ಭಟ್ಕಳದಲ್ಲಿ ಮುರಿನಕಟ್ಟೆ ಧ್ವಂಸ: ಭಾರೀ ಉದ್ವಿಗ್ನತೆ, ಪಟ್ಟಣದಲ್ಲಿ ಮೂರು ದಿನ ನಿಷೇಧಾಜ್ಞೆ ಜಾರಿ

suddilive.com
By -
0

Police deployed near the demolished Murinakatte structure in Bhatkal amid rising tension and prohibitory orders.

ಭಟ್ಕಳ, ಮೇ 25: ಕರಾವಳಿಯ ಸೂಕ್ಷ್ಮ ಪ್ರದೇಶವೆಂದೇ ಗುರುತಿಸಿಕೊಂಡಿರುವ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಮುರಿನಕಟ್ಟೆ ವಿವಾದ ಮತ್ತೆ ಭುಗಿಲೆದ್ದಿದ್ದು, ಭಾನುವಾರ ರಾತ್ರಿ ನಡೆದ ಘಟನೆ ಇಡೀ ಪಟ್ಟಣವನ್ನು ಉದ್ವಿಗ್ನ ವಾತಾವರಣಕ್ಕೆ ತಳ್ಳಿದೆ. ರಾಷ್ಟ್ರೀಯ ಹೆದ್ದಾರಿ 66ರ ಪಕ್ಕದಲ್ಲಿ ಪುನರ್ ನಿರ್ಮಾಣ ಮಾಡಲಾಗಿದ್ದ ಮುರಿನಕಟ್ಟೆಯನ್ನು ಅನ್ಯಕೋಮಿನ ಸಾವಿರಾರು ಯುವಕರು ಸೇರಿ ಧ್ವಂಸಗೊಳಿಸಿದ ಘಟನೆ ಭಾರೀ ಆತಂಕಕ್ಕೆ ಕಾರಣವಾಗಿದೆ. ಪರಿಸ್ಥಿತಿ ನಿಯಂತ್ರಣ ತಪ್ಪುವ ಸಾಧ್ಯತೆ ಕಂಡ ಹಿನ್ನೆಲೆಯಲ್ಲಿ ಭಟ್ಕಳ ಪಟ್ಟಣ ಹಾಗೂ ಜಾಲಿ ಪಂಚಾಯತ್ ವ್ಯಾಪ್ತಿಯಲ್ಲಿ ಮೇ 25ರಿಂದ ಮೇ 27ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಘಟನೆಯ ಹಿನ್ನೆಲೆ ನೋಡಿದರೆ, ರಾಷ್ಟ್ರೀಯ ಹೆದ್ದಾರಿ 66ರ ಅಗಲೀಕರಣ ಕಾಮಗಾರಿ ಆರಂಭವಾದಾಗಿನಿಂದಲೇ ಈ ಮುರಿನಕಟ್ಟೆ ವಿವಾದದ ಕೇಂದ್ರಬಿಂದುವಾಗಿತ್ತು. ನೂರಾರು ವರ್ಷಗಳ ಇತಿಹಾಸ ಹೊಂದಿದೆ ಎನ್ನಲಾದ ಈ ಸ್ಥಳಕ್ಕೆ ಸ್ಥಳೀಯರಲ್ಲಿ ಧಾರ್ಮಿಕ ಭಾವನೆಗಳೂ ಜೋಡಿಕೊಂಡಿದ್ದವು. ಹೆದ್ದಾರಿ ವಿಸ್ತರಣೆ ಕಾಮಗಾರಿಗಾಗಿ ಈ ಭಾಗವನ್ನು ತೆರವುಗೊಳಿಸಲಾಗಿದ್ದರೂ, ಬಳಿಕ ಅದನ್ನು ಮರುನಿರ್ಮಾಣ ಮಾಡಬೇಕೇ ಅಥವಾ ಸಂಪೂರ್ಣವಾಗಿ ತೆರವುಗೊಳಿಸಬೇಕೇ ಎಂಬ ವಿಚಾರದಲ್ಲಿ ಎರಡು ಸಮುದಾಯಗಳ ನಡುವೆ ಭಿನ್ನಾಭಿಪ್ರಾಯಗಳು ಮುಂದುವರಿದಿದ್ದವು.

ಒಂದು ವರ್ಗದವರು ಇದು ಅತಿಕ್ರಮಿತ ಜಾಗವಾಗಿದ್ದು, ಮತ್ತೆ ಯಾವುದೇ ನಿರ್ಮಾಣಕ್ಕೆ ಅವಕಾಶ ಕೊಡಬಾರದು ಎಂದು ಒತ್ತಾಯಿಸುತ್ತಿದ್ದರೆ, ಹಿಂದೂ ಸಂಘಟನೆಗಳು ಇದೇ ಸ್ಥಳದಲ್ಲಿ ಮರುನಿರ್ಮಾಣ ಮಾಡಲೇಬೇಕು ಎಂದು ಪಟ್ಟು ಹಿಡಿದಿದ್ದವು. ಹಲವು ಬಾರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಸ್ಪಷ್ಟ ಕ್ರಮ ಕೈಗೊಳ್ಳದ ಹಿನ್ನೆಲೆ, ಭಾನುವಾರ ಬೆಳಿಗ್ಗೆ ಹಿಂದೂ ಸಂಘಟನೆಗಳ ನೂರಾರು ಕಾರ್ಯಕರ್ತರು ಸೇರಿ ಪೂಜೆ ಸಲ್ಲಿಸಿ ಮುರಿನಕಟ್ಟೆಯನ್ನು ಮರುನಿರ್ಮಾಣ ಮಾಡಿದ್ದರು.

