ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಬಿಜೆಪಿ ಪಕ್ಷದೊಳಗಿನ ಅಸಮಾಧಾನ ಇದೀಗ ಬಹಿರಂಗಗೊಂಡಿದ್ದು, ಸ್ವಪಕ್ಷದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ವಿರುದ್ಧವೇ ಬಿಜೆಪಿ ಕಾರ್ಯಕರ್ತರು ಮತ್ತು ಮುಖಂಡರು ಆಕ್ರೋಶ ಹೊರಹಾಕಿರುವ ಘಟನೆ ಬೆಳಕಿಗೆ ಬಂದಿದೆ. ರಸ್ತೆ ಸಮಸ್ಯೆ ಹಾಗೂ ಸರಣಿ ಅಪಘಾತಗಳ ಬಗ್ಗೆ ಮನವಿ ಸಲ್ಲಿಸಲು ತೆರಳಿದ್ದವರಿಗೆ ಸಂಸದರು ಅವಮಾನ ಮಾಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಕುರಿತು ಮೂಲ್ಕಿ-ಮೂಡಬಿದ್ರೆ ಬಿಜೆಪಿ ಮಂಡಲ ಉಪಾಧ್ಯಕ್ಷ ಸೂರಜ್ ಜೈನ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮೂಡಬಿದಿರೆ ಸಮೀಪದ ಬನ್ನಡ್ಕ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಳೆದ ಕೆಲವು ವರ್ಷಗಳಿಂದ ಸರಣಿ ಅಪಘಾತಗಳು ನಡೆಯುತ್ತಿದ್ದು, ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದೆ. ಮಂಗಳೂರಿನಿಂದ ಕಾರ್ಕಳವನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 169ರಲ್ಲಿ ಅವೈಜ್ಞಾನಿಕ ಕಾಮಗಾರಿ ನಡೆಯುತ್ತಿದೆ ಎಂಬ ಆರೋಪ ಸಾರ್ವಜನಿಕರಿಂದ ಕೇಳಿಬರುತ್ತಿದೆ. ವಿಶೇಷವಾಗಿ ಸರ್ವಿಸ್ ರಸ್ತೆ ವ್ಯವಸ್ಥೆ ಇಲ್ಲದಿರುವುದು ಅಪಘಾತಗಳಿಗೆ ಪ್ರಮುಖ ಕಾರಣವಾಗಿದೆ ಎಂದು ಸ್ಥಳೀಯರು ದೂರಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ಎಂಟಕ್ಕೂ ಹೆಚ್ಚು ಮಂದಿ ಈ ರಸ್ತೆಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ ಎನ್ನಲಾಗಿದೆ.
ಇತ್ತೀಚಿನ ದಿನಗಳಲ್ಲಿ ಪರಿಸ್ಥಿತಿ ಮತ್ತಷ್ಟು ಗಂಭೀರಗೊಂಡಿದ್ದು, ಕೇವಲ ಮೂರು ದಿನಗಳ ಅವಧಿಯಲ್ಲೇ ನಾಲ್ಕು ಅಪಘಾತಗಳು ಸಂಭವಿಸಿದ್ದವು. ಈ ಅಪಘಾತಗಳಲ್ಲಿ ಓರ್ವ ಮಹಿಳೆ ಮೃತಪಟ್ಟ ಘಟನೆ ಜನರಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ರಸ್ತೆ ಸುರಕ್ಷತೆ ಕುರಿತು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಬಿಜೆಪಿ ಮುಖಂಡ ಸೂರಜ್ ಜೈನ್ ನೇತೃತ್ವದ ತಂಡ ಸಂಸದ ಬ್ರಿಜೇಶ್ ಚೌಟರನ್ನು ಭೇಟಿಯಾಗಲು ತೆರಳಿತ್ತು. ಆದರೆ ಈ ವೇಳೆ ಸಂಸದರಿಂದ ನಿರೀಕ್ಷಿತ ಸ್ಪಂದನೆ ಸಿಗಲಿಲ್ಲ ಎಂಬ ಆರೋಪ ಕೇಳಿಬಂದಿದೆ.
