ಯ ಇಲಾಖೆ ರಾಜ್ಯಾದ್ಯಂತ ಹೈ ಅಲರ್ಟ್ ಘೋಷಿಸಿದೆ. ಭಾರತದಲ್ಲಿ ಇದುವರೆಗೆ ಯಾವುದೇ ಎಬೋಲಾ ಪ್ರಕರಣ ಪತ್ತೆಯಾಗಿಲ್ಲವಾದರೂ, ಮುನ್ನೆಚ್ಚರಿಕಾ ಕ್ರಮವಾಗಿ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಆರೋಗ್ಯ ಮಾರ್ಗಸೂಚಿಗಳನ್ನು ಜಾರಿಗೊಳಿಸಿದೆ. ಸೋಂಕು ರಾಜ್ಯಕ್ಕೆ ಹರಡದಂತೆ ತಡೆಯಲು ಆರೋಗ್ಯ ಇಲಾಖೆ ತುರ್ತು ಸಿದ್ಧತೆಯಲ್ಲಿ ತೊಡಗಿದ್ದು, ವಿಶೇಷ ಕ್ವಾರಂಟೈನ್ ಹಾಗೂ ಐಸೋಲೇಷನ್ ವ್ಯವಸ್ಥೆಗಳನ್ನು ಸಜ್ಜುಗೊಳಿಸಲಾಗಿದೆ.
ಆರೋಗ್ಯ ಇಲಾಖೆ ಮೇ 22ರಂದು ಬಿಡುಗಡೆ ಮಾಡಿರುವ ಮಾರ್ಗಸೂಚಿಗಳ ಪ್ರಕಾರ, ಎಬೋಲಾ ಪೀಡಿತ ರಾಷ್ಟ್ರಗಳಿಂದ ಬೆಂಗಳೂರಿಗೆ ಆಗಮಿಸುವ ಪ್ರಯಾಣಿಕರು ಕಡ್ಡಾಯವಾಗಿ 21 ದಿನಗಳ ಕಾಲ ಆರೋಗ್ಯ ಮೇಲ್ವಿಚಾರಣೆಯಲ್ಲಿ ಇರಬೇಕಾಗಿದೆ. ಈ ಅವಧಿಯಲ್ಲಿ ಜ್ವರ, ತಲೆನೋವು, ವಾಂತಿ, ಅತಿಸಾರ ಅಥವಾ ಇತರೆ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣವೇ ಹತ್ತಿರದ ಆಸ್ಪತ್ರೆಗೆ ಭೇಟಿ ನೀಡಿ ಪರೀಕ್ಷೆ ಮಾಡಿಸಿಕೊಳ್ಳುವಂತೆ ಸೂಚಿಸಲಾಗಿದೆ. ವಿಶೇಷವಾಗಿ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ (DRC) ಹಾಗೂ ಉಗಾಂಡಾದಿಂದ ಬರುವ ಪ್ರಯಾಣಿಕರ ಮೇಲೆ ತೀವ್ರ ನಿಗಾವಹಿಸಲಾಗುತ್ತಿದೆ.
ವರದಿ : ಸುದ್ದಿ ಲೈವ್ ಡಾಟ್ ಕಾಮ್
ಎಬೋಲಾ ವೈರಸ್ ಅತ್ಯಂತ ಅಪಾಯಕಾರಿ ಸೋಂಕುಗಳಲ್ಲೊಂದು ಎಂದು ಪರಿಗಣಿಸಲಾಗಿದ್ದು, ಇದು ಸೋಂಕಿತ ವ್ಯಕ್ತಿಯ ರಕ್ತ, ದೇಹದ ದ್ರವಗಳು, ಅಂಗಾಂಗಗಳು ಅಥವಾ ಸೋಂಕಿತ ವಸ್ತುಗಳ ನೇರ ಸಂಪರ್ಕದಿಂದ ಹರಡುತ್ತದೆ. ಕಲುಷಿತಗೊಂಡ ಬಟ್ಟೆ, ಹಾಸಿಗೆ, ಸೂಜಿ ಮತ್ತು ಸಿರಿಂಜ್‌ಗಳ ಬಳಕೆಯಿಂದಲೂ ಸೋಂಕು ಹರಡುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಸಿಬ್ಬಂದಿ, ರೋಗಿಯ ಕುಟುಂಬ ಸದಸ್ಯರು ಹಾಗೂ ಆರೈಕೆ ಮಾಡುವವರಿಗೆ ಸೋಂಕಿನ ಅಪಾಯ ಹೆಚ್ಚಿರುವುದಾಗಿ ಇಲಾಖೆ ಎಚ್ಚರಿಸಿದೆ.
