ಉಡುಪಿ ನಗರದ ನಿಟ್ಟೂರು ಸಮೀಪದ ಕೊಡಂಕೂರು ತಿರುವಿನ ಬಳಿ ಶನಿವಾರ ರಾತ್ರಿ ದಲಿತ ಮುಖಂಡ ಮುರಳಿಯವರ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ವಿವಾದವೊಂದು ಸೃಷ್ಟಿಯಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಮುರಳಿಯವರಿಗೆ ಚಿಕಿತ್ಸೆ ನೀಡಲು ನಿರಾಕರಿಸಿದ್ದಾರೆ ಎನ್ನಲಾದ ಅಜ್ಜರಕಾಡು ಜಿಲ್ಲಾ ಸರಕಾರಿ ಆಸ್ಪತ್ರೆಯ ವೈದ್ಯ ಗುರುದತ್ತ್ ಅವರನ್ನು ತಕ್ಷಣವೇ ಸೇವೆಯಿಂದ ಅಮಾನತು ಮಾಡಿ ವಜಾಗೊಳಿಸಬೇಕು ಎಂದು ಅಂಬೇಡ್ಕರ್ ಯುವಸೇನೆ ಜಿಲ್ಲಾಧ್ಯಕ್ಷ ಗಣೇಶ್ ನೆರ್ಗಿ ಹಾಗೂ ಮುಖಂಡ ಹರೀಶ್ ಸಲ್ಯಾನ್ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಈ ಕುರಿತು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಅಧಿಕೃತ ಮನವಿಯನ್ನು ಸಲ್ಲಿಸಲಾಗಿದೆ.
ಘಟನೆಯ ಹಿನ್ನೆಲೆಯ ಪ್ರಕಾರ, ಅಪರಿಚಿತ ವ್ಯಕ್ತಿಗಳ ಗುಂಪೊಂದು ಕಾರಿನೊಳಗೆ ಬಾಲಕನೊಬ್ಬನ ಮೇಲೆ ಹಲ್ಲೆ ನಡೆಸುತ್ತಿದ್ದುದನ್ನು ಕಂಡ ಮುರಳಿ ಅವರು ಅದನ್ನು ಪ್ರಶ್ನಿಸಿದ್ದರು. "ಯಾವುದೇ ಅನ್ಯಾಯವಾಗಿದ್ದರೆ ಕಾನೂನು ಕ್ರಮ ಕೈಗೊಳ್ಳಿ, ಪೊಲೀಸರಿಗೆ ದೂರು ನೀಡಿ" ಎಂದು ಕಿವಿಮಾತು ಹೇಳಿದ್ದಕ್ಕೆ ಕೆರಳಿದ ಕಾರಿನಲ್ಲಿದ್ದ ನಾಲ್ವರು ವ್ಯಕ್ತಿಗಳು ಹೊರಬಂದು ಮುರಳಿಯವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅಷ್ಟಕ್ಕೇ ನಿಲ್ಲದೆ ಮರದ ತುಂಡಿನಿಂದ ಅವರ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ್ದಾರೆ ಎಂದು ದೂರಲಾಗಿದೆ. ಈ ಘಟನೆಯಿಂದ ಮುರಳಿಯವರು ಗಂಭೀರವಾಗಿ ಗಾಯಗೊಂಡಿದ್ದರು.