“ಅಪಘಾತಗಳಿಗೆ ಹೆದ್ದಾರಿ ಇಲಾಖೆಯ ಕಾಮಗಾರಿಯೇ ಕಾರಣ ಎಂದು ನೀವು ಹೇಗೆ ಹೇಳುತ್ತೀರಿ? ಕಾಮಗಾರಿ ಪೂರ್ಣಗೊಳ್ಳುವವರೆಗೆ ಸರ್ವಿಸ್ ರಸ್ತೆ ನಿರ್ಮಾಣ ಸಾಧ್ಯವಿಲ್ಲ. 2023ರಲ್ಲಿ ಮನವಿ ಕೊಟ್ಟಿದ್ದರೆ, ಅದನ್ನು ಸ್ವೀಕರಿಸಿದವರ ಬಳಿ ಹೋಗಿ ಕೇಳಿ. ನೀವು ಹೇಳಿದಂತೆ ಕಾಮಗಾರಿ ಮಾಡಲು ಆಗುವುದಿಲ್ಲ. ಜನರ ಪ್ರತಿಭಟನೆಗೆ ನಾನು ಹೆದರೋದಿಲ್ಲ” ಎಂದು ಸಂಸದರು ಪ್ರತಿಕ್ರಿಯೆ ನೀಡಿದರೆಂದು ಸೂರಜ್ ಜೈನ್ ಆರೋಪಿಸಿದ್ದಾರೆ. ಅಲ್ಲದೆ, ಸ್ಥಳಕ್ಕೆ ಭೇಟಿ ನೀಡುವಂತೆ ಮನವಿ ಮಾಡಿದಾಗ “ಸದ್ಯಕ್ಕೆ ಸಾಧ್ಯವಿಲ್ಲ, ಆ ಭಾಗಕ್ಕೆ ಬಂದಾಗ ನೋಡುತ್ತೇನೆ” ಎಂದು ಉತ್ತರ ನೀಡಲಾಗಿದೆ ಎಂದು ದೂರಲಾಗಿದೆ.
ಸಂಸದರ ಈ ಹೇಳಿಕೆ ಮತ್ತು ವರ್ತನೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದೆ. ಸರಣಿ ಅಪಘಾತಗಳಿಂದ ಜನರು ಈಗಾಗಲೇ ಭಯಭೀತರಾಗಿರುವ ಸಂದರ್ಭದಲ್ಲೇ ಜನಪ್ರತಿನಿಧಿಯಿಂದ ಇಂತಹ ಪ್ರತಿಕ್ರಿಯೆ ಬಂದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ರಸ್ತೆ ಸುರಕ್ಷತೆ, ಸರ್ವಿಸ್ ರಸ್ತೆ ನಿರ್ಮಾಣ ಮತ್ತು ಹೆದ್ದಾರಿ ಕಾಮಗಾರಿ ವೈಜ್ಞಾನಿಕವಾಗಿ ನಡೆಯಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಈ ಬೆಳವಣಿಗೆ ದಕ್ಷಿಣ ಕನ್ನಡ ಬಿಜೆಪಿ ವಲಯದಲ್ಲೂ ಚರ್ಚೆಗೆ ಗ್ರಾಸವಾಗಿದ್ದು, ಸ್ವಪಕ್ಷದ ಮುಖಂಡರಿಂದಲೇ ಸಂಸದರ ವಿರುದ್ಧ ಅಸಮಾಧಾನ ಹೊರಬಂದಿರುವುದು ರಾಜಕೀಯ ವಲಯದಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ. ಮುಂದಿನ ದಿನಗಳಲ್ಲಿ ಈ ವಿಚಾರ ಯಾವ ರೀತಿಯ ತಿರುವು ಪಡೆಯಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.