ಸೋಂಕಿನ ಪ್ರಮುಖ ಲಕ್ಷಣಗಳಲ್ಲಿ ತೀವ್ರ ಜ್ವರ, ತಲೆನೋವು, ಸ್ನಾಯು ನೋವು, ಗಂಟಲು ನೋವು, ವಾಂತಿ, ಅತಿಸಾರ, ಹೊಟ್ಟೆ ನೋವು, ಕಣ್ಣು ಕೆಂಪಾಗುವುದು ಮತ್ತು ದದ್ದುಗಳು ಸೇರಿವೆ. ಗಂಭೀರ ಸ್ಥಿತಿಯಲ್ಲಿ ದೇಹದ ಒಳಾಂಗಗಳಲ್ಲಿ ರಕ್ತಸ್ರಾವ ಉಂಟಾಗುವ ಅಪಾಯವೂ ಇರುವುದರಿಂದ ಆರಂಭಿಕ ಹಂತದಲ್ಲೇ ವೈದ್ಯಕೀಯ ನೆರವು ಪಡೆಯುವುದು ಅಗತ್ಯ ಎಂದು ತಜ್ಞರು ಸಲಹೆ ನೀಡಿದ್ದಾರೆ.
ಎಬೋಲಾ ಸೋಂಕಿನ ಸಾಧ್ಯತೆಯನ್ನು ಎದುರಿಸಲು ರಾಜ್ಯ ಸರ್ಕಾರ ಬೆಂಗಳೂರಿನಲ್ಲಿ ರಾಜೀವ್ ಗಾಂಧಿ ಎದೆರೋಗಗಳ ಸಂಸ್ಥೆ (RGICD) ಯನ್ನು ವಿಶೇಷ ಐಸೋಲೇಷನ್ ಕೇಂದ್ರವಾಗಿ ಗುರುತಿಸಿದೆ. ಜೊತೆಗೆ ಎಪಿಡೆಮಿಕ್ ಡಿಸೀಸ್ ಆಸ್ಪತ್ರೆಯನ್ನು ಕ್ವಾರಂಟೈನ್ ಕೇಂದ್ರವಾಗಿ ಸಜ್ಜುಗೊಳಿಸಲಾಗಿದೆ. ಮಂಗಳೂರಿನಲ್ಲಿ ಶ್ರೀನಿವಾಸ್ ಪೋರ್ಟ್ ಆಸ್ಪತ್ರೆ (NMPA) ಹಾಗೂ ವೆನ್ಲಾಕ್ ಜಿಲ್ಲಾ ಆಸ್ಪತ್ರೆಗಳಲ್ಲಿ ಸೋಂಕಿತರಿಗೆ ಪ್ರತ್ಯೇಕ ಚಿಕಿತ್ಸಾ ಸೌಲಭ್ಯಗಳನ್ನು ಸಿದ್ಧಪಡಿಸಲಾಗಿದೆ.
ವಿದೇಶಗಳಿಂದ ಆಗಮಿಸುವ ಪ್ರಯಾಣಿಕರ ತಪಾಸಣೆಯನ್ನು ವಿಮಾನ ನಿಲ್ದಾಣಗಳಲ್ಲಿಯೇ ಕಟ್ಟುನಿಟ್ಟಾಗಿ ನಡೆಸಲಾಗುತ್ತಿದೆ. ಶಂಕಿತ ಪ್ರಕರಣಗಳ ಮಾದರಿಗಳನ್ನು ಬೆಂಗಳೂರಿನ ಎನ್‌ಐವಿ (NIV) ಮೂಲಕ ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆಗೆ ಪರೀಕ್ಷೆಗೆ ಕಳುಹಿಸಲಾಗುತ್ತದೆ. ಸೋಂಕಿನ ತ್ವರಿತ ಪತ್ತೆ ಮತ್ತು ನಿಯಂತ್ರಣಕ್ಕಾಗಿ ಆರೋಗ್ಯ ಇಲಾಖೆ ವಿಶೇಷ ನಿಗಾವ್ಯವಸ್ಥೆ ಜಾರಿಗೆ ತಂದಿದೆ.