ಹಲ್ಲೆಗೊಳಗಾದ ಮುರಳಿಯವರನ್ನು ಸ್ಥಳೀಯರು ಹೆಚ್ಚಿನ ಚಿಕಿತ್ಸೆಗಾಗಿ ಅಜ್ಜರಕಾಡು ಜಿಲ್ಲಾ ಸರಕಾರಿ ಆಸ್ಪತ್ರೆಗೆ ಕರೆದೊಯ್ದಾಗ, ಅಲ್ಲಿ ಕರ್ತವ್ಯದಲ್ಲಿದ್ದ ವೈದ್ಯ ಗುರುದತ್ತ್ ಅವರು ಅತ್ಯಂತ ಬೇಜವಾಬ್ದಾರಿಯಿಂದ ವರ್ತಿಸಿದ್ದಾರೆ ಎಂದು ಅಂಬೇಡ್ಕರ್ ಯುವಸೇನೆ ಆರೋಪಿಸಿದೆ. "ನಾನು ಕೇವಲ ಮದ್ದು ಕೊಡುತ್ತೇನೆ, ದಾಖಲಿಸಿಕೊಳ್ಳುವುದಿಲ್ಲ. ನನಗೆ ನ್ಯಾಯಾಲಯಕ್ಕೆ ಅಲೆಯುವ ಕೆಲಸವಿಲ್ಲ" ಎಂದು ಉಡಾಫೆಯ ಮಾತುಗಳನ್ನಾಡಿ, ಕೇವಲ ಎಂಎಲ್‌ಸಿ ದಾಖಲಿಸಿ ವಾಪಸ್ ಕಳುಹಿಸಿದ್ದಾರೆ ಎನ್ನಲಾಗಿದೆ. ಈ ಅಮಾನವೀಯ ನಡವಳಿಕೆಯನ್ನು ಪ್ರಶ್ನಿಸಲು ಹೋದ ಸಂಘಟನೆಯ ಇತರ ಮುಖಂಡರೊಂದಿಗೂ ವೈದ್ಯರು ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಜನಸಾಮಾನ್ಯರ ಜೀವ ರಕ್ಷಣೆ ಮಾಡಬೇಕಾದ ವೈದ್ಯರು ಪಾನಮತ್ತರಂತೆ ವರ್ತಿಸಿರುವುದು ವೈದ್ಯಕೀಯ ವೃತ್ತಿಗೆ ಎಸಗಿದ ಅಪಚಾರವಾಗಿದೆ ಎಂದು ಅಂಬೇಡ್ಕರ್ ಯುವಸೇನೆ ಆಕ್ರೋಶ ವ್ಯಕ್ತಪಡಿಸಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಬಡವರಿಗೆ ಮತ್ತು ತುರ್ತು ಪರಿಸ್ಥಿತಿಯಲ್ಲಿ ಬಂದವರಿಗೆ ಸೂಕ್ತ ಸ್ಪಂದನೆ ಸಿಗದಿರುವುದು ಖಂಡನೀಯವಾಗಿದ್ದು, ಈ ಕೂಡಲೇ ಸಂಬಂಧಪಟ್ಟ ವೈದ್ಯರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕು ಮತ್ತು ಅವರನ್ನು ಸೇವೆಯಿಂದ ವಜಾಗೊಳಿಸಬೇಕು ಎಂದು ಸಂಘಟನೆಯ ಪ್ರಮುಖರು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.
About the Author
Prajwal is the Founder and Editor of Suddilive.com. He covers Karnataka news, politics, education, employment, sports, technology, and current affairs. He is committed to providing accurate, timely, and reliable information through responsible digital journalism.
📢 SUDDI LIVE WhatsApp Community
ತಾಜಾ ಸುದ್ದಿಗಳು, ಬ್ರೇಕಿಂಗ್ ನ್ಯೂಸ್, ರಾಜಕೀಯ, ಕ್ರೀಡೆ, ಮನರಂಜನೆ ಹಾಗೂ ಸ್ಥಳೀಯ ಸುದ್ದಿಗಳಿಗಾಗಿ SUDDI LIVE WhatsApp Community ಸೇರಿ.
📲 Join WhatsApp Community📢 SUDDI LIVE Facebook Page
ತಾಜಾ ಸುದ್ದಿಗಳು, ಬ್ರೇಕಿಂಗ್ ನ್ಯೂಸ್, ರಾಜಕೀಯ, ಕ್ರೀಡೆ, ಮನರಂಜನೆ ಹಾಗೂ ಸ್ಥಳೀಯ ಸುದ್ದಿಗಳಿಗಾಗಿ SUDDI LIVE Facebook ಪೇಜ್ ಅನ್ನು Follow ಮಾಡಿ.
👍 Follow SUDDI LIVEನಿಮ್ಮ ಬೆಂಬಲವೇ ನಮ್ಮ ಶಕ್ತಿ ❤️