ಸಾರ್ವಜನಿಕ ಸ್ಥಳದಲ್ಲಿ ಕಟ್ಟೆ ನಿರ್ಮಾಣವಾಗುತ್ತಿದ್ದಂತೆ ಸ್ಥಳೀಯ ನಿವಾಸಿಗಳು ಹಾಗೂ ಮಜ್ಜಿಸೆ ಇಸ್ಲಾಹ್ ವ ತಂಝೀಮ್ ಸಂಘಟನೆಯ ಮುಖಂಡರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ವಿಷಯ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಉಪವಿಭಾಗಾಧಿಕಾರಿ ಜೆ. ಮಹೇಶ್ ನೇತೃತ್ವದಲ್ಲಿ ಶಾಂತಿ ಸಭೆ ನಡೆಸಲಾಯಿತು. ಸಭೆಯಲ್ಲಿ ಅಧಿಕಾರಿಗಳು ಇದು ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಯ ಅತಿಕ್ರಮಿತ ಜಾಗ ಎಂದು ಸ್ಪಷ್ಟಪಡಿಸಿದ್ದರು. ಆರಂಭದಲ್ಲಿ ಎರಡೂ ಪಾಳಯಗಳು ಮಾತುಕತೆಗೆ ಸಮ್ಮತಿ ಸೂಚಿಸಿದರೂ, ರಾತ್ರಿ ವೇಳೆಗೆ ಪರಿಸ್ಥಿತಿ ಸಂಪೂರ್ಣ ಬದಲಾಗಿತು.

ಭಾನುವಾರ ರಾತ್ರಿ ಸಾವಿರಾರು ಯುವಕರು ಸ್ಥಳದಲ್ಲಿ ಜಮಾಯಿಸಿ ಘೋಷಣೆಗಳನ್ನು ಕೂಗುತ್ತಾ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಲು ಮುಂದಾದರು. ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಹಾಗೂ ಡಿವೈಎಸ್ಪಿ ಗಿರೀಶ್ ಸ್ಥಳಕ್ಕೆ ಧಾವಿಸಿ ಪ್ರತಿಭಟನಾಕಾರರ ಜೊತೆ ಮಾತುಕತೆ ನಡೆಸಿದರು. ಆದರೆ ಮಾತುಕತೆ ನಡೆಯುತ್ತಿದ್ದ ನಡುವೆಯೇ ಕೆಲ ಯುವಕರು ಪೊಲೀಸರ ಎದುರೇ ಕಬ್ಬಿಣದ ಸಲಾಕೆಗಳನ್ನು ಬಳಸಿ ಮುರಿನಕಟ್ಟೆಯ ಭಾಗವನ್ನು ಧ್ವಂಸಗೊಳಿಸಿದ್ದಾರೆ ಎಂದು ತಿಳಿದುಬಂದಿದೆ.

ಈ ಘಟನೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಭಟ್ಕಳ ಸೇರಿದಂತೆ ಕರಾವಳಿ ಭಾಗದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಹೆಚ್ಚುವರಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದ್ದು, ಪ್ರಮುಖ ರಸ್ತೆಗಳಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರು ಗಸ್ತು ಹೆಚ್ಚಿಸಿದ್ದು, ಪರಿಸ್ಥಿತಿಯನ್ನು ನಿಗಾ ವಹಿಸಲಾಗುತ್ತಿದೆ.

ಇದೀಗ ಭಟ್ಕಳ ಪಟ್ಟಣ ಮತ್ತು ಜಾಲಿ ಪಂಚಾಯತ್ ವ್ಯಾಪ್ತಿಯಲ್ಲಿ ಐದಕ್ಕಿಂತ ಹೆಚ್ಚು ಜನರು ಗುಂಪುಗೂಡುವುದನ್ನು ನಿಷೇಧಿಸಲಾಗಿದೆ. ಮೆರವಣಿಗೆ, ಸಭೆ, ಪ್ರತಿಭಟನೆ ಸೇರಿದಂತೆ ಸಾರ್ವಜನಿಕ ಸಮಾವೇಶಗಳಿಗೆ ತಾತ್ಕಾಲಿಕ ನಿರ್ಬಂಧ ವಿಧಿಸಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಪೋಸ್ಟ್‌ಗಳನ್ನು ಹರಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ಘಟನೆಯ ಬಳಿಕ ಎರಡೂ ಸಮುದಾಯದ ಮುಖಂಡರೊಂದಿಗೆ ಜಿಲ್ಲಾಡಳಿತ ಮತ್ತೆ ಶಾಂತಿ ಸಭೆ ನಡೆಸಲು ಮುಂದಾಗಿದ್ದು, ಉದ್ವಿಗ್ನತೆ ತಗ್ಗಿಸಲು ಪ್ರಯತ್ನಗಳು ಮುಂದುವರಿದಿವೆ. ಭಟ್ಕಳದಲ್ಲಿ ಈಗಾಗಲೇ ಸೂಕ್ಷ್ಮ ಪರಿಸ್ಥಿತಿ ಇರುವುದರಿಂದ, ಯಾವುದೇ ವದಂತಿಗಳಿಗೆ ಕಿವಿಗೊಡಬಾರದು ಹಾಗೂ ಶಾಂತಿ ಕಾಪಾಡುವಂತೆ ಜಿಲ್ಲಾಡಳಿತ ಸಾರ್ವಜನಿಕರಲ್ಲಿ ಮನವಿ ಮಾಡಿದೆ.


Tags:

Post a Comment

0 Comments

Post a Comment (0)
3/related/default