ಇದಲ್ಲದೆ ರಾಜ್ಯದಾದ್ಯಂತ ರ್ಯಾಪಿಡ್ ರೆಸ್ಪಾನ್ಸ್ ತಂಡಗಳನ್ನು (RRT) ಸಕ್ರಿಯಗೊಳಿಸಲಾಗಿದ್ದು, ಅಗತ್ಯವಿರುವ ಪಿಪಿಇ ಕಿಟ್‌ಗಳು, ಔಷಧ ಸಂಗ್ರಹ, ರೆಫರಲ್ ಆಂಬುಲೆನ್ಸ್ ಹಾಗೂ ತುರ್ತು ವೈದ್ಯಕೀಯ ವ್ಯವಸ್ಥೆಗಳನ್ನು ಸಿದ್ಧಪಡಿಸಲಾಗಿದೆ. ಸೋಂಕು ಹರಡುವ ಪರಿಸ್ಥಿತಿ ಎದುರಾದರೆ ತಕ್ಷಣ ಕ್ರಮಕೈಗೊಳ್ಳಲು ಆರೋಗ್ಯ ಸಿಬ್ಬಂದಿಗೆ ವಿಶೇಷ ತರಬೇತಿ ಕೂಡ ನೀಡಲಾಗುತ್ತಿದೆ.
ಸಾರ್ವಜನಿಕರು ಅನಗತ್ಯವಾಗಿ ಆತಂಕಕ್ಕೊಳಗಾಗಬಾರದು ಹಾಗೂ ಕೇವಲ ಅಧಿಕೃತ ಮಾಹಿತಿಗಳನ್ನು ಮಾತ್ರ ನಂಬಬೇಕು ಎಂದು ಆರೋಗ್ಯ ಇಲಾಖೆ ಮನವಿ ಮಾಡಿದೆ. ಇತ್ತೀಚೆಗೆ ಎಬೋಲಾ ಪೀಡಿತ ರಾಷ್ಟ್ರಗಳಿಂದ ಭಾರತಕ್ಕೆ ಮರಳಿರುವವರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಎಚ್ಚರಿಕೆಯಿಂದ ಇರಬೇಕು. ಯಾವುದೇ ಲಕ್ಷಣಗಳು ಕಂಡುಬಂದರೆ ವಿಳಂಬ ಮಾಡದೆ ಸಮೀಪದ ಆರೋಗ್ಯ ಕೇಂದ್ರಕ್ಕೆ ಮಾಹಿತಿ ನೀಡುವಂತೆ ಸೂಚಿಸಲಾಗಿದೆ.
ರಾಜ್ಯ ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಮಾಹಿತಿಯ ಪ್ರಕಾರ, ಈಗಾಗಲೇ ಎಲ್ಲಾ ಜಿಲ್ಲೆಗಳ ಆರೋಗ್ಯಾಧಿಕಾರಿಗಳಿಗೆ ಎಚ್ಚರಿಕೆ ಸೂಚನೆ ನೀಡಲಾಗಿದ್ದು, ಸೋಂಕು ನಿಯಂತ್ರಣಕ್ಕೆ ಅಗತ್ಯವಿರುವ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸೋಂಕು ರಾಜ್ಯಕ್ಕೆ ಕಾಲಿಡದಂತೆ ತಡೆಯಲು ಸರ್ಕಾರ ಬಹುಮಟ್ಟದ ಆರೋಗ್ಯ ಭದ್ರತಾ ವ್ಯವಸ್ಥೆಯನ್ನು ಜಾರಿಗೊಳಿಸಿದೆ.
About the Author
Prajwal is the Founder and Editor of Suddilive.com. He covers Karnataka news, politics, education, employment, sports, technology, and current affairs. He is committed to providing accurate, timely, and reliable information through responsible digital journalism.
📢 SUDDI LIVE WhatsApp Community
ತಾಜಾ ಸುದ್ದಿಗಳು, ಬ್ರೇಕಿಂಗ್ ನ್ಯೂಸ್, ರಾಜಕೀಯ, ಕ್ರೀಡೆ, ಮನರಂಜನೆ ಹಾಗೂ ಸ್ಥಳೀಯ ಸುದ್ದಿಗಳಿಗಾಗಿ SUDDI LIVE WhatsApp Community ಸೇರಿ.
📲 Join WhatsApp Community📢 SUDDI LIVE Facebook Page
ತಾಜಾ ಸುದ್ದಿಗಳು, ಬ್ರೇಕಿಂಗ್ ನ್ಯೂಸ್, ರಾಜಕೀಯ, ಕ್ರೀಡೆ, ಮನರಂಜನೆ ಹಾಗೂ ಸ್ಥಳೀಯ ಸುದ್ದಿಗಳಿಗಾಗಿ SUDDI LIVE Facebook ಪೇಜ್ ಅನ್ನು Follow ಮಾಡಿ.
👍 Follow SUDDI LIVEನಿಮ್ಮ ಬೆಂಬಲವೇ ನಮ್ಮ ಶಕ್ತಿ ❤️

