ಬೆಳ್ತಂಗಡಿ, ಮೇ 19: ಬೆಳ್ತಂಗಡಿ ನಗರದಲ್ಲಿ ರಾತ್ರೋರಾತ್ರಿ ಸರಣಿ ಕಳ್ಳತನ ನಡೆದಿದ್ದು, ವಕೀಲರ ಕಚೇರಿಗಳು, ಹೋಟೆಲ್‌ಗಳು ಹಾಗೂ ವ್ಯಾಪಾರ ಮಳಿಗೆಗಳನ್ನು ಗುರಿಯಾಗಿಸಿಕೊಂಡ ಕಳ್ಳರು ಲಕ್ಷಾಂತರ ರೂಪಾಯಿ ನಗದು ದೋಚಿ ಪರಾರಿಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಘಟನೆ ಮೇ 18ರ ರಾತ್ರಿ ನಡೆದಿರುವುದಾಗಿ ತಿಳಿದುಬಂದಿದೆ.
ನಗರದ ಕೋರ್ಟ್ ರಸ್ತೆಯಲ್ಲಿರುವ ಧರ್ಮಶ್ರೀ ಬಿಲ್ಡಿಂಗ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಸಮೃದ್ಧಿ ಎಂಟರ್ಪ್ರೈಸಸ್‌ಗೆ ನುಗ್ಗಿದ ಕಳ್ಳರು ಸುಮಾರು 1.50 ಲಕ್ಷ ರೂ. ನಗದು ಕಳವು ಮಾಡಿರುವುದಾಗಿ ತಿಳಿದುಬಂದಿದೆ. ಕಳ್ಳರು ಕಚೇರಿಯಲ್ಲಿದ್ದ ಸಿಸಿ ಕ್ಯಾಮೆರಾವನ್ನು ಹಾನಿಗೊಳಿಸಿ, ಅದರ ಮೆಮೊರಿ ಕಾರ್ಡ್‌ನ್ನೂ ತೆಗೆದುಕೊಂಡು ಪರಾರಿಯಾಗಿರುವುದು ಘಟನೆಗೆ ಮತ್ತಷ್ಟು ಸಂಶಯ ಹುಟ್ಟಿಸಿದೆ.
ಅದೇ ಕಟ್ಟಡದಲ್ಲಿರುವ ಮಹಮ್ಮದ್ ಹನೀಫ್ ಅವರ ಟಿ.ಎಚ್ ರಿಯಲ್ ಎಸ್ಟೇಟ್ ಕಚೇರಿ, ಕಟ್ಟಡ ಮಾಲಕರ ಕಚೇರಿ ಸೇರಿದಂತೆ ವಕೀಲರಾದ ರಾಧಾಕೃಷ್ಣ, ಉಷಾ ಎನ್.ಜಿ ಹಾಗೂ ಯತೀಶ್ ಶೆಟ್ಟಿ ಪಿ ಅವರ ಕಚೇರಿಗಳಿಗೂ ಕಳ್ಳರು ನುಗ್ಗಿರುವ ಮಾಹಿತಿ ಲಭ್ಯವಾಗಿದೆ. ಕಚೇರಿಗಳಲ್ಲಿನ ದಾಖಲೆಗಳು ಹಾಗೂ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿರುವ ಬಗ್ಗೆ ವರದಿಯಾಗಿದೆ.
ಇದೇ ವೇಳೆ, ಮೂರು ಮಾರ್ಗದ ಬಳಿ ಇರುವ ಮಾತೃಶ್ರೀ ಹೋಟೆಲ್‌ನ ಡಬ್ಬಿಯಿಂದ ಸುಮಾರು 5 ಸಾವಿರ ರೂ. ಹಾಗೂ ಡ್ರಾವರ್‌ನಲ್ಲಿದ್ದ ಇನ್ನೂ 2 ಸಾವಿರ ರೂ. ನಗದು ಕಳ್ಳತನ ಮಾಡಲಾಗಿದೆ. ಅಲ್ಲದೆ, ಶಬರಿ ಎಂಟರ್ಪ್ರೈಸಸ್‌ನಿಂದ ಸುಮಾರು 2 ಸಾವಿರ ರೂ. ದೋಚಲಾಗಿದೆ ಎಂದು ತಿಳಿದುಬಂದಿದೆ.
ಇದರ ಜೊತೆಗೆ ಜಯರಾಮ ಮಣಿಯಾಣಿ ಅವರ ವಕೀಲರ ಕಚೇರಿ, ಹಿಮಾಲಯ ಫೈನಾನ್ಸ್ ಮತ್ತು ಇನ್ವೆಸ್ಟ್ಮೆಂಟ್ ಕಚೇರಿ ಹಾಗೂ ಜಿತೇಶ್ ಕೆ ಅವರ ವಕೀಲರ ಕಚೇರಿಗೂ ಕಳ್ಳರು ನುಗ್ಗಿರುವುದು ವ್ಯಾಪಾರಸ್ಥರು ಹಾಗೂ ಸಾರ್ವಜನಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಘಟನಾ ಸ್ಥಳಗಳಿಗೆ ಬೆಳ್ತಂಗಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸುತ್ತಮುತ್ತಲಿನ ಪ್ರದೇಶಗಳ ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ಸರಣಿ ಕಳ್ಳತನದ ಹಿಂದೆ ಒಂದೇ ತಂಡದ ಕೈವಾಡವಿದೆಯೇ ಎಂಬುದರ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ನಗರದ ಪ್ರಮುಖ ವಾಣಿಜ್ಯ ಪ್ರದೇಶದಲ್ಲೇ ಇಂತಹ ಸರಣಿ ಕಳ್ಳತನ ನಡೆದಿರುವುದು ವ್ಯಾಪಾರಸ್ಥರಲ್ಲಿ ಭಯದ ವಾತಾವರಣ ಸೃಷ್ಟಿಸಿದ್ದು, ರಾತ್ರಿ ವೇಳೆ ಪೊಲೀಸ್ ಗಸ್ತು ಹೆಚ್ಚಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
